ಹಜ್ ಯಾತ್ರೆ ಆರಂಭ: ಸುಮಾರು 15 ಲಕ್ಷ ಯಾತ್ರಿಕರು ಭಾಗಿ; ಅಭೂತಪೂರ್ವ ಭದ್ರತೆ
ಮಕ್ಕಾ, ಸೆ. 10: ಸೌದಿ ಅರೇಬಿಯದ ಮಕ್ಕಾದಲ್ಲಿ ಸುಮಾರು 15 ಲಕ್ಷ ಮುಸ್ಲಿಮರು ವಾರ್ಷಿಕ ಹಜ್ ಯಾತ್ರೆಯನ್ನು ಆರಂಭಿಸಿದ್ದಾರೆ. ಕಳೆದ ವರ್ಷ ಸಂಭವಿಸಿದ ಭೀಕರ ದುರಂತದ ಹಿನ್ನೆಲೆಯಲ್ಲಿ ಈ ಬಾರಿ ಸುರಕ್ಷಾ ಕ್ರಮಗಳನ್ನು ಬಿಗಿಗೊಳಿಸಲಾಗಿದೆ. ಈ ಬಾರಿ ಹೆಚ್ಚಿನ ಭದ್ರತೆಯನ್ನು ಏರ್ಪಡಿಸಲಾಗಿದೆ ಹಾಗೂ ಗುರುತು ಬ್ರಾಸ್‌ಲೆಟ್‌ಗಳನ್ನು ಯಾತ್ರಿಗಳಿಗೆ ವಿತರಿಸಲಾಗಿದೆ.
ಆದರೆ, ಸೌದಿ ಅರೇಬಿಯದೊಂದಿಗೆ ಇರಾನ್ ಹೊಂದಿರುವ ಭಿನ್ನಮತದ ಹಿನ್ನೆಲೆಯಲ್ಲಿ ಇರಾನ್‌ನ ಸಾವಿರಾರು ಯಾತ್ರಿಗಳು ಈ ಬಾರಿ ಹಜ್‌ನಲ್ಲಿ ಭಾಗವಹಿಸುತ್ತಿಲ್ಲ. ಮಕ್ಕಾದ ಮಸ್ಜಿದುಲ್ ಹರಾಂ ಮಸೀದಿಯಲ್ಲಿ ಪ್ರಾಥಮಿಕ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದ ಬಳಿಕ, 40 ಡಿಗ್ರಿ ಸೆಲ್ಸಿಯಸ್ ಉಷ್ಣತೆಯಲ್ಲಿ ಯಾತ್ರಿಗಳು ಶನಿವಾರ ಬಸ್ ಮತ್ತು ರೈಲುಗಳಲ್ಲಿ ಹಾಗೂ ನಡೆದುಕೊಂಡೇ ಪೂರ್ವಕ್ಕೆ ಸುಮಾರು 5 ಕಿಲೋ ಮೀಟರ್ ದೂರದಲ್ಲಿರುವ ಮಿನಾದತ್ತ ಪ್ರಯಾಣ ಆರಂಭಿಸಿದ್ದಾರೆ.
ರವಿವಾರ ಹಲವು ಕಿಲೋಮೀಟರ್ ದೂರದಲ್ಲಿರುವ ಮೌಂಟ್ ಅರಫಾತ್ ಪರ್ವತಕ್ಕೆ ಯಾತ್ರೆ ಕೈಗೊಳ್ಳುತ್ತಾರೆ. ಇದು ಯಾತ್ರೆಯ ಮಹತ್ವದ ಭಾಗವಾಗಿದೆ. 25 ಲಕ್ಷಕ್ಕೂ ಅಧಿಕ ಯಾತ್ರಿಗಳಿಗೆ ವಸತಿ ಕಲ್ಪಿಸುವುದಕ್ಕಾಗಿ ಮಿನಾದ ವಿಶಾಲ ಪ್ರದೇಶದಲ್ಲಿ ಬಿಳಿ ಬೆಂಕಿ ನಿರೋಧಕ ಡೇರೆಗಳನ್ನು ನಿರ್ಮಿಸಲಾಗಿದೆ.