ದರ ಏರಿಕೆ ಏಕೆ ಎಂದು ಜನ ಕೇಳಿದರೆ 'ಪ್ರಭು' ಗಳಿಗೆ ಸಿಟ್ಟು ಬಂತು !

Update: 2016-09-08 18:08 GMT

ಮುಂಬೈ, ಸೆ.8 : ಗುರುವಾರ ರೈಲ್ವೆ ಸಚಿವ ಸುರೇಶ ಪ್ರಭು ಅವರ ಮುಂಬೈ ನಿವಾಸದ ಹೊರಗೆ ಕಾಯುತ್ತಿದ್ದ ಇಂಡಿಯಾ ಟುಡೇ ಪತ್ರಕರ್ತರಿಗೆ ಸಚಿವರ ಆಪ್ತ ಸಿಬ್ಬಂದಿ "ನಿಮ್ಮನ್ನು ನೋಡಿದರೆ ಅವರಿಗೆ ಈಗ ಸಿಟ್ಟು ಬರುತ್ತದೆ. ಹೀಗೆ ಹಠಾತ್ತನೆ ಮಾಧ್ಯಮದವರು ಬಂದು ಪ್ರಶ್ನಿಸುವುದು ಅವರಿಗೆ ಇಷ್ಟವಿಲ್ಲ" ಎಂದು ಎಚ್ಚರಿಸಿದ್ದಾನೆ. ಸಚಿವರು ಮನೆಯಿಂದ ಹೊರಬಂದ ಮೇಲೆ ಆತ ಹೇಳಿದಂತೆಯೇ ಆಗಿದೆ. 

ಬುಧವಾರ ರೈಲ್ವೆ ಸಚಿವಾಲಯ ಹೈಸ್ಪೀಡ್ ರೈಲುಗಳ ಟಿಕೆಟ್ ದರ ಏರಿಕೆ ಮಾಡಿದೆ. ಇದರಂತೆ ಪ್ರತಿ ಹತ್ತು ಶೇಕಡಾ ಟಿಕೆಟ್ ಮಾರಾಟವಾಗುತ್ತಿದ್ದಂತೆ ಹತ್ತು ಶೇಕಡಾ ದರ ಹೆಚ್ಚುತ್ತಾ ಹೋಗುತ್ತದೆ. ಹಾಗಾಗಿ ಸಚಿವರನ್ನು ಪ್ರಶ್ನಿಸುವುದು ಅನಿವಾರ್ಯವಾಗಿತ್ತು. 

ಆದರೆ ಪತ್ರಕರ್ತರನ್ನು ನೋಡಿದ ಕೂಡಲೇ ಸಚಿವರ ಮುಖ ಕಪ್ಪಿಟ್ಟಿತು. ಅವರು ಉತ್ತರಿಸುವ ಮೂಡ್ ನಲ್ಲಿರಲಿಲ್ಲ. "ನಾನು ನಿಮ್ಮನ್ನು ಕರೆದಿದ್ದೆನಾ ? " ಎಂದು ಅವರೇ ಕೇಳಿದರು. ಅಷ್ಟಕ್ಕೇ ನಿಲ್ಲದೆ, "ನಿಮ್ಮ ಸೀನಿಯರ್ ಬಳಿ ಹೋಗಿ ಕೇಳಿ. ಒಬ್ಬ ಸಚಿವರನ್ನು ಈ ರೀತಿ ಪ್ರಶ್ನಿಸುತ್ತಾರಾ?" ಎಂದಿದ್ದಾರೆ. 
ಆದರೆ ಇದಕ್ಕೆ ಬಗ್ಗದ ಪತ್ರಕರ್ತ "ನಾನು ಖಂಡಿತ ನೀವು ಹೇಳಿದ್ದನ್ನು ನನ್ನ ಸೀನಿಯರ್ ಗೆ ತಲುಪಿಸುತ್ತೇನೆ. ಆದರೆ ದೇಶದ ಜನರು ಟಿಕೆಟ್ ದರ ಏರಿಸಿದ್ದು ಏಕೆ ಎಂದು ಉತ್ತರ ಬಯಸುತ್ತಿದ್ದಾರೆ. ನನ್ನ ಸೀನಿಯರ್ ಗೂ ಉತ್ತರ ಬೇಕಾಗಿದೆ" ಎಂದು ಹೇಳಿದ್ದಾನೆ. ಇದಕ್ಕೆ ಇನ್ನಷ್ಟು ಸಿಟ್ಟಾದ ಪ್ರಭು ಹೊರಟೇಬಿಟ್ಟರು. 

ರೈಲ್ವೆ ಬಳಕೆದಾರರ ಸಂಘದ ಹಿರಿಯ ಸದಸ್ಯ ರಾಜೀವ್ ಸಿಂಘಲ್ "ರೈಲ್ವೆ ಸಚಿವರು ಬನಿಯಾ ಆಗಿಬಿಟ್ಟಿದ್ದಾರೆ. ಈಗ ಮುಂಬೈ - ದಿಲ್ಲಿ ವಿಮಾನದ ರಿಟರ್ನ್ ಟಿಕೆಟ್ ರೈಲ್ವೆ ಟಿಕೆಟ್ ದರದಲ್ಲಿ ಸಿಗುವಾಗ ಜನರು ಏಕೆ ರೈಲಿನಲ್ಲಿ ಹೋಗುತ್ತಾರೆ ? ಇದಕ್ಕೆ ಸಚಿವರು ಉತ್ತರಿಸಬೇಕು. ಸಚಿವರು ಮಾಧ್ಯಮದ ಜೊತೆ ಹೀಗೆ ವರ್ತಿಸಿದರೆ ಕೇಂದ್ರ ಸರಕಾರ ಜನರೊಂದಿಗೆ ಹೇಗೆ ವರ್ತಿಸುತ್ತದೆ ? " ಎಂದು ಹೇಳಿದ್ದಾರೆ. 


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News