ನ್ಯಾಯಾಧಿಕರಣದ ಅಂತಿಮ ಆದೇಶದ ಪಾಲನೆಗೆ ಕಾವೇರಿ ಉಸ್ತುವಾರಿ ಸಮಿತಿ ಬದ್ಧ
ಹೊಸದಿಲ್ಲಿ,ಸೆ.11: ಸರ್ವೋಚ್ಚ ನ್ಯಾಯಾಲಯದ ನಿರ್ದೇಶದಂತೆ ತಮಿಳುನಾಡು ಮತ್ತು ಇತರ ರಾಜ್ಯಗಳಿಗೆ ಬಿಡುಗಡೆಗೊಳಿಸಬೇಕಾದ ಕಾವೇರಿ ನೀರಿನ ಪ್ರಮಾಣವನ್ನು ನಿರ್ಧರಿಸುವಾಗ ಕಾವೇರಿ ಉಸ್ತುವಾರಿ ಸಮಿತಿಯು ಕಾವೇರಿ ಜಲವಿವಾದ ನ್ಯಾಯಾಧಿಕರಣದ ಅಂತಿಮ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲಿದೆ ಎಂದು ಹಿರಿಯ ಅಧಿಕಾರಿಯೋರ್ವರು ಇಂದಿಲ್ಲಿ ತಿಳಿಸಿದರು.
ತಮಿಳುನಾಡು ಮತ್ತು ಇತರ ರಾಜ್ಯಗಳಿಗೆ ಬಿಡುಗಡೆಗೊಳಿಸಬೇಕಾದ ನೀರಿನ ಪ್ರಮಾಣವನ್ನು ನಿರ್ಧರಿಸಲು ಕೇಂದ್ರ ಜಲ ಸಂಪನ್ಮೂಲ ಕಾರ್ಯದರ್ಶಿ ಶಶಿ ಶೇಖರ್ ನೇತೃತ್ವದ ಸಮಿತಿಯು ಸೋಮವಾರ ಇಲ್ಲಿ ಸಭೆ ಸೇರಲಿದೆ.
ಸಮಿತಿಯು ತನ್ನ ಆದೇಶವನ್ನು ಹೊರಡಿಸುವ ಮುನ್ನ ಕಾವೇರಿ ನದಿ ಪಾತ್ರದಲ್ಲಿನ ವಾಸ್ತವಾಂಶಗಳ ಪರಿಶೀಲನೆಗಾಗಿ ತಜ್ಞರ ತಂಡವೊಂದನ್ನು ಕಳುಹಿಸುವಂತೆ ಕರ್ನಾಟಕವು ಕೇಂದ್ರವನ್ನು ಕೋರಿಕೊಂಡಿರುವ ಹಿನ್ನೆಲೆಯಲ್ಲಿ ಅಧಿಕಾರಿಯ ಈ ಹೇಳಿಕೆ ಹೊರಬಿದ್ದಿದೆ.
ತಜ್ಞರ ತಂಡವೊಂದನ್ನು ಕಳುಹಿಸುವಂತೆ ಸರ್ವೋಚ್ಚ ನ್ಯಾಯಾಲಯವು ತನ್ನ ಆದೇಶದಲ್ಲಿ ತಿಳಿಸಿಲ್ಲ,ಹೀಗಾಗಿ ನಾವು ಅಂತಹ ತಂಡವೊಂದನ್ನು ಕಳುಹಿಸಲು ಸಾಧ್ಯವಿಲ್ಲ. ಸಮಿತಿಯು ನ್ಯಾಯಾಧಿಕರಣದ ಆದೇಶವನ್ನು ಪಾಲಿಸಬೇಕೆಂದು ಸರ್ವೋಚ್ಚ ನ್ಯಾಯಾಲಯವು ನಿರ್ದಿಷ್ಟವಾಗಿ ಹೇಳಿದೆ. ಹೀಗಾಗಿ ನಾವದನ್ನು ಅಕ್ಷರಶಃ ಪಾಲಿಸಬೇಕಾಗುತ್ತದೆ ಎಂದು ಅವರು ಹೇಳಿದರು.
ಸರ್ವೋಚ್ಚ ನ್ಯಾಯಾಲಯವು ತನ್ನ ಸೆ.5ರ ಮಧ್ಯಂತರ ಆದೇಶದಲ್ಲಿ ಮುಂದಿನ 10 ದಿನಗಳ ಕಾಲ ಪ್ರತಿದಿನ ತಮಿಳನಾಡಿಗೆ 15,000 ಕ್ಯುಸೆಕ್ಸ್ ಕಾವೇರಿ ನೀರನ್ನು ಹರಿಸುವಂತೆ ಕರ್ನಾಟಕಕ್ಕೆ ಸೂಚಿಸಿದೆ. ಇದು ರಾಜ್ಯದ ಹಲವೆಡೆಗಳಲ್ಲಿ ಪ್ರತಿಭಟನೆಗೆ ಕಾರಣವಾಗಿದೆ.
ಸೋಮವಾರ ನಡೆಯಲಿರುವ ಕಾವೇರಿ ಉಸ್ತುವಾರಿ ಸಮಿತಿಯ ಸಭೆಯಲ್ಲಿ ತಮಿಳುನಾಡು,ಕರ್ನಾಟಕ,ಕೇರಳ ಮತ್ತು ಪುದುಚೇರಿಗಳ ಮುಖ್ಯ ಕಾರ್ಯದರ್ಶಿಗಳು ಹಾಗೂ ಕೇಂದ್ರ ಜಲ ಆಯೋಗದ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಸವೋಚ್ಚ ನ್ಯಾಯಾಲಯವು ಸೆ.16ರಂದು ಮತ್ತೆ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ.