×
Ad

ಸದೃಢ, ಸಮೃದ್ಧ, ವೈವಿಧ್ಯತೆಯೊಂದಿಗೆ ಪುಟಿದೆದ್ದ ನ್ಯೂಯಾರ್ಕ್ : 9/11 ದಾಳಿಗೆ 15 ವರ್ಷ

Update: 2016-09-10 20:03 IST

ನ್ಯೂಯಾರ್ಕ್, ಸೆ. 10: ನ್ಯೂಯಾರ್ಕ್ ಮೇಲೆ 9/11 ಭಯೋತ್ಪಾದಕ ದಾಳಿ ನಡೆದು 15 ವರ್ಷಗಳು ಸಂದಿವೆ. ಈ ಅವಧಿಯಲ್ಲಿ ನಗರವು ಹೆಚ್ಚು ಸದೃಢ, ಸಮೃದ್ಧ ಹಾಗೂ ವೈವಿಧ್ಯತೆಯೊಂದಿಗೆ ಪುಟಿದೆದ್ದಿದೆ. ಆದಾಗ್ಯೂ, ಆ ದುರ್ದೈವದ ದಿನ ನ್ಯೂಯಾರ್ಕ್‌ನ ಡಿಎನ್‌ಎಯೊಂದಿಗೆ ಶಾಶ್ವತವಾಗಿ ಸೇರಿಹೋಗಿದೆ.

2001 ಸೆಪ್ಟಂಬರ್ 11ರಂದು ಅಲ್-ಖಾಯಿದ ಭಯೋತ್ಪಾದಕ ಗುಂಪು ನಡೆಸಿದ ದಾಳಿ ಎರಡು ಶತಮಾನಗಳ ಅವಧಿಯಲ್ಲಿ ನಡೆದ ಮೊದಲ ವಿದೇಶಿ ದಾಳಿಯಾಗಿತ್ತು. ಅದು ತಾನು ಸುರಕ್ಷಿತವೆಂಬ ಪಾಶ್ಚಾತ್ಯ ದೇಶಗಳ ಕಲ್ಪನೆಯನ್ನು ಘಾಸಿಗೊಳಿಸಿತು.

ಅಪಹರಿಸಲ್ಪಟ್ಟ ಎರಡು ಪ್ರಯಾಣಿಕ ವಿಮಾನಗಳು ವರ್ಲ್ಡ್ ಟ್ರೇಡ್ ಸೆಂಟರ್‌ನ ಅವಳಿ ಗೋಪುರಗಳಿಗೆ ಢಿಕ್ಕಿ ಹೊಡೆದಾಗ 2,750ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡರು. ಆ ಪೈಕಿ ಕೇವಲ 1,640 ಮಂದಿಯ ಅವಶೇಷಗಳನ್ನು ಮಾತ್ರ ಗುರುತಿಸಲಾಗಿದೆ.

ದಾಳಿಯ ಪರಿಣಾಮವಾಗಿ ಸುಮಾರು 75,000 ಮಂದಿ ಮಾನಸಿಕ ಹಾಗೂ ದೈಹಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ. ಅವರ ಪೈಕಿ ಹೆಚ್ಚಿನವರು ತುರ್ತು ಸೇವೆಗಳ ಸಿಬ್ಬಂದಿ. ಜನರ ಪ್ರಾಣಗಳನ್ನು ಉಳಿಸಲಿಕ್ಕಾಗಿ ಕೆಚ್ಚೆದೆಯಿಂದ ಮುನ್ನುಗ್ಗಿದ ಅವರು ಕ್ಯಾನ್ಸರ್‌ಕಾರಕ ವಿಷಾನಿಲಗಳನ್ನು ಸೇವಿಸಿದ್ದರು.

ವರ್ಲ್ಡ್ ಟ್ರೇಡ್ ಸೆಂಟರ್ ಕಟ್ಟಡವನ್ನು ಈಗ ಸಂಪೂರ್ಣವಾಗಿ ಮರುನಿರ್ಮಿಸಲಾಗಿದೆ. ಅಲ್ಲೀಗ ರಾಷ್ಟ್ರೀಯ ಸೆಪ್ಟಂಬರ್ 11 ಸ್ಮಾರಕ ಮತ್ತು ವಸ್ತು ಸಂಗ್ರಹಾಲಯ, ಜಗತ್ತಿನ ಅತ್ಯಂತ ದುಬಾರಿ ರೈಲು ನಿಲ್ದಾಣ, ನಟನಾ ಕಲೆಗಳ ಕೇಂದ್ರ ಮತ್ತು ಕಚೇರಿಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News