ಪುಟಿನ್ ಒಬಾಮರಿಗಿಂತ ಉತ್ತಮ ನಾಯಕ: ಟ್ರಂಪ್

Update: 2016-09-08 14:23 GMT

ವಾಶಿಂಗ್ಟನ್, ಸೆ. 8: ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮರಿಗಿಂತ ಉತ್ತಮ ನಾಯಕ ಎಂದು ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಬುಧವಾರ ಹೇಳಿದ್ದಾರೆ.

ಟಿವಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಟ್ರಂಪ್, ಅಮೆರಿಕದ ಜಾಗತಿಕ ನಾಯಕತ್ವವನ್ನು ಮರುಗಳಿಸಲು ತಾನು ಎಲ್ಲ ರೀತಿಯಲ್ಲೂ ಸಜ್ಜಾಗಿದ್ದೇನೆ ಎಂದು ಅವರು ಹೇಳಿದರು.

ಇದೇ ಕಾರ್ಯಕ್ರಮದಲ್ಲಿ ಟ್ರಂಪ್‌ರ ಎದುರಾಳಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ಕೂಡ ಭಾಗವಹಿಸಿದ್ದರು.

ಒಬಾಮ ಮತ್ತು ಅವರ ಪ್ರಥಮ ಅಧ್ಯಕ್ಷೀಯ ಅವಧಿಯಲ್ಲಿ ವಿದೇಶ ಕಾರ್ಯದರ್ಶಿಯಾಗಿದ್ದ ಹಿಲರಿ ಕ್ಲಿಂಟನ್‌ರ ನೀತಿಗಳು ಅಮೆರಿಕದ ಜನರಲ್‌ಗಳ ಕೈಕಟ್ಟಿ ಹಾಕಿವೆ ಎಂದು ಟ್ರಂಪ್ ಆರೋಪಿಸಿದರು.

‘‘ಬರಾಕ್ ಒಬಾಮ ಮತ್ತು ಹಿಲರಿ ಕ್ಲಿಂಟನ್‌ರ ನಾಯಕತ್ವದಲ್ಲಿ ಸೇನಾಧಿಕಾರಿಗಳಿಗೆ ಯಾವುದೇ ಬೆಲೆಯಿಲ್ಲ. ದೇಶಕ್ಕೆ ಮುಜುಗರವಾಗುವಷ್ಟರ ಮಟ್ಟಿಗೆ ಅವರನ್ನು ಕಡೆಗಣಿಸಲಾಗಿದೆ ಎಂದು ನನಗನಿಸುತ್ತದೆ’’ ಎಂದು ಎನ್‌ಬಿಸಿಯ ‘ಕಮಾಂಡರ್ ಇನ್ ಚೀಫ್’ ಕಾರ್ಯಕ್ರಮದಲ್ಲಿ ಅವರು ಹೇಳಿದರು.

 ಈ ಕಾರ್ಯಕ್ರಮವನ್ನು ನ್ಯೂಯಾರ್ಕ್‌ನಲ್ಲಿ ಆಯೋಜಿಸಲಾಗಿತ್ತು ಹಾಗೂ ಇದರಲ್ಲಿ ಹಿರಿಯ ಸೇನಾಧಿಕಾರಿಗಳು ಭಾಗವಹಿಸಿದ್ದರು.

ನವೆಂಬರ್ 8ರಂದು ನಡೆಯಲಿರುವ ಚುನಾವಣೆಯಲ್ಲಿ ತಮ್ಮ ಪಕ್ಷಗಳ ಅಧಿಕೃತ ಅಭ್ಯರ್ಥಿಗಳಾಗಿ ಜುಲೈಯಲ್ಲಿ ಹೊರಹೊಮ್ಮಿದ ಬಳಿಕ, ಹಿಲರಿ ಮತ್ತು ಟ್ರಂಪ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿರುವುದು ಇದೇ ಮೊದಲ ಬಾರಿ.

ವಿದೇಶ ಕಾರ್ಯದರ್ಶಿಯಾಗಿದ್ದ ಅವಧಿಯಲ್ಲಿ ರಹಸ್ಯ ವಿಷಯಗಳ ರವಾನೆಗೆ ಖಾಸಗಿ ಇಮೇಲ್ ಸರ್ವರ್ ಬಳಸಿರುವ ಬಗ್ಗೆ ಹಿಲರಿ ಅವರನ್ನು ಪ್ರಶ್ನಿಸಲಾಯಿತು.

ಅದೇ ವೇಳೆ, ರಶ್ಯ ಅಧ್ಯಕ್ಷ ಪುಟಿನ್‌ರ ಗುಣಗಾನ ಮಾಡಿದ ಟ್ರಂಪ್, ‘‘ಅವರು ನನ್ನ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿದರೆ, ನಾನೂ ಅವರ ಬಗ್ಗೆ ಒಳ್ಳೆಯ ಮಾತುಗಳನ್ನು ಆಡುತ್ತೇನೆ’’ ಎಂದರು.

‘‘ಖಂಡಿತವಾಗಿಯೂ, ಈ ವ್ಯವಸ್ಥೆಯಲ್ಲಿ ನಮ್ಮ ಅಧ್ಯಕ್ಷರಿಗಿಂತ ಅವರು ತುಂಬಾ ಒಳ್ಳೆಯ ನಾಯಕ’’ ಎಂದು ಬಣ್ಣಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News