ತ್ಯಾಗ ಸಂದೇಶದ ಬಕ್ರೀದ್
ಬಕ್ರೀದ್ ಬಂದಿದೆ. ಇಸ್ಲಾಮಿ ಕ್ಯಾಲೆಂಡರ್‌ನ ಕೊನೆಯ ಮಾಸವಾದ ದುಲ್‌ಹಜ್ 10ನೆ ದಿನವನ್ನು ‘ಈದುಲ್ ಅಝ್‌ಹಾ’ ಅಥವಾ ದೊಡ್ಡ ಹಬ್ಬ ಎಂದು ಕರೆಯಲಾಗುತ್ತಿದ್ದು, ಸ್ಥಳೀಯವಾಗಿ ‘ಬಕ್ರೀದ್’ ಎನ್ನಲಾಗುತ್ತದೆ. ಹಬ್ಬದ ಆಚರಣೆಯು ಚಂದ್ರದರ್ಶನವನ್ನು ಅವಲಂಬಿಸಿರುವುದರಿಂದ ಕರ್ನಾಟಕ ಕರಾವಳಿ. ಅರಬ್ ರಾಷ್ಟ್ರಗಳು ಸೇರಿದಂತೆ ಹಲವೆಡೆ ಈ ಬಾರಿಯ ಬಕ್ರೀದನ್ನು ಸೆ.12 ಸೋಮವಾರದಂದು ಕೆಲವು ಕಡೆ ಮಂಗಳವಾರದಂದೂ ಆಚರಿಸಲಾಗುತ್ತದೆ.
ಬಕ್ರೀದ್‌ಗೊಂದು ವಿಶಿಷ್ಟ ಹಿನ್ನೆಲೆ ಇದೆ. ಪೂರ್ವ ಕಾಲದ ಪುಣ್ಯಪುರುಷರ ಸ್ಮರಣೆಯಿದೆ. ಸರಿಸುಮಾರು ಐದು ಸಾವಿರ ವರ್ಷಗಳ ಹಿಂದೆ ಜೀವಿಸಿದ್ದ ಪ್ರವಾದಿ ಇಬ್ರಾಹೀಂ(ಅ) ಎನ್ನುವವರ ತ್ಯಾಗೋಜ್ವಲದಿಂದ ಬದುಕಿನೊಂದಿಗೆ ಥಳಕು ಹಾಕಿಕೊಂಡಿದೆ.
ಇಸ್ಲಾಂ ಧರ್ಮದ ಪ್ರಚಾರಕ್ಕಾಗಿ ಅಲ್ಲಾಹನು ಭೂಮಿಗೆ ನಿಯೋಜಿಸಿದ ಒಂದುಕಾಲು ಲಕ್ಷದಷ್ಟು ಪ್ರವಾದಿಗಳ ಪೈಕಿ ಪ್ರಮುಖರೂ, ಅಂತ್ಯ ಪ್ರವಾದಿ ಮುಹಮ್ಮದ್ ಪೈಗಂಬರ್(ಸ) ರವರ ಪಿತಾಮಹರ ಸಾಲಿನಲ್ಲಿ ಸೇರುವವರೂ ಆದ ಇಬ್ರಾಹೀಂರವರು ಪ್ರವಾದಿ ಮುಹಮ್ಮದ್(ಸ) ರವರ ಬಳಿಕ ಅತ್ಯಂತ ಗೌರವಿಸಲ್ಪಡುವವರು. ಮುಸ್ಲಿಮರೇ ಅಲ್ಲದೆ ಯಹೂದ್ಯರು ಹಾಗೂ ಕ್ರೈಸ್ತರು ಕೂಡಾ ಇವರನ್ನು ಗೌರವಿಸುತ್ತಿದ್ದು ಬೈಬಲ್‌ನಲ್ಲಿ ಇವರ ಹೆಸರನ್ನು ‘ಅಬ್ರಹಾಂ’ ಎಂದು ಉಲ್ಲೇಖಿಸಲಾಗಿದೆ.
