2019 ರಲ್ಲಿ 100ಕ್ಕೂ ಹೆಚ್ಚು ಸ್ಥಾನಗಳನ್ನು ಸೋಲುವ ಭಯದಲ್ಲಿದೆಯೇ ಬಿಜೆಪಿ ?
ಹೊಸದಿಲ್ಲಿ, ಸೆ. 11 : 2019 ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಕನಿಷ್ಠ 100 ಸ್ಥಾನಗಳನ್ನು ಕಳಕೊಳ್ಳಲಿದೆ ಎಂದು ಬಿಜೆಪಿ ಈಗಾಗಲೇ ಒಪ್ಪಿಕೊಂಡಿದೆಯೇ ? ಹೌದು ಎನ್ನುತ್ತದೆ ಸ್ಕ್ರಾಲ್ . ಇನ್ ಮಾಡಿರುವ ವರದಿ.
" ಪಕ್ಷಾಧ್ಯಕ್ಷ ಅಮಿತ್ ಷಾ ದೇಶಾದ್ಯಂತ ಪಕ್ಷ ಗೆಲ್ಲಲು ಸಾಧ್ಯವಿರುವ 115 ಹೊಸ ಕ್ಷೇತ್ರಗಳತ್ತ ಗಮನ ಹರಿಸಿದ್ದಾರೆ" ಎಂದು ಕಳೆದ ಕೆಲವು ದಿನಗಳಿಂದ ಬಿಜೆಪಿಯ ಪ್ರಧಾನ ಕಾರ್ಯದರ್ಶಿಗಳು ಮಾಧ್ಯಮದವರಲ್ಲಿ ಹೇಳುತ್ತಿದ್ದರು. ಇದನ್ನು ಹಾಗೇ ವರದಿ ಮಾಡಿದ ಕೆಲವು ಪತ್ರಕರ್ತರು ಬಿಜೆಪಿ ಈಗಿರುವ 282 ಸ್ಥಾನಗಳಲ್ಲದೆ ಇನ್ನೂ 115 ಸ್ಥಾನಗಳನ್ನು ಪಡೆಯಲು ಪ್ರಯತ್ನಿಸುತ್ತಿದೆ ಎಂದು ಬರೆದರು.
ಆದರೆ ಸ್ಕ್ರಾಲ್ . ಇನ್ ಪ್ರಕಾರ ಪರಿಸ್ಥಿತಿ ಇದಕ್ಕೆ ತದ್ವಿರುದ್ಧವಾಗಿದೆ. ನಿಜವಾಗಿ ಬಿಜೆಪಿ ಇದೇ ಮೊದಲ ಬಾರಿಗೆ ವಾಸ್ತವವನ್ನು ಸ್ವೀಕರಿಸಿ, ಮುಂದಿನ ದಾರಿ ನೋಡುತ್ತಿದೆ. ಅದು ಮುಂದಿನ ಚುಅನಾವಣೆಯಲ್ಲಿ ಕನಿಷ್ಠ ನೂರು ಸ್ಥಾನಗಳನ್ನು ಕಳಕೊಳ್ಳುವ ಸಾಧ್ಯತೆ ನಿಚ್ಚಳವಾಗಿದೆ ಎಂಬುದನ್ನು ಅರಿತುಕೊಂಡು ಆ ನಷ್ಟ ಭರ್ತಿ ಮಾಡಲು ಎಲ್ಲಿಂದೆಲ್ಲಾ ಸಾಧ್ಯವಿದೆ ಎಂದು ನೋಡುತ್ತಿದೆ. ಅದಕ್ಕಾಗಿಯೇ, ಬಿಜೆಪಿ ಮುಖಂಡರು ಮಧ್ಯ ಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ ಹಾಗು ಗುಜರಾತ್ ಗಳಲ್ಲಿ "ಸ್ವಾಭಾವಿಕವಾಗಿ " ಸೋಲುವ ಸ್ಥಾನಗಳನ್ನು ಈ ಹೊಸ ಕ್ಷೇತ್ರಗಳು ಸರಿದೂಗಿಸುತ್ತವೆ ಎಂದು ಪರೋಕ್ಷವಾಗಿ ಹೇಳುತ್ತಿದ್ದಾರೆ.
ಬಿಜೆಪಿಯ ಆಂತರಿಕ ಸಮೀಕ್ಷೆಯ ಪ್ರಕಾರ ಪಕ್ಷ ಗುಜರಾತ್ ನಲ್ಲೂ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಲಿದೆ. ಈಗ ಅಮಿತ್ ಷಾ ಕಣ್ಣಿಟ್ಟಿರುವ 115 ಹೊಸ ಕ್ಷೇತ್ರಗಳಿರುವುದು ಆಂಧ್ರ, ತೆಲಂಗಾಣ, ಕೇರಳ, ಒಡಿಶಾ, ತಮಿಳು ನಾಡು , ಪಶ್ಚಿಮ ಬಂಗಾಳ ಹಾಗು ಈಶಾನ್ಯ ರಾಜ್ಯಗಳಲ್ಲಿ. 2014 ರಲ್ಲಿ ಅಲ್ಲಿನ 200 ಸ್ಥಾನಗಳಲ್ಲಿ ಭರ್ಜರಿ ಮೋದಿ ಅಲೆ ಇರುವಾಗಲೇ ಪಕ್ಷ ಗೆದ್ದಿದ್ದು ಸುಮಾರು 15 ಸ್ಥಾನಗಳನ್ನು. ಹಾಗಿರುವಾಗ ಮುಂದಿನ ಚುನಾವಣೆಯಲ್ಲಿ 115 ಸ್ಥಾನಗಳನ್ನು ಗೆಲ್ಲುವುದು ಅಸಾಧ್ಯ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.