×
Ad

ನಾಗರಿಕ ಪರಮಾಣು ಸಹಕಾರಕ್ಕೆ ಒತ್ತು ನೀಡಿದ ಮೋದಿ, ಒಬಾಮ

Update: 2016-09-08 20:14 IST

ವಿಯಂಟಿಯಾನ್ (ಲಾವೋಸ್), ಸೆ. 8: ಪ್ರಧಾನಿ ನರೇಂದ್ರ ಮೋದಿ ಗುರುವಾರ ಇಲ್ಲಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮರನ್ನು ಭೇಟಿಯಾಗಿ ದ್ವಿಪಕ್ಷೀಯ ಭಾಗೀದಾರಿಕೆಯ ತುರ್ತು ಆದ್ಯತೆಗಳ ಬಗ್ಗೆ ಚರ್ಚೆ ನಡೆಸಿದರು. ಮಾತುಕತೆಯಲ್ಲಿ ನಾಗರಿಕ ಪರಮಾಣು ಸಹಕಾರ ಮತ್ತು ಹವಾಮಾನ ಬದಲಾವಣೆಯನ್ನು ಎದುರಿಸುವುದು ಪ್ರಮುಖವಾಗಿ ಪ್ರಸ್ತಾಪವಾಯಿತು.

‘‘ಇಲ್ಲಿ ನಡೆಯುತ್ತಿರುವ ಪೂರ್ವ ಏಶ್ಯ ಶೃಂಗಸಮ್ಮೇಳನದ ನೇಪಥ್ಯದಲ್ಲಿ, ಭಾರತ-ಅಮೆರಿಕ ಸಂಬಂಧದ ಬಗ್ಗೆ ಅಮೆರಿಕದ ಅಧ್ಯಕ್ಷರೊಂದಿಗೆ ಉತ್ತಮ ಮಾತುಕತೆ ನಡೆಸಿದೆ’’ ಎಂದು ಸಭೆಯ ಬಳಿಕ ಮೋದಿ ಟ್ವೀಟ್ ಮಾಡಿದರು.

ಇದು ಕಳೆದ ಎರಡು ವರ್ಷಗಳ ಅವಧಿಯಲ್ಲಿ ಮೋದಿ ಮತ್ತು ಒಬಾಮ ನಡುವೆ ನಡೆದ ಎಂಟನೆ ಭೇಟಿಯಾಗಿದೆ.

‘‘ಭಾರತೀಯ ಆರ್ಥಿಕತೆಗೆ ಸುಧಾರಣೆ ತರುವ ಪ್ರಧಾನಿ ಮೋದಿ ಅವರ ಉಪಕ್ರಮಗಳನ್ನು ಒಬಾಮ ಶ್ಲಾಘಿಸಿದರು. ಮುಖ್ಯವಾಗಿ, ಜಿಎಸ್‌ಟಿ ಮಸೂದೆಯು ಅಂಗೀಕಾರವಾಗಿರುವುದು ಹೆಚ್ಚಿನ ಆರ್ಥಿಕ ಚಟುವಟಿಕೆಗಳಿಗೆ ಕಾರಣವಾಗುತ್ತದೆ ಎಂಬ ವಿಶ್ವಾಸವನ್ನು ಒಬಾಮ ವ್ಯಕ್ತಪಡಿಸಿದರು’’ ಎಂದು ಮೂಲಗಳು ತಿಳಿಸಿವೆ.

 ಮಾತುಕತೆಯ ವೇಳೆ ಒಬಾಮ ಮೋದಿ ಅವರ ಉದ್ಯಮಶೀಲತೆ ಮತ್ತು ಹೊಸತನದ ಪ್ರಯತ್ನಗಳನ್ನೂ ಶ್ಲಾಘಿಸಿದರು ಹಾಗೂ ಇದು ಭಾರತದಂಥ ದೇಶದ ಹಿತದೃಷ್ಟಿಯಿಂದ ಮಹತ್ವದ್ದಾಗಿದೆ ಎಂದು ಬಣ್ಣಿಸಿದರು ಎಂದು ಅವು ಹೇಳಿದವು.

ತಾನು ಯಾವತ್ತೂ ಭಾರತದ ಸ್ನೇಹಿತನಾಗಿದ್ದೇನೆ ಹಾಗೂ ‘‘ಭಾರತದ ಪ್ರಭಾವಶಾಲಿ ಭಾಗೀದಾರನಾಗಿ ಮುಂದುವರಿಯುವೆ ಹಾಗೂ ನನ್ನಿಂದಾಗುವ ಎಲ್ಲ ನೆರವನ್ನು ನೀಡುವೆ’’ ಎಂದು ಅಮೆರಿಕದ ಅಧ್ಯಕ್ಷ ಹೇಳಿದರು.

ನಾನಿನ್ನೂ ತಾಜ್‌ಮಹಲ್ ನೋಡಿಲ್ಲ

 ಅಧಿಕಾರಾವಧಿ ಮುಗಿದ ಬಳಿಕ ಭಾರತಕ್ಕೆ ಭೇಟಿ ನೀಡುವಂತೆ ಪ್ರಧಾನಿ ಮೋದಿ ಅಮೆರಿಕದ ಅಧ್ಯಕ್ಷ ಬರಾಕ್‌ ಒಬಾಮ ಅವರನ್ನು ಈ ಸಂದರ್ಭದಲ್ಲಿ ಆಹ್ವಾನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಒಬಾಮ, ಭಾರತಕ್ಕೆ ಹೋಗುವ ಯಾವುದೇ ಅವಕಾಶವನ್ನು ಸ್ವಾಗತಿಸುವುದಾಗಿ ಹೇಳಿದರು.

‘‘ನಾನು ಮತ್ತು ಪತ್ನಿ ಮಿಶೆಲ್ ಈವರೆಗೆ ತಾಜ್‌ಮಹಲ್ ನೋಡಿಲ್ಲ’’ ಎಂದು ಅವರು ಲಘು ಧಾಟಿಯಲ್ಲಿ ಹೇಳಿದರು.

ಕಳೆದ ವರ್ಷ ತಾಜ್‌ಮಹಲ್‌ಗೆ ಭೇಟಿ ನೀಡುವ ಒಬಾಮ ಅವರ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ, ಸೌದಿ ಅರೇಬಿಯದ ದೊರೆ ಅಬ್ದುಲ್ಲಾ ಅವರ ನಿಧನದ ಹಿನ್ನೆಲೆಯಲ್ಲಿ ಅವರು ಭಾರತದ ಭೇಟಿಯನ್ನು ಮೊಟಕುಗೊಳಿಸಿ ಸೌದಿಗೆ ತೆರಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News