×
Ad

ಗೋಡ್ಸೆಯ ಆರೆಸ್ಸೆಸ್ ಬಂಧದ ಕುರಿತು ಆತನ ಕುಟುಂಬದಿಂದಲೇ ಸತ್ಯ ಬಹಿರಂಗ

Update: 2016-09-08 13:33 IST

ನವದೆಹಲಿ,  ಸೆ.8: ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನು ಹತ್ಯೆಗೈದಿರುವ ನಾಥೂರಾಂ ಗೋಡ್ಸೆಯನ್ನು ಆರೆಸ್ಸೆಸ್ ಉಚ್ಚಾಟಿಸಿರಲಿಲ್ಲ ಹಾಗೂ ಗೋಡ್ಸೆ ಕೂಡ ಘಟನೆಯ ನಂತರ ಸಂಘವನ್ನು ತೊರೆದಿರಲಿಲ್ಲವೆಂದು ಆತನ ಕುಟುಂಬ ಸದಸ್ಯರು ಹೇಳುತ್ತಾರೆ.
ಮಹಾತ್ಮ ಗಾಂಧಿ ಹತ್ಯೆಗೆ ಆರೆಸ್ಸೆಸ್ ಕಾರಣವೆಂಬ ತಮ್ಮ ಹೇಳಿಕೆಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಮಾನಹಾನಿ ಪ್ರಕರಣ ಎದುರಿಸುತ್ತಿರುವ ಈ ಸಂದರ್ಭದಲ್ಲಿ ಗೋಡ್ಸೆ ಕುಟುಂಬದ ಮಾತುಗಳು ಮಹತ್ವದ್ದಾಗಿವೆ.
ನಾಥೂರಾಂ ಗೋಡ್ಸೆ ಹಾಗೂ ಗೋಪಾಲ್ ಗೋಡ್ಸೆಗೆ ಸಂಬಂಧಿಸಿದ ಎಲ್ಲಾ ಲಿಖಿತ ದಾಖಲೆಗಳನ್ನು ಅವರ ಕುಟುಂಬ ಸಂರಕ್ಷಿಸಿದೆಯೆಂದೂ ಇವುಗಳಿಂದ ಆತ ನಿಷ್ಠಾವಂತ ಆರೆಸ್ಸೆಸ್ ಸದಸ್ಯನಾಗಿದ್ದರೂ ಸಂಘವು ಸಾಕಷ್ಟು ತೀವ್ರಗಾಮಿಯಾಗಿಲ್ಲವೆಂಬ ಕಾರಣಕ್ಕೆ ಭ್ರಮನಿರಸನಗೊಂಡಿದ್ದನೆಂದು ತಿಳಿಯುತ್ತದೆ ಎಂದು ನಾಥೂರಾಂ ಗೋಡ್ಸೆ ಹಾಗೂ ವೀರ ಸಾವರ್ಕರ್ ಆವರ ಸೋದರ ಮೊಮ್ಮಗ ಸತ್ಯಕಿ ಸಾವರ್ಕರ್ ಹೇಳಿದ್ದಾರೆ.
ನಾಥೂರಾಂ ಗೋಡ್ಸೆಯ ಕಿರಿಯ ಸಹೋದರ ಹಾಗೂ ಗಾಂಧಿ ಹತ್ಯೆಯಲ್ಲಿ ನಾಥೂರಾಂನೊಂದಿಗೆ ದೋಷಿಯೆಂದು ಘೋಷಿಸಲ್ಪಟ್ಟಿದ್ದ ಗೋಪಾಲ್ ಗೋಡ್ಸೆಯಮೊಮ್ಮಗನಾಗಿರುವ ಸತ್ಯಕಿ, ಸಾಫ್ಟ್ವೇರ್  ಇಂಜಿನಿಯರ್ ಆಗಿದ್ದು ವೀರ್ ಸಾವರ್ಕರ್ ಸ್ಥಾಪಿಸಿದ್ದ ಹಿಂದೂ ಮಹಾಸಭಾವನ್ನು ಪುನರುಜ್ಜೀವಗೊಳಿಸಲು ಪ್ರಯತ್ನಿಸುತ್ತಿದ್ದಾರೆ.
‘‘ನಾಥೂರಾಂ ಒಬ್ಬ ಸ್ವಯಂಸೇವಕನಾಗಿದ್ದನೆಂಬ ವಾಸ್ತವವನ್ನು ಆರೆಸ್ಸೆಸ್‌ ನಿರಾಕರಿಸಿರುವುದು ನನಗೆ ನಿಜವಾಗಿಯೂ ಆಶ್ಚರ್ಯ ತಂದಿದೆ. ಅವರು ಗಾಂಧೀಜಿ ಹತ್ಯೆಯನ್ನು ಬೆಂಬಲಿಸುವುವಿಲ್ಲವೆಂಬ ಅಂಶ ನನಗೆ ಅರ್ಥವಾಗುತ್ತದೆ, ಆದರೆ ಸತ್ಯದಿಂದ ದೂರ ಓಡಲು ಸಾಧ್ಯವಿಲ್ಲ’’ಎನ್ನುತ್ತಾರವರು.
ಆದರೆ ಗೋಡ್ಸೆ 1948ರಲ್ಲಿ ಗಾಂಧಿಯ ಹತ್ಯೆ ನಡೆಸುವ ಮೊದಲು ಸಂಘವನ್ನು ತೊರೆದಿದ್ದನೆಂದು ಆರೆಸ್ಸೆಸ್ ದೃಢವಾಗಿ ಹೇಳುತ್ತದೆ. ಗೋಡ್ಸೆ ಆರೆಸ್ಸೆಸ್ ನ ಭಾಗವಾಗಿದ್ದಿರಬಹುದು. ಆದರೆ ‘‘ಕೊಲೆಯಾದ ಸಂದರ್ಭ ಆತ ಸಂಘಟನೆಯ ಭಾಗವಾಗಿರಲಿಲ್ಲ’’ ಎಂದು ಹಿರಿಯ ಸಂಘ ನಾಯಕರೊಬ್ಬರು ಹೇಳುತ್ತಾರೆ. ‘‘ಆತ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಅತಿಯಾಗಿ ಟೀಕಿಸುತ್ತಿದ್ದ ಹಾಗೂ ಅದರೊಡನೆ ನಂಟನ್ನು ಕಡಿದುಕೊಂಡು ಬಿಟ್ಟಿದ್ದ. ಆರೆಸ್ಸೆಸ್ ನಲ್ಲಿ ಯಾರನ್ನೂ ಉಚ್ಚಾಟಿಸುವ ಪ್ರಕ್ರಿಯೆಯಿಲ್ಲ’’ಎಂದು ಅವರು ಹೇಳಿದ್ದಾರೆ.
ಆರೆಸ್ಸೆಸ್ ನಾಥೂರಾಂ ಗೋಡ್ಸೆಯನ್ನು ಪರಿತ್ಯಜಿಸಿದೆಯಲ್ಲದೆ ವೀರ್ ಸಾವರ್ಕರ್ ಅವರ ಕನಸಿನ ‘ಬಲಿಷ್ಠ ಹಿಂದೂ ಸಮಾಜ’ ನಿರ್ಮಾಣದ ವಿಚಾರವನ್ನೂ ಮರೆತಿದೆ ಎಂದು ಸತ್ಯಕಿ ಆರೋಪಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News