ತಾಂಝಾನಿಯಾದಲ್ಲಿ ಪ್ರಬಲ ಭೂಕಂಪ: ಕನಿಷ್ಠ 12 ಮಂದಿ ಸಾವು
Update: 2016-09-11 22:08 IST
ದಾರೆಸ್ಸಲಾಂ, ಸೆ.11: ವಾಯವ್ಯ ತಾಂಝಾನಿಯಾದಲ್ಲಿ ರವಿವಾರ ಮುಂಜಾನೆ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಕನಿಷ್ಠ 13 ಮಂದಿ ಮೃತಪಟ್ಟಿದ್ದು, 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ರಿಕ್ಟರ್ ಮಾಪಕದಲ್ಲಿ 5.3 ತೀವ್ರತೆಯನ್ನು ದಾಖಲಿಸಿರುವ ಭೂಕಂಪದ ಕೇಂದ್ರ ಬಿಂದು ವಾಯವ್ಯ ತಾಂಜಾನಿಯಾದ ನಗರವಾದ ನುಸುಂಗಾದಲ್ಲಿತ್ತೆಂದು ಅಮೆರಿಕದ ಭೌಗೋಳಿಕ ಸರ್ವೇಕ್ಷಣಾ ಸಂಸ್ಥೆ ತಿಳಿಸಿದೆ.
‘‘ಪ್ರಸ್ತುತ ಪರಿಸ್ಥಿತಿ ಶಾಂತವಾಗಿದ್ದು, ನಿಯಂತ್ರಣದಲ್ಲಿದೆಯೆಂದು ಭೂಕಂಪಗ್ರಸ್ತ ನಗರವಾದ ನುಸುಂಗಾದ ಸಮೀಪದ ಪಟ್ಟಣವಾದ ಬುಕೊಬಾದ ಜಿಲ್ಲಾ ಆಯುಕ್ತ ದಿಯೊದಾಟುಸ್ ಕಿನಾವೊಲೊ ಹೇಳಿದ್ದಾರೆ.
ತಾಂಝಾನಿಯಾದ ನೆರೆಹೊರೆಯ ದೇಶಗಳಾದ ರ್ವಾಂಡಾ, ಬುರುಂಡಿ, ಉಗಾಂಡ ಹಾಗೂ ಕೆನ್ಯಾಗಳಲ್ಲಿಯೂ ಭೂಮಿ ನಡುಗಿದ ಅನುಭವವಾಗಿದೆಯೆಂದು ತಿಳಿದುಬಂದಿದೆ.