ಮೊಹಿದಿನ್ ಸಾಹೇಬರಿಗೆ ಅರಸು ಪ್ರಶಸ್ತಿ ನೀಡಿದ್ದು ಶ್ಲಾಘನೀಯ. ಆದರೆ...

Update: 2016-09-13 04:14 GMT

ಮಾಜಿ ಉನ್ನತ ಶಿಕ್ಷಣ ಸಚಿವ ಬಿ.ಎ. ಮೊಹಿದಿನ್ ಅವರಿಗೆ ಇತ್ತೀಚಿಗೆ ಪ್ರತಿಷ್ಠಿತ ದೇವರಾಜ ಅರಸು ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದು ಸಮಸ್ತ ಕನ್ನಡಿಗರಿಗೆ ಹೆಮ್ಮೆಯ ವಿಷಯ. ಏಕೆಂದರೆ , ದೇವರಾಜ ಅರಸರು ಪ್ರತಿಪಾದಿಸಿದ ಉನ್ನತ ಮೌಲ್ಯಗಳನ್ನು ತಮ್ಮ ರಾಜಕೀಯ ಬದುಕಿನುದ್ದಕ್ಕೂ ಎತ್ತಿ ಹಿಡಿದ ಮುತ್ಸದ್ದಿ ರಾಜಕಾರಣಿ ಮೊಹಿದಿನ್ ಸಾಹೇಬರು. ಈ ಅತ್ಯುತ್ತಮ ಆಯ್ಕೆ ಮಾಡಿದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೂ ಹಾರ್ದಿಕ ಅಭಿನಂದನೆಗಳು. ಈ ಮೂಲಕ ಅವರು ಅರಸು ಅವರಿಗೆ ನಿಜವಾದ ಗೌರವ  ಸಲ್ಲಿಸಿದ್ದಾರೆ. 

ಆದರೆ ಮೊಹಿದಿನ್ ಸಾಹೇಬರಿಗೆ ಅರಸು ಪ್ರಶಸ್ತಿ ನೀಡಿರುವುದನ್ನು ಮುಸ್ಲಿಂ ಸಮುದಾಯ ಸಂಭ್ರಮಿಸುತ್ತಿರುವುದು ನೋಡಿದರೆ ಅಯ್ಯೋ ಅನಿಸುತ್ತದೆ. ಮೊಹಿದಿನ್ ಸಾಹೇಬರ ರಾಜಕೀಯ ಮುತ್ಸದ್ದಿತನ, ಅವರ ಶ್ರೀಮಂತ ರಾಜಕೀಯ ಅನುಭವ, ನಿಷ್ಕಳಂಕ ಸಾರ್ವಜನಿಕ ಜೀವನ, ಅವರು ಮಾಡಿರುವ ಜನಪರ ಕೆಲಸಗಳು, ನೀಡಿರುವ ಪಾರದರ್ಶಕ ಆಡಳಿತ , ದೂರದೃಷ್ಟಿಯ ನಿರ್ಧಾರಗಳು - ಇವುಗಳನ್ನೆಲ್ಲ ಗಣನೆಗೆ ತೆಗೆದುಕೊಂಡರೆ ಅವರಿಗೆ ಕಾಂಗ್ರೆಸ್ ಪಕ್ಷ ಸೂಕ್ತ ಸ್ಥಾನಮಾನ, ಗೌರವ ನೀಡಿದೆ ಎಂದು ಯಾರಿಗಾದರೂ ಅನಿಸುತ್ತದೆಯೇ ? ಒಂದು ಪ್ರತಿಷ್ಠಿತ ರಾಜ್ಯ ಪ್ರಶಸ್ತಿ ಪಡೆಯುವುದಕ್ಕಿಂತ ಹೆಚ್ಚಿನ ಅರ್ಹತೆ ಆ ಹಿರಿಯರಿಗೆ ಇಲ್ಲವೇ ?

