ಅಮೆರಿಕದ ಪರಮಾಣು ಬ್ಲಾಕ್‌ಮೇಲ್‌ಗೆ ಮಣಿಯುವುದಿಲ್ಲ: ಉತ್ತರ ಕೊರಿಯ

Update: 2016-09-10 14:45 GMT

ಸಿಯೋಲ್, ಸೆ. 10: ಅಮೆರಿಕದ ಪರಮಾಣು ಬ್ಲಾಕ್‌ಮೇಲ್‌ಗೆ ತಾನು ಮಣಿಯುವುದಿಲ್ಲ ಎಂದು ಉತ್ತರ ಕೊರಿಯ ಶನಿವಾರ ಹೇಳಿದೆ.
ತನ್ನ ಐದನೆ ಹಾಗೂ ಅತ್ಯಂತ ಪ್ರಬಲ ಪರಮಾಣು ಪರೀಕ್ಷೆ ನಡೆಸಿ ಜಗತ್ತನ್ನು ಬೆಚ್ಚಿಬೀಳಿಸಿದ ಒಂದು ದಿನದ ಬಳಿಕ ಅದು ಈ ಹೇಳಿಕೆ ನೀಡಿದೆ.
‘‘ಉತ್ತರ ಕೊರಿಯದ ವಿರುದ್ಧ ಅಮೆರಿಕ ಏಕಪಕ್ಷೀಯ ಪರಮಾಣು ಬ್ಲಾಕ್‌ಮೇಲ್ ನಡೆಸಬಹುದಾಗಿದ್ದ ದಿನಗಳು ಮುಗಿದಿವೆ’’ ಎಂದು ಉತ್ತರ ಕೊರಿಯದ ಆಡಳಿತ ಪಕ್ಷದ ಪತ್ರಿಕೆ ‘ರೊಡೊಂಗ್ ಸಿನ್ಮುನ್’ ಬರೆದಿದೆ.
‘‘ಉತ್ತರ ಕೊರಿಯವು ಹಂತ ಹಂತವಾಗಿ ಇಡುತ್ತಿರುವ ಪ್ರಬಲ ಸೇನಾ ಹೆಜ್ಜೆಗಳಿಂದ ಅಮೆರಿಕ ಹತಾಶವಾಗಿದೆ’’ ಎಂದು ಪತ್ರಿಕೆ ಹೇಳಿದೆ.
 ಉತ್ತರ ಕೊರಿಯದ ಐದನೆ ಪರಮಾಣು ಪರೀಕ್ಷೆ ಹಾಗೂ ಅದಕ್ಕೆ ಪೂರ್ವಭಾವಿಯಾಗಿ ಅದು ನಡೆಸಿರುವ ಸರಣಿ ಕ್ಷಿಪಣಿ ಹಾರಾಟ ಪರೀಕ್ಷೆಗಳನ್ನು ವಿಶ್ವಾದ್ಯಂತ ವ್ಯಾಪಕವಾಗಿ ಖಂಡಿಸಲಾಗಿದೆ. ನೂತನ ದಿಗ್ಬಂಧನಗಳ ಬಗ್ಗೆ ತುರ್ತಾಗಿ ನಿರ್ಧರಿಸುವ ಪ್ರಕ್ರಿಯೆಯನ್ನು ಆರಂಭಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಶುಕ್ರವಾರ ಒಪ್ಪಿದೆ.
ಪತ್ರಿಕೆಯು ದಕ್ಷಿಣ ಕೊರಿಯದ ಅಧ್ಯಕ್ಷೆ ಪಾರ್ಕ್ ಗುಯನ್-ಹೈ ಅವರನ್ನು ವಿದೇಶಿ ಶಕ್ತಿಗಳ ‘‘ಕೊಳಕು ವೇಶ್ಯೆ’’ ಎಂಬುದಾಗಿ ಕರೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News