ಅಗತ್ಯ ವಸ್ತುಗಳ ಬೆಲೆ ಏರಿಕೆ ತಡೆಯಲು ಹೊಸ ಕ್ರಮಕ್ಕೆ ಮುಂದಾದ ಕೇಂದ್ರ ಸರಕಾರ

Update: 2016-09-12 03:00 GMT

ಹೊಸದಿಲ್ಲಿ, ಸೆ.12: ಇದು ಗ್ರಾಹಕರಿಗೆ ಸಿಹಿ ಸುದ್ದಿ. ಕೇಂದ್ರ ಹಾಗೂ ರಾಜ್ಯ ಸರಕಾರ ಬೇಳೆ, ಸಕ್ಕರೆ, ಹಾಲು ಮತ್ತು ಅಡುಗೆ ಎಣ್ಣೆಯಂಥ ಅಗತ್ಯವಸ್ತುಗಳ ಬೆಲೆಯನ್ನು ನಿಗದಿಪಡಿಸಿ, ಅಧಿಸೂಚನೆ ಹೊರಡಿಸಿದ ಬಳಿಕ ಅವುಗಳನ್ನು ಪ್ಯಾಕ್ ಮಾಡಿ ಮಾರಾಟ ಮಾಡುವ ಹೆಸರಿನಲ್ಲಿ ಅಧಿಕ ದರಕ್ಕೆ ಮಾರಾಟ ಮಾಡುವಂತಿಲ್ಲ.

ಇತ್ತೀಚೆಗೆ ಬೇಳೆಕಾಳುಗಳ ಬೆಲೆ ಗಗನಕ್ಕೇರಿದಾಗ, ಮಾರುಕಟ್ಟೆಯಲ್ಲಿ ಬಿಡಿ ಹಾಗೂ ಪ್ಯಾಕೇಟ್ ಬೇಳೆಗಳ ಬೆಲೆಯಲ್ಲಿ ಭಾರೀ ವ್ಯತ್ಯಾಸ ಇದ್ದ ಹಿನ್ನೆಲೆಯಲ್ಲಿ, ಗ್ರಾಹಕ ವ್ಯವಹಾರಗಳ ಸಚಿವಾಲಯ, ಕಾನೂನಾತ್ಮಕ ಮಾಪನಶಾಸ್ತ್ರ (ಪ್ಯಾಕ್ ಮಾಡಿದ ವಸ್ತುಗಳ) ನಿಯಮಾವಳಿಗೆ ತಿದ್ದುಪಡಿ ತಂದು, ಚಿಲ್ಲರೆ ಮಾರಾಟ ದರ ನಿಗದಿಪಡಿಸುವ ಅಧಿಕಾರವನ್ನು ಸರಕಾರಕ್ಕೆ ನೀಡಲು ನಿರ್ಧರಿಸಿದೆ.

ಅಗತ್ಯವಸ್ತುಗಳ ಕಾಯ್ದೆಯಡಿ ಚಿಲ್ಲರೆ ಮಾರಾಟ ದರವನ್ನು ನಿಗದಿಪಡಿಸಿ ಅಧಿಸೂಚನೆ ಹೊರಡಿಸಿದ ಬಳಿಕ ಅದು ಇಡೀ ದೇಶಕ್ಕೆ ಅನ್ವಯವಾಗಲಿದೆ. ಈ ಸಂಬಂಧ ಸೆಪ್ಟೆಂಬರ್ 7ರಂದು ಅಧಿಸೂಚನೆ ಹೊರಡಿಸಲಾಗಿದೆ. ಒಂದು ಬಾರಿ ಸರಕಾರ ಒಂದು ಕೆ.ಜಿ. ಅಥವಾ 500 ಗ್ರಾಂ.ನ ದರವನ್ನು ನಿಗದಿಪಡಿಸಿದ ಬಳಿಕ, ಎಲ್ಲ ಮಾರಾಟ ಮಳಿಗೆಗಳೂ ಅದನ್ನು ಪಾಲಿಸಬೇಕಾಗುತ್ತದೆ.

ಇದರ ಉಲ್ಲಂಘನೆಗೆ 5,000 ರೂ. ದಂಡ ವಿಧಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ವ್ಯವಸ್ಥೆ ಜಾರಿಗೆ ಬಂದ ಬಳಿಕ ಅಗತ್ಯ ವಸ್ತುಗಳಿಗೆ ಇರುವ ಗರಿಷ್ಠ ಮಾರಾಟ ಬೆಲೆ ಎಂಬ ಪರಿಕಲ್ಪನೆ ರದ್ದಾಗಲಿದೆ. ಕೃತಕವಾಗಿ ಬೇಳೆಕಾಳುಗಳ ಬೆಲೆಯನ್ನು ಹೆಚ್ಚಿಸಿದ ಕಾರಣದಿಂದ ಸರಕಾರ ಇಂಥ ಕ್ರಮ ಕೈಗೊಳ್ಳುವುದು ಅನಿವಾರ್ಯವಾಯಿತು ಎಂದು ಮೂಲಗಳು ಹೇಳಿವೆ.

ಕಳೆದ ವರ್ಷ ಹರ್ಯಾಣ ಸರಕಾರ ಬೇಳೆಕಾಳುಗಳ ಗರಿಷ್ಠ ಮಾರಾಟ ಬೆಲೆಯನ್ನು ನಿಗದಿಪಡಿಸಿತ್ತು ಹಾಗೂ ಮಹಾರಾಷ್ಟ್ರ ಸರಕಾರ ಕೂಡಾ ಈ ನಿಟ್ಟಿನಲ್ಲಿ ಚಿಂತನೆ ನಡೆಸಿದೆ. ಕಳೆದ ಜುಲೈನಲ್ಲಿ ಗ್ರಾಹಕ ವ್ಯವಹಾರಗಳ ಸಚಿವಾಲಯ, ರಾಜ್ಯ ಸರಕಾರಗಳಿಗೆ ಸೂಚನೆ ನೀಡಿ ಬೇಳೆಕಾಳುಗಳ ಮತ್ತು ಇತರ ಅಗತ್ಯವಸ್ತುಗಳ ಬೆಲೆ ನೀತಿಯನ್ನು ಜಾರಿಗೆ ತರುವಂತೆ ಸೂಚನೆ ನೀಡಿತ್ತು.

ಅಗತ್ಯ ವಸ್ತುಗಳ ಕಾಯ್ದೆಯ ಸೆಕ್ಷನ್ 2ರ ಅನ್ವಯ, ಅಗತ್ಯ ವಸ್ತುಗಳ ಉತ್ಪಾದನೆ, ಪೂರೈಕೆ ಹಾಗೂ ವಿತರಣೆಯ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ರಾಜ್ಯ ಸರಕಾರಗಳಿಗೆ ಸೂಚಿಸಲು ಕೇಂದ್ರಕ್ಕೆ ಅಧಿಕಾರವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News