ರೈತರಿಗೆ ದಯಾಮರಣಕ್ಕೆ ಅನುಮತಿ ನೀಡಿ: ಕರುಣಾಕರ ಗೋಗಟೆ

Update: 2016-09-11 08:31 GMT

ಕಡಬ, ಸೆ.11: ಕುಮಾರಧಾರ ನದಿಗೆ ಉರುಂಬಿ ಎಂಬಲ್ಲಿ ನಿರ್ಮಿಸಲು ಉದ್ದೇಶಿಸಿರುವ ಜಲ ವಿದ್ಯುತ್ ಯೋಜನೆಗೆ ನಮ್ಮ ಸ್ಪಷ್ಟ ವಿರೋಧವಿದ್ದು ಯಾವುದೇ ಸಮೀಕ್ಷೆ ಕಾರ್ಯದ ಅಗತ್ಯವಿಲ್ಲ, ಬಲತ್ಕಾರದ ಸಮೀಕ್ಷೆ ನಡೆಸುವುದನ್ನು ನಾವು ಯಾವುದೇ ತ್ಯಾಗದಿಂದಾದರೂ ತಡೆಯುತ್ತೇವೆ, ಅಷ್ಟಕ್ಕೂ ಸಮೀಕ್ಷೆ ನಡೆಸುವುದಿದ್ದರೆ ಸರಕಾರವು ರೈತರಿಗೆ ದಯಾಮರಣಕ್ಕೆ ಅನುಮತಿ ನೀಡಲಿ ಎಂದು ಕುಟ್ರುಪ್ಪಾಡಿ-ದೋಳ್ಪಾಡಿ ಕುಮಾರಧಾರ ಪರಿಸರ ಸಂರಕ್ಷಣಾ ಸಮಿತಿ ಹೇಳಿದೆ.

ಪರಿಸರ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಎನ್.ಕರುಣಾಕರ ಗೋಗಟೆ ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚೆಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಪುತ್ತೂರು ಎ.ಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸಮೀಕ್ಷೆಗೆ ತಡೆಯುಂಟು ಮಾಡುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಯವರು ಹೇಳಿಕೆ ನೀಡಿದ್ದು, ಇದು ಖಂಡನೀಯ ಎಂದರು.

ಕುಕ್ಕೆ ಹೈಡ್ರೋ ಪವರ್ ಪ್ರಾಜೆಕ್ಟ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯವರೊಂದಿಗೆ ಅಧಿಕಾರಿಗಳು ಶಾಮಿಲಾಗಿ ರೈತರ ತಂಟೆಗೆ ಬಂದರೆ ಪರಿಣಾಮ ನೆಟ್ಟಗೆ ಇರುವುದಿಲ್ಲ ಎಂದು ಅವರು ಎಚ್ಚರಿಸಿದರು. ಕಂಪೆನಿಯವರು ಹೇಗಾದರೂ ಮಾಡಿ ಅನುಮತಿ ಪಡೆದು ಅಣೆಕಟ್ಟು ನಿರ್ಮಾಣ ಮಾಡಿ ಶೇ.70 ಸಬ್ಸಿಡಿ ಪಡೆಯುವ ಹುನ್ನಾರ ನಡೆಸುತ್ತಿದ್ದಾರೆ ಹೊರತು ವಿದ್ಯುತ್ ಉತ್ಪಾದನೆ ಮಾಡಿ ಯಾರನ್ನೂ ಉದ್ದಾರ ಮಾಡುವುದಕ್ಕೆ ಅಲ್ಲ. ಕಂಪೆನಿಯವರು ಅಣೆಕಟ್ಟು ನಿರ್ಮಾಣ ಮಾಡಬೇಕಾದರೆ ಕೆಲವು ಇಲಾಖೆಗಳ ಅನುಮತಿ ಪಡೆಯಬೇಕು, ಇಷ್ಟಾಗ್ಯೂ ಕಂಪೆನಿಯವರು ನದಿಪಾತ್ರದಲ್ಲಿ ನಡೆಸುತ್ತಿರುವ ನಿಯಮಬಾಹಿರ ಚಟುವಟಿಕೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಪ್ರೋತ್ಸಾಹ ನೀಡುತ್ತಿದ್ದಾರೆ. ರಾಜ್ಯ ಸರಕಾರ ಜಲವಿದ್ಯುತ್ ಹಾಗೂ ಉಷ್ಣವಿದ್ಯುತ್ ಸ್ಥಾವರ ಸ್ಥಾಪಿಸಿ ಪರಿಸರ ನಾಶ ಮಾಡುವ ಬದಲು ಸೌರ ವಿದ್ಯುತ್ ಹಾಗೂ ಪವನ ವಿದ್ಯುತ್ ಯೋಜನೆ ಆದ್ಯತೆ ನೀಡುವ ಮಾತು ಹೇಳುತ್ತಿದೆ. ಆದರೆ ಇಲ್ಲಿ ಖಾಸಗಿ ಕಂಪೆನಿಯವರೊಂದಿಗೆ ಸ್ಥಳೀಯ ಅಧಿಕಾರಿಗಳು ಶಾಮಿಲಾಗಿ ಸರ್ವೇ ಕಾರ್ಯದ ನಾಟಕವಾಡಿ ರೈತರನ್ನು ವ್ಯವಸ್ಥಿತವಾಗಿ ವಂಚಿಸಲು ಯತ್ನಿಸುತ್ತಿದ್ದಾರೆ ಎಂದರು.

