ಕಾಡುದಾರಿಯಲ್ಲಿ ಹತ್ತು ಕಿಮೀ ಕಾಲ್ನಡಿಗೆಯಲ್ಲೇ ಹೋಗಿ ಪಾಠ ಹೇಳುವ ಶಿಕ್ಷಕಿ ಸುಮಿತ್ರಾ ಕೋಳೂರು
ಹುಬ್ಬಳ್ಳಿ,ಸೆ.8: ಕರ್ನಾಟಕದ ಧೋಮನ್‌ಹಟ್ಟಿ ಗ್ರಾಮದ ಸರಕಾರಿ ಪ್ರೈಮರಿ ಶಾಲೆಯ ಅಧ್ಯಾಪಕಿ ಸುಮಿತ್ರಾ ಕೊಲೂರು ತನ್ನ ಮನೆಯಿಂದ ಹತ್ತು ಕಿಲೋಮೀಟರ್ ದೂರವಿರುವ ಶಾಲೆಗೆ ತಲುಪಲು ಸರಿಯಾದ ವಾಹನ ಸೌಕರ್ಯವಿಲ್ಲದ್ದರಿಂದಾಗಿ ದಿನಾಲೂ ನಡೆದು ಬರುತ್ತಿದ್ದಾರೆ. ಅದು ಕೂಡಾ ಅರಣ್ಯಪ್ರದೇಶಗಳಲ್ಲಿ ಹಾದು ಬರಬೇಕಾಗಿದೆ. ಕಳೆದ ಹತ್ತುವರ್ಷಗಳಿಂದ ಅವರು ಹೀಗೆ ನಡೆದೇ ತಾನು ಕಲಿಸುವ ಶಾಲೆಗೆ ತಲುಪುತ್ತಿದ್ದಾರೆ ಎಂದು ವರದಿಯೊಂದು ತಿಳಿಸಿದೆ. 2005ರಲ್ಲಿ ಈ ಶಾಲೆಗೆ ಸುಮಿತ್ರಾ ಶಿಕ್ಷಕಿಯಾಗಿ ನೇಮಕವಾಗಿದ್ದರು. ಮನೆಯಿಂದ ಕೆಲವು ಕಿಲೋಮೀಟರ್ ದೂರದ ಡೋರಿವರೆಗೆ ಬಸ್ಸಿದೆ. ಅಲ್ಲಿಂದ ಶಾಲೆಗೆ ತಲುಪಲು ಇವರು ನಡೆದೇ ಬರಬೇಕಾಗಿದೆ. ಇದರಲ್ಲಿ ಎರಡು ಕಿ.ಮೀ.ವರೆಗೆ ಮಾತ್ರ ಸರಿಯಾದ ರಸ್ತೆ ಇದೆ.
ನಂತರ ಕಾಡು ಪ್ರದೇಶ. ಕಾಡು ಪ್ರಾಣಿಗಳ ಹೆದರಿಕೆಯೊಂದಿಗೆ ಅವರು ಶಾಲೆಗೆ ಬಂದೇ ಬರುತ್ತಿದ್ದಾರೆ. ಮಕ್ಕಳನ್ನು ನೆನವಾಗ ಎಲ್ಲ ಹೆದರಿಕೆಯೂ ಹೋಗುತ್ತದೆ ಎಂದು ಅವರು ಹೇಳುತ್ತಾರೆ. ಮಳೆಗಾಲದ ಪ್ರಯಾಣವಂತೂ ಮತ್ತಷ್ಟು ಕಷ್ಟಕರವಾಗಿರುತ್ತದೆ. ಕೆಲವೊಮ್ಮೆ ಅವರ ಪತಿ ಡೋರಿವರೆಗೆ ಜೊತೆಯಲ್ಲಿ ಬರುತ್ತಾರೆ. ಆನಂತರ ಸುಮಿತ್ರಾ ಕಾಡಿನ ಹಾದಿಯಲ್ಲಿ ಒಬ್ಬಳೇ ನಡೆಯುತ್ತಾರೆ. ಒಂದುದಿವಸ ಅವರ ಮುಂದೆ ಚಿರತೆಯೊಂದು ಹಾಜರಾಗಿತ್ತು. ಆದರೆ ಯಾವುದೇ ಅಪಾಯ ಮಾಡದೆ ಹೊರಟು ಹೋಗಿತ್ತು ಎಂದು ಸುಮಿತ್ರಾ ಹೇಳುತ್ತಾರೆ. ಧೋಪನ್ ಹಟ್ಟಿ ಕಾಡಿನೊಳಗಿನ ಒಂದು ಪುಟ್ಟಗ್ರಾಮವಾಗಿದೆ. ಇಲ್ಲಿ 400ಕ್ಕೂ ಕಡಿಮೆ ಜನಸಂಖ್ಯೆಯಿದೆ. ಹೆಚ್ಚಿನವರ ಕಸಬು ಕೂಲಿನಾಲಿ ಮಾಡುವುದು ಆಗಿದೆ. ತಾನು ಶಾಲೆಗೆ ಬರದಿದ್ದರೆ ಅಲ್ಲಿನ ಮಕ್ಕಳ ಕಲಿಕೆ ಸ್ಥಗಿತಗೊಳ್ಳುತ್ತದೆ ಎಂದು ಸುಮಿತ್ರಾ ಟೀಚರ್ ಹೇಳುತ್ತಾರೆ.