ಶಿಕ್ಷಣ ಕ್ಷೇತ್ರಕ್ಕೆ 2 ಸಾವಿರ ಕೋಟಿ ರೂ. ಮೀಸಲು: ಕೇರಳ ಶಿಕ್ಷಣ ಸಚಿವ ರವೀಂದ್ರನಾಥ್

Update: 2016-09-09 14:13 GMT

ಕಾಸರಗೋಡು, ಸೆ.9: ಮುಂದಿನ ಐದು ವರ್ಷಗಳಲ್ಲಿ ಶಿಕ್ಷಣ ವಲಯದ ಅಭಿವೃದ್ಧಿಗೆ ಅತ್ಯಾಧುನಿಕ ವ್ಯವಸ್ಥೆ ಕಲ್ಪಿಸಲಾಗುವುದು. ಶಿಕ್ಷಣ ವಲಯದ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಎರಡು ಸಾವಿರ ಕೋಟಿ ರೂ.ಗಳನ್ನು ಮೀಸಲಿರಿಸಿದೆ ಎಂದು ಕೇರಳ ಶಿಕ್ಷಣ ಸಚಿವ ಪ್ರೊ.ಸಿ. ರವೀಂದ್ರನಾಥ್ ಹೇಳಿದ್ದಾರೆ.

ಕಾಸರಗೋಡು ಚಾಲದಲ್ಲಿ ನಿರ್ಮಿಸಲಾದ ಕಣ್ಣೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯರ ಹಾಸ್ಟೆಲ್‌ನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಮುಂದಿನ ತಲೆಮಾರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶಿಕ್ಷಣ ವ್ಯವಸ್ಥೆ ಅಗತ್ಯವಾಗಿದೆ. ಈಗ ಇರುವ ಕೊರತೆಯನ್ನು ಕೆಲವೇ ಮುಂದಿನ ಐದು ವರ್ಷಗಳಲ್ಲಿ ನೀಗಿಸಲಾಗುವುದು. ಎಲ್ಲಾ ಶಾಲೆಗಳಲ್ಲಿ ಪ್ರಯೋಗಾಲಯ, ಗ್ರಂಥಾಲಯಗಳನ್ನು ಆರಂಭಿಸಲಾಗುವುದು. ರಾಜ್ಯದ ಐದು ಕಾಲೇಜುಗಳನ್ನು ಉನ್ನತ ದರ್ಜೆ ಗೇರಿಸಲಾಗುವುದು ಎಂದರು.

ಜಿಲ್ಲೆಯ ಕಾಲೇಜುಗಳಿಗೆ ಹೊಸ ಕೋರ್ಸ್‌ಗಳನ್ನು ಒದಗಿಸಲು ಸರಕಾರ ಸಿದ್ಧವಿದೆ ಎಂದು ಸಚಿವರು ಹೇಳಿದರು.

ಶಾಸಕ ಎನ್.ಎ. ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು. ಕಣ್ಣೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಕೆ.ಎಂ. ಅಬ್ದುಲ್ ಖಾದರ್, ವಾರ್ಡ್ ಸದಸ್ಯ ಮುಮ್ತಾಝ್ ಅಬೂಬಕರ್, ರಿಜಿಸ್ಟ್ರಾರ್ ಡಾ.ಬಾಲಚಂದ್ರನ್, ಸಿಂಡಿಕೇಟ್ ಸದಸ್ಯರಾದ ವಿ.ಪಿ.ಪಿ. ಮುಸ್ತಫಾ, ಎಂ.ಸಿ.ರಾಜು, ಮಾಜಿ ಶಾಸಕ ಸಿ.ಎಚ್. ಕುಞಾಂಬು, ಕೆ.ಆರ್. ಜಯಚಂದ್ರನ್, ಟಿ.ಅಖಿಲ್ರಾಜ್ ಮೊದಲಾದವರು ಮಾತನಾಡಿದರು.

ಡಾ.ಟಿ. ಅಶೋಕನ್ ಸ್ವಾಗತಿಸಿದರು. ಕ್ಯಾಂಪಸ್ ನಿರ್ದೇಶಕ ಶ್ರೀಲತಾ ಕೆ.ನಾಯರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News