ನರ್ಮ್ ಬಸ್‌ಗಳಲ್ಲಿ ಶಾಲಾ ಮಕ್ಕಳಿಗೆ ಉಚಿತ ಪ್ರಯಾಣ

Update: 2016-09-07 18:44 GMT

ಉಡುಪಿ, ಸೆ.7: ಕೇಂದ್ರ ಸರಕಾರದ ನರ್ಮ್ (ಅಮೃತ್) ಯೋಜನೆಯಡಿಯಲ್ಲಿ ಉಡುಪಿ ಜಿಲ್ಲೆಗೆ ಒಟ್ಟು 30 ನೂತನ ಅತ್ಯಾಧುನಿಕ ನರ್ಮ್ ಬಸ್‌ಗಳು ಮಂಜೂರಾಗಿವೆ. ಇವುಗಳಲ್ಲಿ 12 ಬಸ್‌ಗಳು ಗುರುವಾರದಿಂದ ಓಡಾಟ ಆರಂಭಿಸಲಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಂಗಳೂರು ವಿಭಾಗದ ವತಿಯಿಂದ ಇಂದು ನಗರದ ಬೀಡಿನಗುಡ್ಡೆಯ ಮಹಾತ್ಮ ಗಾಂಧಿ ಬಯಲು ರಂಗಮಂದಿರದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ನರ್ಮ್ ಬಸ್‌ಗಳ ಓಡಾಟಕ್ಕೆ ಬಲೂನು ಹಾರಿ ಬಿಡುವ ಮೂಲಕ ಹಸಿರು ನಿಶಾನೆ ತೋರಿ ಅವರು ಮಾತನಾಡುತ್ತಿದ್ದರು.
ನರ್ಮ್ ಬಸ್‌ನಲ್ಲಿ 7ನೆ ತರಗತಿವರೆಗಿನ ವಿದ್ಯಾರ್ಥಿಗಳು ಉಚಿತವಾಗಿ ಪ್ರಯಾಣಿಸ ಬಹುದು. ಪ್ರೌಢಶಾಲೆಯ ವಿದ್ಯಾರ್ಥಿಗಳು ಹತ್ತು ತಿಂಗಳಿಗೆ 600 ರೂ., ವಿದ್ಯಾರ್ಥಿನಿಯರು 400 ರೂ.ನಲ್ಲಿ ಪ್ರಯಾಣಿಸಲು ಅವಕಾಶವಿದೆ. ವಿದ್ಯಾರ್ಥಿಗಳು ಹಾಗೂ ಹಿರಿಯ ನಾಗರಿಕರ ಹಿತವನ್ನು ಗಮನದಲ್ಲಿರಿಸಿಕೊಂಡು ಈ ಬಸ್‌ಗಳನ್ನು ನಿರ್ಮಿಸಲಾಗಿದೆ ಎಂದರು.
 ಹಳೆಯ ಡಿಡಿಪಿಐ ಕಚೇರಿ ಕಾರ್ಯಾಚರಿಸುತ್ತಿದ್ದ ಸಿಟಿಬಸ್ ನಿಲ್ದಾಣ ಪಕ್ಕದ 41 ಸೆಂಟ್ಸ್ ಜಾಗ ನರ್ಮ್ ಬಸ್ ನಿಲ್ದಾಣಕ್ಕೆ ಮಂಜೂರಾಗಿದೆ. ಇಲ್ಲಿ ಶೀಘ್ರವೇ 4 ಕೋ.ರೂ. ವೆಚ್ಚದಲ್ಲಿ ಅತ್ಯಾಧುನಿಕ ಸಿಟಿಬಸ್ ನಿಲ್ದಾಣ ನಿರ್ಮಾಣಗೊಳ್ಳಲಿದೆ. ಅದೇ ರೀತಿ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕಾಗಿ ಬನ್ನಂಜೆಯ ಪಿಡಬ್ಲುಡಿಯ ಮೂರು ಎಕರೆ ಜಾಗ ಮಂಜೂರಾಗಿದ್ದು, ಇಲ್ಲಿ ಅಂತರ್ಜಿಲ್ಲಾ ಹಾಗೂ ಅಂತಾರಾಜ್ಯ ಬಸ್ ನಿಲ್ದಾಣದ ನಿರ್ಮಾಣಕ್ಕೆ ಪ್ರಥಮ ಹಂತದಲ್ಲಿ ಐದು ಕೋಟಿ ರೂ. ಮಂಜೂ ರಾಗಿದೆ ಎಂದರು. ಉಡುಪಿಗೆ ನರ್ಮ್‌ನ ಒಟ್ಟು 30 ಬಸ್‌ಗಳು ಮಂಜೂರಾಗಿದ್ದು, 28 ಬಸ್‌ಗಳು ವಿಭಾಗಕ್ಕೆ ಬಂದಿವೆ. ಇವುಗಳಲ್ಲಿ 12 ಬಸ್‌ಗಳಿಗೆ ರೂಟ್ ನಿಗದಿಯಾಗಿದ್ದು, ಇವುಗಳು ಗುರವಾರದಿಂದ ರಸ್ತೆ ಗಿಳಿಯಲಿವೆ. ಉಳಿದವುಗಳಿಗೆ ರೂಟ್ ನಿಗದಿ ಯಾದಂತೆ ಓಡಾಟ ಆರಂಭಿಸಲಿವೆ. ಜನರ ಬೇಡಿಕೆ ಇದ್ದ ಕಡೆಗಳಿಗೆ ಈ ನಗರ ಸಾರಿಗೆ ಬಸ್‌ಗಳನ್ನು ಓಡಿಸಲಾಗುವುದು ಎಂದು ಪ್ರಮೋದ್ ತಿಳಿಸಿದರು.
ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ ತಿಲಕ್, ಸಾಬೂನು ಮತ್ತು ಮಾರ್ಜಕ ನಿಯಮಿತದ ಅಧ್ಯಕ್ಷೆ ವರೋನಿಕ ಕರ್ನೆಲಿಯೊ, ವಿದ್ಯಾಂಗ ಉಪನಿರ್ದೇಶಕ ದಿವಾಕರ ಶೆಟ್ಟಿ, ಡಿಡಿಪಿಯು ಆರ್.ಬಿ.ನಾಯಕ್, ನಗರದ ಸುತ್ತಮುತ್ತಲಿನ ಶಾಲಾ-ಕಾಲೇಜುಗಳ ಪ್ರಾಂಶುಪಾಲರು ವೇದಿಕೆಯಲ್ಲಿದ್ದರು. ಮಂಗಳೂರಿನ ವಿಭಾಗೀಯ ಸಂಚಾರಾಧಿಕಾರಿ ಜೈಶಾಂತ್‌ಕುಮಾರ್, ಸಂಧ್ಯಾ ತಿಲಕ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನರಸಿಂಹ ಮೂರ್ತಿ, ನಗರಸಭಾ ಸದಸ್ಯರಾದ ಸೆಲೀನಾ ಕರ್ಕಡ, ಶಾಂತಾರಾಂ ಸಾಲ್ವಂಕರ್, ಗಣೇಶ ನೇರ್ಗಿ ಉಪಸ್ಥಿತರಿದ್ದರು. ಮಂಗಳೂರಿನ ವಿಭಾಗೀಯ ನಿಯಂ ತ್ರಣಾಧಿಕಾರಿ ವಿವೇಕಾನಂದ ಹೆಗಡೆ ಸ್ವಾಗತಿಸಿದರು. ಸತೀಶ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News