ಮುಹಮ್ಮದ್ ಸಲ್ಮಾನ್ ಈಗ ಟ್ರಾಫಿಕ್ ವಾರ್ಡನ್!

Update: 2016-09-08 16:31 GMT

ಬೆಂಗಳೂರು ಶಿವಾಜಿನಗರದಲ್ಲಿ ನೀವು ಸುತ್ತಾಡಿರುತ್ತೀರಿ. ಅಲ್ಲೇ ಪಕ್ಕದ ಹೆನ್ಸ್ ವೃತ್ತದತ್ತ ಒಮ್ಮೆ ಕಣ್ಣಾಡಿಸಿ. ವಾಹನ ದಟ್ಟಣೆ ಮತ್ತು ಜನಜಂಗುಳಿ ನಡುವೆ ರಸ್ತೆ ಮಧ್ಯೆ ಎರಡೂ ಕಾಲಿಲ್ಲದ 21 ರ ಹರೆಯದ ಯುವಕ ಮಾಮೂಲಿ ಸಿವಿಲ್ ಡ್ರೆಸ್‌ನಲ್ಲಿ ಎರಡೂ ಕೈಗೆ ಊರುಗೋಲನ್ನು ಸಿಕ್ಕಿಸಿಕೊಂಡು ಟ್ರಾಫಿಕ್ ಕಂಟ್ರೋಲ್ ಮಾಡುವುದನ್ನು ಕಂಡು ಬೆರಗಾಗುತ್ತೀರಿ.

ಇವರ ಹೆಸರು ಮುಹಮ್ಮದ್ ಸಲ್ಮಾನ್. ಬೆಂಗಳೂರು ವಿನೋಬಾ ನಗರದ ಕೆ.ಜಿ. ಹಳ್ಳಿಯ ನಿವಾಸಿ. ಸಣ್ಣದರಲ್ಲೇ ಪೊಲೀಸ್ ಆಗಬೇಕೆಂದು ಕನಸು ಕಂಡವರು. ಆದರೆ ದೇವರ ವಿಧಿಯೇ ಬೇರೆಯಾಗಿತ್ತು. ಜನಿಸುವಾಗ ಆರೋಗ್ಯದಲ್ಲಿ ಚೆನ್ನಾಗಿಯೇ ಇದ್ದ ಸಲ್ಮಾನ್ ಬಾಲಕನಾಗುತ್ತಲೇ ಪೋಲಿಯೊಗೆ ತುತ್ತಾಗಿ ಎರಡೂ ಕಾಲಿನ ಬಲವನ್ನು ಕಳೆದುಕೊಂಡರು. ಆದರೂ ಪೊಲೀಸ್ ಕನಸು ಕಮರಿಲ್ಲ. ಇವರ ಈ ಆಸೆಗೆ ಶಿವಾಜಿನಗರ ಪೊಲೀಸರು ಸಹಾಯ ಹಸ್ತ ಚಾಚಿದರು. ಅವರನ್ನು ಪೊಲೀಸ್ ಅಲ್ಲದಿದ್ದರೂ ಟ್ರಾಫಿಕ್ ವಾರ್ಡನ್ ಆಗಿ ಅಧಿಕೃತವಾಗಿ ನೇಮಿಸಿದರು.

ಕಳೆದ ನಾಲ್ಕು ವರ್ಷದಿಂದ ಸಲ್ಮಾನ್ ಶಿವಾಜಿನಗರದ ಹೆನ್ಸ್ ವೃತ್ತದಲ್ಲಿ ಟ್ರಾಫಿಕ್ ಕಂಟ್ರೋಲರ್. ಕಾಲಿನ ಮಂಡಿಯೂರುತ್ತಾ ಶಾಲಾ ಮಕ್ಕಳನ್ನು ರಸ್ತೆ ದಾಟಿಸುವುದು, ಟ್ರಾಫಿಕ್ ಜಾಂ ಆಗದಂತೆ ನಿಯಂತ್ರಣ ಮಾಡಿ ಶಿವಾಜಿನಗರ ಟ್ರಾಫಿಕ್ ಪೊಲೀಸರಿಗೆ ನೆರವಾಗುತ್ತಿದ್ದಾರೆ. ಶಿವಾಜಿನಗರ ಟ್ರಾಫಿಕ್ ಪೊಲೀಸ್ ಇನ್‌ಸ್ಪೆಕ್ಟರ್ ಸಲ್ಮಾನ್‌ರಿಗೆ ಅಧಿಕೃತ ಗುರುತಿನ ಚೀಟಿಯನ್ನೂ ನೀಡಿದ್ದಾರೆ.

ಕಾಲಿಲ್ಲದಿದ್ದರೇನಂತೆ ಸಾಧಿಸುವ ಛಲ ಇದೆಯಲ್ಲಾ. ಹ್ಯಾಟ್ಸಾಫ್ ಸಲ್ಮಾನ್..!

ರಶೀದ್ ವಿಟ್ಲ.

Writer - ರಶೀದ್ ವಿಟ್ಲ

contributor

Editor - ರಶೀದ್ ವಿಟ್ಲ

contributor

Similar News