ಸೌಹಾರ್ದಕ್ಕೆ ಮಾದರಿಯಾದ ಅಯೋಧ್ಯೆ
ಅಯೋಧ್ಯೆ, ಸೆ.12: ಹಿಂದೂ ಧಾರ್ಮಿಕ ತಾಣವಾದ ಅಯೋಧ್ಯೆಯಲ್ಲಿ ಮಾಂಸಕ್ಕಾಗಿ ಪ್ರಾಣಿಹತ್ಯೆ ನಿಷೇಧ. ಕಚ್ಚಾ ಅಥವಾ ಬೇಯಿಸಿದ ಮಾಂಸವನ್ನು ಇಲ್ಲಿ ವಿವಾಹಗಳಲ್ಲೂ ಬಡಿಸುವಂತಿಲ್ಲ. ಆದರೆ ವರ್ಷಕ್ಕೊಂದು ಬಾರಿ ಸ್ಥಳೀಯ ಸಂಸ್ಥೆ ಮುಸ್ಲಿಂ ಹಬ್ಬವಾದ ಬಕ್ರೀದ್‌ಗಾಗಿ ನಿಷೇಧವನ್ನು ಸಡಿಲಿಸುತ್ತದೆ. ಈ ವರ್ಷ ಕೂಡಾ ಅಧಿಕೃತ ಆದೇಶ ಇಲ್ಲದಿದ್ದರೂ ಹಬ್ಬಕ್ಕಾಗಿ ನಿಷೇಧ ರದ್ದುಮಾಡಿದೆ.
"ಎರಡು ಸಮುದಾಯಗಳ ನಡುವಿನ ಪರಸ್ಪರ ಅರ್ಥಮಾಡಿಕೊಳ್ಳುವಿಕೆಯಿಂದಾಗಿ ಇದು ಸಾಧ್ಯವಾಗಿದೆ" ಎಂದು ಸ್ಥಳೀಯ ಸಂಸ್ಥೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ. "ಮಾಂಸ ಮತ್ತು ಗೋಮಾಂಸದ ಬಗ್ಗೆ ದೊಡ್ಡ ವಿವಾದ ಭುಗಿಲೆದ್ದಿದ್ದರೂ, ಈ ದೇಗುಲ ನಗರಿ ಸಹಿಷ್ಣುತೆ ಹಾಗೂ ಧಾರ್ಮಿಕ ಭಾವನೆಗಳ ಬಗ್ಗೆ ಪರಸ್ಪರ ಸಮುದಾಯಗಳಲ್ಲಿ ಗೌರವ ಭಾವನೆ ಮಾದರಿಯಾಗಿದೆ" ಎಂದು ಅವರು ಹೇಳುತ್ತಾರೆ.
ಇದು ಸ್ವಯಂಪ್ರೇರಿತ ಕ್ರಮವಾಗಿದ್ದು, ಇದುವರೆಗೆ ಈ ವಿಷಯ ಗಮನಕ್ಕೇ ಬಂದಿರಲಿಲ್ಲ. ಆದರೆ ಇದೀಗ ಆಹಾರ ಪದ್ಧತಿಗಾಗಿ ಜನರನ್ನು ಹತ್ಯೆ ಮಾಡುವ, ದಾಳಿ ಮಾಡುದ ಪ್ರಸ್ತುತ ಸನ್ನಿವೇಶದಲ್ಲಿ, ಅಯೋಧ್ಯೆ ಸಾಮರಸ್ಯಕ್ಕೆ ಒಳ್ಳೆಯ ಉದಾಹರಣೆಯಾಗಿದೆ. ಯಾವ ಹಿಂದೂ ಧಾರ್ಮಿಕ ಮುಖಂಡರು ಅಥವಾ ಮಹಾಂತರು ಕೂಡಾ ಬಕ್ರೀದ್ ಹಬ್ಬದ ಖುರ್ಬಾನಿ ಧಾರ್ಮಿಕ ವಿಧಿವಿಧಾನ ನೆರವೇರಿಸಲು ಆಕ್ಷೇಪಿಸುವುದಿಲ್ಲ ಎಂದು ಸ್ಥಳೀಯ ನಿವಾಸಿ ಜಮಾಲ್ ಅಖ್ತರ್ ಹೇಳುತ್ತಾರೆ.
"ಇಲ್ಲಿ ಪ್ರಾಣಿಹತ್ಯೆ ನಿಷೇಧವಾಗಿದ್ದರೂ, ಬಕ್ರೀದ್ ಹಬ್ಬದಲ್ಲಿ ಮುಸ್ಲಿಮರು ಯಾವ ಭೀತಿಯೂ ಇಲ್ಲದೇ ಖುರ್ಬಾನಿ ನೆರವೇರಿಸುತ್ತಲೇ ಬಂದಿದ್ದೇವೆ" ಎಂದು ಪಾಲಿಕೆ ಸದಸ್ಯ ಹಾನಿ ಅಸಾದ್ ಅಹ್ಮದ್ ವಿವರಿಸಿದ್ದಾರೆ.