ಜೀವನವೆಂಬುದೊಂದು ವಿಧಿಯಾಟ. ಇಹಲೋಕವೆನ್ನುವುದು ಪರೀಕ್ಷಾ ತಾಣ. ಬದುಕಿನಲ್ಲಿ ಬಂದೆರಗುವ ಸಂಕಟ, ಸವಾಲುಗಳೆಲ್ಲವೂ ಸೃಷ್ಟಿಕರ್ತನ ವಿಧಿಯಾಗಿರುವುದರಿಂದ ವಿಧೇಯತೆಯಿಂದ ಒಪ್ಪಿಕೊಳ್ಳುವುದೇ ಮನುಷ್ಯನ ಹೊಣೆ. ಈ ಹೊಣೆಯನ್ನು ಅತ್ಯಂತ ಸಮರ್ಪಕವಾಗಿ ನಿರ್ವಹಿಸಿ ದೇವನಿಷ್ಠೆಗೆ ಅತ್ಯುನ್ನತ ನಿದರ್ಶನವನ್ನು ಒದಗಿಸಿದವರು ಪ್ರವಾದಿ ಇಬ್ರಾಹೀಂ. ಅವರು ಅಕ್ಷರಶಃ ಅಗ್ನಿಪರೀಕ್ಷೆಗೆ ಗುರಿಯಾಗಿದ್ದರು. ದುಷ್ಟರಾಜ ನಮ್ರೂದ್ ಎನ್ನುವವನ ವಿರುದ್ಧ ಬಂಡೆದ್ದ ಕಾರಣಕ್ಕೆ ಅವರನ್ನು ಭಾರೀ ಅಗ್ನಿಕುಂಡವೊಂದಕ್ಕೆ ಎಸೆಯಲಾಗಿತ್ತು. ಆದರೂ ದೇವ ಸಹಾಯದಿಂದ ಪಾರಾಗಿ ಬಂದಿದ್ದರು.
ಸಂತಾನ ಭಾಗ್ಯವಿಲ್ಲದೆ ಸಂಕಟಪಡುತ್ತಿದ್ದ ಅವರಿಗೆ ತೀರಾ ವೃದ್ದಾಪ್ಯದಲ್ಲಿ, ನಿರೀಕ್ಷೆ ಕಳೆದುಕೊಂಡಿದ್ದ ಕಾಲದಲ್ಲಿ ಇಸ್ಮಾಯೀಲ್ ಎಂಬ ಮಗು ಜನಿಸುತ್ತದೆ. ಆದರೆ ಕೆಲಕಾಲದ ಬಳಿಕ ಪುಟ್ಟ ಮಗುವಿನ ಸಹಿತ ಪತ್ನಿಯನ್ನು ನಿರ್ಜನವಾದ ಮಕ್ಕಾದ ಮರುಭೂಮಿಯಲ್ಲಿ ಬಿಟ್ಟು ಬರಬೇಕೆಂದು ದೇವಾಜ್ಞೆ ಉಂಟಾಗುತ್ತದೆ. ಅದನ್ನು ಅವರು ಪಾಲಿಸುತ್ತಾರೆ. ಕೆಲಕಾಲದ ಬಳಿಕ ಅವರು ಒಂದಾಗುತ್ತಾರೆ. ಮಗು ಬೆಳೆಯುತ್ತಾ ಹದಿಹರೆಯಕ್ಕೆ ಕಾಲಿಡಬೇಕೆನ್ನುವಷ್ಟರಲ್ಲಿ ಮತ್ತೆ ದೇವಾಜ್ಞೆ. ಮಗುವಿನ ಬಲಿದಾನಕ್ಕೆ! ಏಕೈಕ ಕರುಳಕುಡಿಯನ್ನು ತಾನೇ ಕತ್ತು ತುಂಡರಿಸಬೇಕೆಂಬ ಅತ್ಯಂತ ಅಸಹನೀಯವಾದ ಕಠಿಣ ವಿಧಿ. ಮಗುವನ್ನು ಕೊಟ್ಟ ಅಲ್ಲಾಹನಿಗೆ ಮರಳಿ ಕೇಳುವುದಕ್ಕೂ ಹಕ್ಕಿದೆ ಎಂದುಕೊಂಡ ಇಬ್ರಾಹೀಂ ಅವರು ದೇವಾದೇಶ ಪಾಲಿಸುವುದಕ್ಕೆ ಸಿದ್ಧರಾದರು. ಪುತ್ರ ವಾತ್ಸಲ್ಯಕ್ಕಿಂತ ದೇವಸಂಪ್ರೀತಿಯೇ ಅವರಿಗೆ ಮುಖ್ಯವಾಗಿತ್ತು. ದೇವನಿಷ್ಠ ತಂದೆಯ ಗರಡಿಯಲ್ಲಿ ತಂದೆಗೆ ತಕ್ಕ ಮಗನಾಗಿ ಬೆಳೆದಿದ್ದ ಇಸ್ಮಾಯೀಲ್(ಅ) ದೇವ ವಿಧಿ ಪಾಲಿಸಲು ತಂದೆಗೆ ಅನುವಾಗುವಂತೆ ಕೊರಳು ತೋರಿಸಿದರು. ಇಬ್ರಾಹೀಂ(ಅ) ಕತ್ತಿಯನ್ನು ಕೊರಳ ಮೇಲಿಟ್ಟರು. ಅಷ್ಟರಲ್ಲೊಂದು ಪವಾಡ ನಡೆಯುತ್ತದೆ. ದೇವದೂತ ಜಿಬ್‌ರೀಲರು ಆಡೊಂದರ ಸಮೇತ ಬಂದು ದೇವಾಜ್ಞೆ ಬದಲಾಗಿರುವುದನ್ನು ತಿಳಿಸುತ್ತಾರೆ. ತಮ್ಮ ಭಕ್ತಿ ಮತ್ತು ಬದ್ಧತೆಗೆ ದೇವನು ಸಂಪ್ರೀತನಾಗಿದ್ದಾನೆ. ಮಗನ ಬದಲು ಆಡನ್ನು ಕತ್ತರಿಸುವಂತೆ ಆಲ್ಲಾಹು ಆದೇಶಿಸಿದ್ದಾನೆ ಎಂದು ದೇವದೂತರು ತಿಳಿಸುತ್ತಾರೆ. ಆ ತ್ಯಾಗ ಸನ್ನದ್ಧ ಅಪ್ಪ-ಮಗನಿಗೆ ಜೀವದಾನ ಸಿಗುವುದರೊಂದಿಗೆ ಹಬ್ಬದ ವಾತಾವರಣ ಮೂಡುತ್ತದೆ. ಅಂದಿನಿಂದ ಆ ದಿನ ಬಕ್ರೀದ್ ಅಥವಾ ಬಲಿದಾನದ ಹಬ್ಬವಾಗಿ ಆಚರಿಸಲ್ಪಡುತ್ತದೆ. ಆಡು, ಕುರಿ, ಒಂಟೆ ಯಾ ಜಾನುವಾರುಗಳನ್ನು ಮಾಂಸ ಮಾಡಿ ಬಡವರಿಗೆ ದಾನ ನೀಡುವುದು ಆ ದಿನದ ಅತ್ಯಂತ ಶ್ರೇಷ್ಠ ಪುಣ್ಯಕರ್ಮವಾಗಿ ಪರಿಗಣಿಸಲಾಗುತ್ತದೆ. ಇದನ್ನು ‘ಕುರ್ಬಾನಿ’ ಎನ್ನಲಾಗುತ್ತದೆ.
ಜೀವದಾನ ಪಡೆದ ಮಗನೊಂದಿಗೆ ಸೇರಿ ಇಬ್ರಾಹೀಮರು ದೇವಾದೇಶದಂತೆ ಅತ್ಯಂತ ಪ್ರಾಚೀನ ದೇವಮಂದಿರವಾದ ಮಕ್ಕಾದಲ್ಲಿರುವ ‘ಕಾಬಾ’ವನ್ನು ಜೀರ್ಣೋದ್ಧಾರ ಮಾಡುತ್ತಾರೆ ಮತ್ತು ಅಲ್ಲಿಗೆ ಬಂದು ‘ಹಜ್’ ಎಂಬ ವಿಶಿಷ್ಟ ಆರಾಧನೆ ನಡೆಸುವಂತೆ ಲೋಕ ಜನತೆಗೆ ಕರೆ ನೀಡುತ್ತಾರೆ. ಆ ಕರೆಗೆ ಓಗೊಟ್ಟವರಂತೆ ಇಂದಿಗೂ ಲಕ್ಷಾಂತರ ಮುಸ್ಲಿಮರು ಜಗತ್ತಿನ ಎಲ್ಲೆಡೆಯಿಂದ ಮಕ್ಕಾಕ್ಕೆ ತೆರಳಿ ಹಜ್ ನಿರ್ವಹಿಸುತ್ತಾರೆ.
