9/11 ದಾಳಿ ನಡೆದದ್ದು ಹೇಗೆ, ಯಾರಿಂದ ?
ಹೊಸದಿಲ್ಲಿ, ಸೆ.11 : 9/11ರ ವರ್ಲ್ಡ್ ಟ್ರೇಡ್ ಸೆಂಟರ್ ದಾಳಿಗೆ ಇಂದಿಗೆ ಹದಿನೈದು ವರ್ಷವಾದರೂ ಅಮೆರಿಕನ್ನರ ಪಾಲಿಗೆ ಅದು ಗುಣವಾಗದ ಗಾಯ. ಆ ಗಾಯದ ನೋವು ಬೇರೆ ಬೇರೆ ರೀತಿಯಲ್ಲಿ ವಿಶ್ವದ ಹಲವು ದೇಶಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಆದರೆ ಇಂದಿಗೂ ಆ ದಾಳಿಯ ನೈಜ ಕಾರಣ ಕುರಿತು ಅಮೇರಿಕಾದ ಸರಕಾರ ನೀಡುವ ವಿವರಣೆಯನ್ನು ಎಲ್ಲ ಅಮೆರಿಕನ್ನರು ಭಿನ್ನಾಭಿಪ್ರಾಯವಿಲ್ಲದೆ ಒಪ್ಪುವುದಿಲ್ಲ.
ಈ ದಾಳಿಯ ಬಳಿಕ ಇದರ ಬಗ್ಗೆ ಹಲವು 'ಸಂಚಿನ ಸಿದ್ಧಾಂತ'ಗಳು ಚರ್ಚೆಗೆ ಬಂದಿವೆ. ಇವುಗಳ ಮುಖ್ಯ ಅಂಶ - ಈ ದಾಳಿ ಕೇವಲ ಅಲ್ ಖಾಯ್ದಾ ದಿಂದ ನಡೆದಿಲ್ಲ ಅಥವಾ ದಾಳಿಗೆ ಅಮೇರಿಕಾದ ಸರಕಾರದ ಭಾಗವಾಗಿರುವವರು ತಮ್ಮದೇ ಲಾಭಕ್ಕಾಗಿ ಸಹಕಾರ ನೀಡಿದ್ದಾರೆ ಎಂಬುದು. ಈ ಸಿದ್ಧಾಂತಗಳು ಈವರೆಗೆ ಸಾಬೀತು ಆಗಿಲ್ಲವಾದರೂ ಸಾಕಷ್ಟು ಸಂಖ್ಯೆಯಲ್ಲಿ ಅಮೆರಿಕನ್ನರು ಇದನ್ನು ಒಪ್ಪುತ್ತಾರೆ. 2006 ರಲ್ಲಿ ನ್ಯೂ ಯಾರ್ಕ್ ಟೈಮ್ಸ್ ಹಾಗು ಸಿಬಿಎಸ್ ನ್ಯೂಸ್ ನಡೆಸಿದ ಸಮೀಕ್ಷೆಯಲ್ಲಿ 53% ಜನರು ಈ ವಿಷಯದಲ್ಲಿ ಬುಷ್ ಸರಕಾರ ಏನನ್ನೂ ಮುಚ್ಚಿಡುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದರು.
ಕೆಲವು ಸಂಚಿನ ಸಿದ್ಧಾಂತಗಳು ಇಲ್ಲಿವೆ
ವಿಮಾನ ಅಲ್ಲ, ಬಾಂಬ್ ನಿಂದ ವರ್ಲ್ಡ್ ಟ್ರೇಡ್ ಸೆಂಟರ್ ನೆಲಸಮ:
ಅಲ್ಯೂಮಿನಿಯಂ ದೇಹದ ವಿಮಾನಗಳು ಉಕ್ಕಿನಿಂದ ಮಾಡಿರುವ ಡಬ್ಲ್ಯೂ ಟಿ ಸಿ ಕಟ್ಟಡಗಳ ಗೋಡೆಗಳನ್ನು ನೆಲಸಮ ಮಾಡುವುದು ಹೇಗೆ ಎಂಬುದು ಇಂದಿಗೂ ಉತ್ತರ ಸಿಗದ ಪ್ರಶ್ನೆ. ಡಬ್ಲ್ಯೂ ಟಿ ಸಿಯ ಎರಡು ಕಟ್ಟಡಗಳ ಆಯಕಟ್ಟಿನ ಸ್ಥಳಗಳಲ್ಲಿ ಮೊದಲೇ ಸ್ಪೋಟಕಗಳನ್ನು ಇಡಲಾಗಿತ್ತು. ಅವುಗಳ ಸ್ಪೋಟದಿಂದಲೇ ಕಟ್ಟಡಗಳು ನೆಲಸಮವಾದವು ಎಂಬುದು ಒಂದು ಸಿದ್ಧಾಂತ. ಸಾಲದ್ದಕ್ಕೆ , ಕಟ್ಟಡ ಕುಸಿಯುವ ಮೊದಲು ಭಾರೀ ಸ್ಪೋಟದ ಸದ್ದು ಕೇಳಿತ್ತು ಎಂದು ಕೆಲವು ಪ್ರತ್ಯಕ್ಷದರ್ಶಿಗಳು ಹೇಳಿದ್ದು ವರದಿಯಾಗಿತ್ತು.