ಹತ್ತು ವರ್ಷಗಳ ಯುಪಿಎ ಆಡಳಿತದ ಸಂದರ್ಭದಲ್ಲಿ ಕಾಂಗ್ರೆಸ್ ಹಲವರನ್ನು ರಾಜ್ಯಪಾಲರಾಗಿ ನೇಮಿಸಿತು. ಅವರ ಅರ್ಹತೆ, ಗಾಂಧೀ ಕುಟುಂಬಕ್ಕೆ ಅವರ ನಿಷ್ಠೆ , ಅವರ ಪ್ರಾಮಾಣಿಕತೆ ಇತ್ಯಾದಿಗಳ ಬಗ್ಗೆ ಇಲ್ಲಿ ಚರ್ಚೆ ಬೇಡ. ಆದರೆ ಮೊಹಿದಿನ್ ಸಾಹೇಬರು ಆ ಹುದ್ದೆಗೆ ಅರ್ಹರಾಗಿ ಕಾಣಲಿಲ್ಲವೇಕೆ ? ಡೊಗ್ಗು ಸಲಾಮು ಹಾಕುವವರು, ಪ್ರಶ್ನಿಸದೆ ಪಾಲಿಸುವವರು, ಸ್ವಾಭಿಮಾನವನ್ನು ಮನೆಯಲ್ಲಿ ಬಿಟ್ಟು ಬಂದವರು, ಆತ್ಮ ಗೌರವ ಎಂದರೆ ಏನೆಂದೇ ಗೊತ್ತಿಲ್ಲದವರು, ಪಕ್ಷಕ್ಕಾಗಿ ಸಮುದಾಯವನ್ನೇ ಮಾರಿ ಬಿಡುವವರು - ಇವರು ಮಾತ್ರ ಇಂತಹ ಉನ್ನತ ಹುದ್ದೆಗಳಿಗೆ ಅರ್ಹರೇ ? 

ಹೋಗಲಿ , ಕರ್ನಾಟಕದಲ್ಲೇ ಕಾಂಗ್ರೆಸ್ ಸರಕಾರ ಇದೆ. ಸಿದ್ದರಾಮಯ್ಯನವರಿಗೂ ಮೊಹಿದಿನ್ ಸಾಹೇಬರು ಏನೆಂದು ಚೆನ್ನಾಗಿ ಗೊತ್ತಿದೆ. ಕನಿಷ್ಠ ಒಂದು ವಿಧಾನ ಪರಿಷತ್ ಸ್ಥಾನವನ್ನಾದರೂ ಕೊಡಬಹುದಿತ್ತು. ಏಕೆ ಆಗಲಿಲ್ಲ ? ಅವರು ಸದನದ ಒಳಗಿದ್ದಿದ್ದರೆ ಅದರಿಂದ ಪಕ್ಷಕ್ಕೆ ದೊಡ್ಡ ಬಲ ಬರುತ್ತಿತ್ತು. ಸದನದ ಘನತೆ ಹೆಚ್ಚುತ್ತಿತ್ತು, ಜೊತೆಗೆ ಪಕ್ಷದ ಗೌರವ ಕೂಡ. ಯಾವುದೇ ವಿಷಯದ ಬಗ್ಗೆ ತೂಕದ ಮಾತನಾಡುತ್ತಿದ್ದರು. ಆದರೆ ಪಕ್ಷಕ್ಕೇ ಬೇಡವಾದರೆ ಏನು ಮಾಡೋಣ ? 

ಈಗ ಅವರಿಗೆ ಒಂದು ದೊಡ್ಡ ಪ್ರಶಸ್ತಿಯನ್ನು ನೀಡಿ ' ಸಮಾಧಾನಕರ ಬಹುಮಾನ ' ನೀಡಲಾಗಿದೆ. ಅದನ್ನು ನಾವು ಹೇಳಿಕೊಂಡು ತಿರುಗುತ್ತಿದ್ದೇವೆ. ಇದು ನಮ್ಮ ದುರಂತ ! 

ಸೈದುದ್ದೀನ್ ಯು., ಬಜ್ಪೆ

Writer - ಸೈದುದ್ದೀನ್ ಯು., ಬಜ್ಪೆ

contributor

Editor - ಸೈದುದ್ದೀನ್ ಯು., ಬಜ್ಪೆ

contributor

Similar News