ಪಶ್ಚಿಮ ಘಟ್ಟ ಕಾರ್ಯಪಡೆ ಅಧ್ಯಕ್ಷರು, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ ವಿಜ್ಷಾನಿಗಳು ಇದು ಜಲವಿದ್ಯುತ್ ಯೋಜನೆ ಅನುಷ್ಟಾನ ಮಾಡಲು ಯೋಗ್ಯವಲ್ಲದ ಪ್ರದೇಶ ಎಂದು ಸರಕಾರಕ್ಕೆ ವರದಿ ನೀಡಿರುತ್ತಾರೆ. ಈ ಹಿಂದೆ ಉದ್ದೇಶಿತ ಸ್ಥಳಕ್ಕೆ ಆಗಮಿಸಿದ್ದ ಕ್ರೆಡೆಲ್ ಸಂಸ್ಥೆಯವರು ಸ್ಥಳೀಯ ರೈತರ ವಿರೋಧ ಹೆಚ್ಚಾಗಿರುವುದರಿಂದ ಈ ಯೋಜನೆಯನ್ನು ರದ್ದುಗೊಳಿಸಬಹುದೆಂದು ವರದಿ ನೀಡಿರುತ್ತಾರೆ. ಕಡಬ, ಕುಟ್ರುಪ್ಪಾಡಿ, ಎಡಮಂಗಲ, ಕಾಣಿಯೂರು ಮುಂತಾದ ಗ್ರಾಮ ಪಂಚಾಯತ್‌ಗಳು ರೈತರ ಮನವಿಗೆ ಸ್ಪಂದಿಸಿ ಈವರೆಗೆ ಯಾವುದೇ ನಿರಾಕ್ಷೇಪಣಾ ಪತ್ರ ನೀಡಿಲ್ಲ. ಮಾತ್ರವಲ್ಲ ಸರ್ವೇ ಕಾರ್ಯಕ್ಕೆ ವಿರುದ್ಧದ ನಿರ್ಣಯ ಅಂಗೀಕರಿಸಿವೆ. ಉದ್ದೇಶಿತ ಯೋಜನೆ ಕಾಣಿಯೂರು ಗ್ರಾಮ ಪಂಚಾಯತ್‌ನ ದೋಳ್ಪಾಡಿ ಗ್ರಾಮದಲ್ಲೇ ಇರುತ್ತದೆ. ಆದರೆ ಕಂಪೆನಿಯವರು ಪೆರಾಬೆ ಗ್ರಾಮದ ಕೆಲವು ಖಾಸಗಿ ಜಮೀನುಗಳನ್ನು ನಿಯಮಬಾಹಿರವಾಗಿ ಖರೀದಿಸಿ ಯೋಜನೆಯು ಪೆರಾಬೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವುದಾಗಿ ತಿಳಿಸಿ ಪಂಚಾಯತ್‌ನಿಂದ ನಿಯಮಬಾಹಿರವಾಗಿ ನಿರಪೇಕ್ಷಣ ಪತ್ರ ಪಡೆದುಕೊಂಡಿದ್ದಾರೆ. ಮಾತ್ರವಲ್ಲದೆ ಕೆಲವರನ್ನು ಹೋರಾಟ ಸಮಿತಿಯ ವಿರುದ್ಧ ಎತ್ತಿ ಕಟ್ಟಿ ಊರಿನ ಸಾಮರಸ್ಯ ಕೆಡುವಂತೆ ಮಾಡಲಾಗಿದೆ ಎಂದರು.

ಕುಮಾರಧಾರ ನದಿಯಲ್ಲಿ ಏಳು ಕಡೆ ಜಲವಿದ್ಯುತ್ ಯೋಜನೆಗಳನ್ನು ಅನುಷ್ಠಾನ ಮಾಡುವುದಾಗಿ ಹೇಳಲಾಗಿದೆ. ಹೀಗಾದರೆ ನದಿ ಪಾತ್ರದ 18 ರಿಂದ 20 ಗ್ರಾಮಗಳ ಸಾವಿರಾರು ಎಕರೆ ಫಲವತ್ತಾದ ಕೃಷಿಜಮೀನು ಮುಳುಗಡೆಯಾಗಲಿದೆ. ಸಾವಿರಾರು ರೈತ ಕುಟುಂಬಗಳು, ಕೂಲಿ ಕಾರ್ಮಿಕರು ಬೀದಿಪಾಲಾಗಲಿದ್ದಾರೆ. ಇದಕ್ಕೆ ಹಲವು ಉದಾಹರಣೆಗಳು ನಮ್ಮಕಣ್ಣ ಮುಂದೆ ಇದೆ, ಬಂಟ್ವಾಳ ತಾಲೂಕಿನ ಶಂಭೂರು ಎಂಬಲ್ಲಿ ನಿರ್ಮಿಸಿರುವ ಮಿನಿ ಜಲವಿದ್ಯುತ್ ಯೋಜನೆ ಅನುಷ್ಠಾನ ಮಾಡುವಾಗ ಕಂಪೆನಿಯವರು ನೀಡಿರುವ ಯೋಜನಾ ವರದಿಯಲ್ಲಿ ಹೇಳಿರುವುದಕ್ಕಿಂತ ಹೆಚ್ಚು ಕೃಷಿ ಮುಳುಗಡೆಯಾಗಿ ರೈತರು ಸರಿಯಾದ ಪರಿಹಾರವೂ ಸಿಗದೆ ಪರದಾಡುತ್ತಿದ್ದಾರೆ. ಇದೇ ರೀತಿ ಉಪ್ಪಿನಂಗಡಿ ಸಮೀಪದ ನೀರಕಟ್ಟೆಯಲ್ಲಿ ಕೂಡಾ ರೈತಾಪಿ ಜನರಿಗೆ ವಂಚಿಸಲಾಗಿದೆ. ಮಾತ್ರವಲ್ಲ ಶಂಭೂರಿನಲ್ಲಿ ಅಣೆಕಟ್ಟನ್ನು ಎತ್ತರಿಸಿ ಇನ್ನಷ್ಟು ಭೂಮಿ ಮುಳುಗಡೆ ಮಾಡಿ ರೈತರನ್ನು ಬೀದಿಪಾಲು ಮಾಡಲಾಗಿದೆ. ಹಾರಂಗಿಯಲ್ಲಿ ಸರಿಯಾಗಿ ಪರಿಹಾರ ಸಿಗದೆ ನೀರಿಗೆ ಹಾರಿ ರೈತರು ಪ್ರಾಣ ತ್ಯಾಗ ಮಾಡಿರುವ ಮನಕಲಕುವ ಘಟನೆ ನಮ್ಮ ಕಣ್ಣಮುಂದೆ ಇದೆ ಎಂದರು.

ನಮಗೆ ಸುಳ್ಳು ಹೇಳಿ ನಮ್ಮನ್ನು ಒಪ್ಪಿಸಿ ಅಣೆಕಟ್ಟು ನಿರ್ಮಾಣ ಮಾಡಿ ಅನ್ಯಾಯವಾಗಿ ಇದ್ದ ಭೂಮಿಯನ್ನು ಕಳೆದುಕೊಳ್ಳುವುದು ನಮಗೆ ಬೇಕಾಗಿಲ್ಲ ಎಂದು ಹೇಳಿದ ಕರುಣಾಕರ ಗೋಗಟೆ ಈ ಯೋಜನೆಯ ಸರ್ವೆ ಕಾರ್ಯಕ್ಕೆ ನಮ್ಮ ವಿರೋಧ ಇದೆ ಎಂದು ಮನವಿ ನೀಡಲು ಹೋದರೆ ಜಿಲ್ಲಾಧಿಕಾರಿಯವರು ಈ ದೇಶದ ಪ್ರಧಾನಿಯನ್ನೇ ಅವಮಾನಿಸಿದ್ದಾರೆ. ಅಣೆಕಟ್ಟು ವಿರೋಧಿಸಿ ದೇಶದ ಪ್ರಧಾನಿಯವರಿಗೆ ಪತ್ರ ಬರೆದಿದ್ದೇವೆ ಎಂದು ಜಿಲ್ಲಾಧಿಕಾರಿಯವರಿಗೆ ಮನವರಿಕೆ ಮಾಡಲು ಹೋದರೆ ನೀವು ಮೋದಿಯಲ್ಲಿಗೆ ಬೇಕಾದರೂ ಹೋಗಿ ವಿಶ್ವ ಸಂಸ್ಥೆಗೆ ಬೇಕಾದರೂ ಹೋಗಿ ಅದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಈ ದೇಶದ ಪ್ರಧಾನಿಯವರನ್ನೇ ಅವಮಾನಿಸಿದ್ದಾರೆ. ಇದರ ವಿರುದ್ಧ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಉಪಾಧ್ಯಕ್ಷ ಗೋಪಾಲಕೃಷ್ಣ ಇಡ್ಯಡ್ಕ, ಕಾರ್ಯದರ್ಶಿ ಎನ್.ಕಿರಣ್ ಗೋಗಟೆ, ಖಜಾಂಜಿ ರಘುನಾಥ ಹೆಬ್ಬಾರ್, ಪ್ರಮುಖರಾದ ಮೋನಪ್ಪ ಗೌಡ ನಾಡೋಳಿ, ಜಯರಾಮ ಗೌಡ ಅರ್ತಿಲ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News