ಅಚಂಚಲವಾದ ದೇವನಿಷ್ಠೆಯಿಂದ ಕೂಡಿದ ತ್ಯಾಗಪೂರ್ಣ ಬದುಕು ಸಾಗಿಸಿದ ಇಬ್ರಾಹೀಂರನ್ನು ಅಲ್ಲಾಹು ಮೆಚ್ಚುತ್ತಾನೆ ಮತ್ತು ‘ಖಲೀಲುಲ್ಲಾಹ್’(ಅಲ್ಲಾಹನ ಆಪ್ತ ಮಿತ್ರ) ಎಂಬ ಹೆಸರನ್ನು ಪ್ರದಾನಿಸುತ್ತಾನೆ. ಅವರ ಸ್ಮರಣೆಯನ್ನು ಶಾಶ್ವತಗೊಳಿಸುವುದಕ್ಕಾಗಿ ಬಕ್ರೀದ್ ಆಚರಣೆ ಮಾಡಲು ಆದೇಶಿಸುತ್ತಾನೆ. ಆದುದರಿಂದಲೇ, ಬಕ್ರೀದ್ ತ್ಯಾಗದ ಸಂದೇಶವನ್ನು ಸಾರುತ್ತದೆ. ಜತೆಗೆ ಪ್ರೀತಿ ಮತ್ತು ಭ್ರಾತೃತ್ವವನ್ನು ಎತ್ತಿ ಹಿಡಿಯುತ್ತದೆ.
ಮಾಂಸದೂಟ ಭರ್ಜರಿ ಸತ್ಕಾರದ ಸಂಕೇತ. ಇದು ಉಳ್ಳವರ ಮನೆಗೆ ಸೀಮಿತವಾಗಬಾರದು. ಧನಿಕನ ಮನೆಯಲ್ಲಿ ಮಾಂಸ ಬೇಯುವ ಪರಿಮಳಕ್ಕೆ ಬಡವನ ಮನೆಯ ಮಕ್ಕಳು ಬಾಯಿ ನೀರೂರಿಸುವುದಕ್ಕೆ ಹಬ್ಬ ಸೀಮಿತವಾಗಬಾರದು. ಅದಕ್ಕಾಗಿ ಹಬ್ಬದಂದು ಕುರ್ಬಾನಿ ಅಥವಾ ಮಾಂಸದಾನ ನೀಡುವಂತೆ ನಿರ್ದೇಶಿಸಲಾಗಿದೆ. ಹಬ್ಬದ ಸಂಭ್ರಮದಲ್ಲೂ ಸೃಷ್ಟಿಕರ್ತನನ್ನು ಮರೆಯದಿರುವುದಕ್ಕಾಗಿ ಅಂದು ವಿಶೇಷ ಪ್ರಾರ್ಥನೆಗಳನ್ನು ನಡೆಸುವಂತೆಯೂ ’ಅಲ್ಲಾಹು ಅಕ್ಬರ್’ (ಅಲ್ಲಾಹನೇ ದೊಡ್ಡವನು) ಎಂದು ನಿರಂತರ ಹೇಳುವಂತೆಯೂ ವಿಧಿಸಲಾಗಿದೆ. ಆ ದಿನ ಕುಟುಂಬ ಸಂಬಂಧಿಗಳನ್ನು ಭೇಟಿ ಮಾಡುವುದಕ್ಕೆ ವಿಶೇಷ ಪ್ರಾಧಾನ್ಯತೆ ನೀಡಲಾಗಿದೆ. ಹೀಗೆ ದೇವರು ಮತ್ತು ಮಾನವರ ಜತೆಗಿನ ಸಂಬಂಧವನ್ನು ಗಾಢಗೊಳಿಸುವುದಕ್ಕೆ ಈದ್ ಪ್ರೇರಣೆ ನೀಡುತ್ತದೆ. ಹಬ್ಬಗಳ ಹಿನ್ನೆಲೆಯಲ್ಲಿ ಅಡಗಿದ ಸಂದೇಶಗಳನ್ನು ಅರಿತುಕೊಂಡು ಆಚರಿಸಿದರೆ ಹಬ್ಬಾಚರಣೆ ಸಾರ್ಥಕವಾಗುತ್ತದೆ.
ಕೆ.ಎಂ. ಅಬೂಬಕರ್ ಸಿದ್ದೀಕ್, ಕೊಡಗು