ಪೆಂಟಗಾನ್ ಮೇಲೆ ಬೋಯಿಂಗ್ 757 ನಿಂದ ದಾಳಿಯಾಗಿಲ್ಲ :
ಈ ಸಿದ್ಧಾಂತದ ಪ್ರಕಾರ ದಾಳಿಯ ಬಳಿಕ ಪೆಂಟಗಾನ್ ನಲ್ಲಿ ಕೇವಲ 16 ಅಡಿಗಳ ರಂಧ್ರವಾಗಿದೆ. ಆದರೆ ದಾಳಿ ಮಾಡಿದೆ ಎನ್ನಲಾದ ವಿಮಾನ 125 ಅಡಿ ಅಗಲ ಹಾಗು 125 ಅಡಿ ಉದ್ದವಿತ್ತು. ಹಾಗಾಗಿ ಪೆಂಟಗಾನ್ ಮೇಲೆ ದಾಳಿ ನಡೆದಿದ್ದು ಬೇರೊಂದು ಮಿಸೈಲ್ ನಿಂದ. ಫ್ರೆಂಚ್ ಲೇಖಕ ಥಿಯರಿ ಮೇಸನ್ ಪ್ರಕಾರ ಪೆಂಟಗಾನ್ ಮೇಲಿನದ್ದು ಅಮೆರಿಕದ ಮಿಲಿಟರಿ ಬಂಡಾಯದ ದಾಳಿಯಾಗಿತ್ತು.
ಟವರ್ 7 ಕುಸಿದಿದ್ದು :
ಡಬ್ಲ್ಯೂ ಟಿ ಸಿ ಯ ಉತ್ತರ ಹಾಗು ದಕ್ಷಿಣ ಬ್ಲಾಕ್ ಗಳು ನೆಲಸಮವಾಗಿ ಏಳು ಗಂಟೆಗಳ ಬಳಿಕ ಪಕ್ಕದ 47 ಮಹಡಿಗಳ ಟವರ್ 7 ನಿಗೂಢವಾಗಿ ಕುಸಿಯಿತು. ಇದಕ್ಕೆ ಡಬ್ಲ್ಯೂ ಟಿ ಸಿ ಕುಸಿಯುವಾಗ ಉಂಟಾದ ಬೆಂಕಿ ಕಾರಣ ಎಂದು ಹೇಳಲಾಯಿತು. ಆದರೆ ಇದು ವೈಜ್ಞಾನಿಕವಾಗಿ ಒಪ್ಪುವ ವಿಷಯವಲ್ಲ. ಟವರ್ 7 ನ್ನು ಸ್ಪೋಟಕ ಬಳಸಿಯೇ ನೆಲಸಮ ಮಾಡಲಾಗಿದೆ ಎಂಬುದು ಇನ್ನೊಂದು ಸಿದ್ಧಾಂತ.
ಅಮೇರಿಕ ರಕ್ಷಣಾ ಇಲಾಖೆಯ ನಿಧಾನ ಪ್ರತಿಕ್ರಿಯೆ:
ವಿಮಾನಗಳು ಅಪಹರಣ ವಾಗಿವೆ ಎಂದು ಮಾಹಿತಿ ಬಂದ ಬಳಿಕವೂ ರಕ್ಷಣಾ ಇಲಾಖೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಲಿಲ್ಲ. ಸರಕಾರದಿಂದಲೇ ಯಾವುದೇ ಕ್ರಮ ಕೈಗೊಳ್ಳದಂತೆ ನಿರ್ದೇಶನವಿತ್ತು ಎಂಬುದು ಈ ಸಿದ್ಧಾಂತ.
ಇವು ಹಾಗು ಇನ್ನಷ್ಟು ' ಸಂಚಿನ ಸಿದ್ಧಾಂತಗಳು ' ಜಗತ್ತಿನೆಲ್ಲೆಡೆ ಭಾರೀ ಚರ್ಚೆಯಲ್ಲಿವೆ ಯಾದರೂ ಇವು ಸಾಬೀತಾಗಿಲ್ಲ. ಹಾಗಾಗಿ ಸದ್ಯಕ್ಕೆ ಇವು ವದಂತಿಗಳು ಅಷ್ಟೇ.
Courtesy : Indian Express