×
Ad

ನೆರೆರಾಷ್ಟ್ರದಿಂದ ಭೀತಿವಾದದ ಉತ್ಪಾದನೆ ಮತ್ತು ರಫ್ತು: ಪಾಕ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

Update: 2016-09-08 20:59 IST

ಭೀತಿವಾದದ ಈ ಜಾಗತಿಕ ರಫ್ತನ್ನು ನಾವು ನಿಲ್ಲಿಸಬೇಕಾದ ಕಾಲವೀಗ ಬಂದಿದೆ. ನಾವು ಭಯೋತ್ಪಾದಕರನ್ನು ಮಾತ್ರವಲ್ಲ,ಅವರ ಇಡೀ ಬೆಂಬಲ ವ್ಯವಸ್ಥೆಯನ್ನೂ ಗುರಿಯಾಗಿಸಿಕೊಳ್ಳಬೇಕಾಗಿದೆ. ಮತ್ತು ಭೀತಿವಾದವನ್ನು ತಮ್ಮ ಸರಕಾರದ ನೀತಿಯನ್ನಾಗಿ ಮಾಡಿಕೊಳ್ಳುವವರ ವಿರುದ್ಧ ನಮ್ಮ ಅತ್ಯಂತ ಕಠಿಣವಾದ ಕ್ರಮ ಮೀಸಲಾಗಿರಬೇಕು

-ಪ್ರಧಾನಿ ಮೋದಿ

ವಿಯೆಂಟಿಯಾನ್,ಸೆ.8: ಪಾಕಿಸ್ತಾನದ ವಿರುದ್ಧ ಗುರುವಾರ ಇಲ್ಲಿ ಕಟು ಟೀಕಾಪ್ರಹಾರ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು, ನಮ್ಮ ನೆರೆ ರಾಷ್ಟ್ರವೊಂದು ಭೀತಿವಾದದ ಉತ್ಪಾದನೆ ಮತ್ತು ರಫ್ತಿನಲ್ಲಿ ತೊಡಗಿಕೊಂಡಿದೆ ಎಂದು ಹೇಳಿದರಲ್ಲದೆ, ಈ ‘ಪ್ರಚೋದಕ’ ರಾಷ್ಟ್ರವನ್ನು ದೂರವಿಡುವಂತೆ ಮತ್ತು ಅದರ ವಿರುದ್ಧ ನಿರ್ಬಂಧಗಳನ್ನು ವಿಧಿಸುವಂತೆ ಅಂತರರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿದರು.
ಇಲ್ಲಿ 11ನೇಪೂರ್ವ ಏಷ್ಯಾ ಶೃಂಗಸಭೆ(ಇಎಎಸ್)ಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು ಪಾಕಿಸ್ತಾನವನ್ನು ಹೆಸರಿಸದೆ ಈ ಆರೋಪವನ್ನು ಮಾಡಿದರು. ನೆರೆರಾಷ್ಟ್ರದಿಂದ ಭೀತಿವಾದದ ಈ ರಫ್ತು ಶಾಂತಿಯ ಅವಕಾಶವನ್ನು ಕುಗ್ಗಿಸುತ್ತಿದೆ ಮತ್ತು ಹಿಂಸೆಗೆ ಅವಕಾಶವನ್ನು ಹೆಚ್ಚಿಸುತ್ತಿದೆ. ಜೊತೆಗೆ ಶಾಂತಿ ಮತ್ತು ಸರ್ವರ ಪ್ರಗತಿಗೆ ಅಪಾಯವನ್ನುಂಟು ಮಾಡುತ್ತಿದೆ ಎಂದರು. ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಚೀನಾ ಪ್ರಧಾನಿ ಲೀ ಕೆಕಿಯಾಂಗ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನಾಲ್ಕು ದಿನಗಳ ಹಿಂದೆ ಬ್ರಿಕ್ಸ್ ಶೃಂಗಸಭೆಯಲ್ಲಿ ಮಾಡಿದ್ದ ಭಾಷಣದಲ್ಲಿ ಮೋದಿ ಅವರು, ಭೀತಿವಾದದ ವಿರುದ್ಧ ಹೋರಾಡಲು ಜಂಟಿ ಪ್ರಯತ್ನಗಳನ್ನು ತೀವ್ರಗೊಳಿಸುವಂತೆ ಇತರ ಬ್ರಿಕ್ಸ್ ರಾಷ್ಟ್ರಗಳಿಗೆ ಕರೆ ನೀಡಿದ್ದರಲ್ಲದೆ ಭಯೋತ್ಪಾದನೆಯ ಬೆಂಬಲಿಗರು ಮತ್ತು ಪ್ರವರ್ತಕರನ್ನು ದೂರವಿಡಲು ಬ್ರಿಕ್ಸ್ ಗುಂಪು ಸಂಘಟಿತ ಪ್ರಯತ್ನಗಳನ್ನು ಮಾಡಬೇಕೆಂದು ಕೋರಿದ್ದರು.
ಭೀತಿವಾದದ ಈ ಜಾಗತಿಕ ರಫ್ತನ್ನು ನಾವು ನಿಲ್ಲಿಸಬೇಕಾದ ಕಾಲವೀಗ ಬಂದಿದೆ. ನಾವು ಭಯೋತ್ಪಾದಕರನ್ನು ಮಾತ್ರವಲ್ಲ,ಅವರ ಇಡೀ ಬೆಂಬಲ ವ್ಯವಸ್ಥೆಯನ್ನೂ ಗುರಿಯಾಗಿಸಿಕೊಳ್ಳಬೇಕಾಗಿದೆ. ಮತ್ತು ಭೀತಿವಾದವನ್ನು ತಮ್ಮ ಸರಕಾರದ ನೀತಿಯನ್ನಾಗಿ ಮಾಡಿಕೊಳ್ಳುವವರ ವಿರುದ್ಧ ನಮ್ಮ ಅತ್ಯಂತ ಕಠಿಣವಾದ ಕ್ರಮ ಮೀಸಲಾಗಿರಬೇಕು ಎಂದು ಮೋದಿ ಹೇಳಿದರು.
ಭೀತಿವಾದವು ಮುಕ್ತ ಮತ್ತು ಬಹುಮಖಿ ಸಮಾಜಕ್ಕೆ ಅತ್ಯಂತ ಗಂಭೀರ ಸವಾಲಾಗಿದೆ ಎಂದ ಅವರು, ಈ ಪಿಡುಗಿನ ವಿರುದ್ಧ ಹೋರಾಟಕ್ಕೆ ಸಂಘಟಿತ ಪ್ರಯತ್ನ ಅಗತ್ಯವಾಗಿದೆ ಎಂದು ಒತ್ತಿ ಹೇಳಿದರು.
ಪ್ರಾದೇಶಿಕ ಒಗ್ಗೂಡುವಿಕೆ ಮತ್ತು ಸಹಕಾರವನ್ನು ಹೆಚ್ಚಿಸುವ ಪ್ರಯತ್ನಗಳಲ್ಲಿ ಆಸಿಯಾನ್ ರಾಷ್ಟ್ರಗಳು ಮುಂಚೂಣಿಯಲ್ಲಿರುತ್ತವೆ ಮತ್ತು ಕೇಂದ್ರ ಪಾತ್ರವನ್ನು ನಿರ್ವಹಿಸುತ್ತವೆ ಎಂದು ಅವರು ಆಶಯವನ್ನು ವ್ಯಕ್ತಪಡಿಸಿದರು.
ಇಎಎಸ್ ಅಣ್ವಸ್ತ್ರ ಪ್ರಸರಣ ತಡೆ ಕುರಿತಂತೆ ಹೇಳಿಕೆಯೊಂದನ್ನು ಅಂಗೀಕರಿಸುತ್ತಿದೆ ಮತ್ತು ಭಾರತವು ತನ್ನ ಧ್ಯೇಯೋದ್ದೇಶಗಳನ್ನು ಬಲಗೊಳಿಸಲು ಬದ್ಧವಾಗಿದೆ. ಇದು ಉಭಯ ಪಕ್ಷಗಳ ನಿಲುವಿನಲ್ಲಿ ಸಮಾನತೆಯನ್ನು ಸೂಚಿಸುತ್ತಿದೆ ಎಂದು ಅವರು ಹೇಳಿದರು.
ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆಯ ಸಾಕಾರವನ್ನು ಬೆಂಬಲಿಸುವುದಕ್ಕೆ ಭಾರತವು ಬದ್ಧವಾಗಿದೆ ಎಂದ ಅವರು, ಪ್ರದೇಶದಲ್ಲಿ ಹಾಲಿ ನಡೆಯುತ್ತಿರುವ ಆರ್ಥಿಕ ಒಗ್ಗೂಡುವಿಕೆಯನ್ನು ಇನ್ನಷ್ಟು ಗಾಢಗೊಳಿಸುವುದಕ್ಕಾಗಿ ಏಷ್ಯಾ-ಪ್ಯಾಸಿಫಿಕ್ ಆರ್ಥಿಕ ಸಹಕಾರದಲ್ಲಿ ಭಾರತವು ಸಹ ಮಹತ್ವದ ಪಾತ್ರವನ್ನು ವಹಿಸಬಹುದಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News