×
Ad

ಪತಂಜಲಿ ಸಿಇಒ ಆಚಾರ್ಯ ಬಾಲಕೃಷ್ಣ ಅವರ ಸಂಪತ್ತು ಎಷ್ಟು ಸಾವಿರ ಕೋಟಿ ?

Update: 2016-09-13 13:35 IST

ಹೊಸದಿಲ್ಲಿ, ಸೆ.13: ಯೋಗ ಗುರು ಬಾಬಾ ರಾಮದೇವ್ ಅವರ ಪತಂಜಲಿ ಕಂಪೆನಿಯ ಸಿಇಒ ಆಗಿರುವ ಆಚಾರ್ಯ ಬಾಲಕೃಷ್ಣ ದೇಶದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಸಂಪತ್ತಿನ ಮೌಲ್ಯವನ್ನು ಕೇಳಿದರೆ ಎಂಥವರಿಗೂ ಆಶ್ಚರ್ಯವಾಗದೇ ಇರದು.

44 ವರ್ಷದ ಬಾಲಕೃಷ್ಣ ಅವರ ಒಟ್ಟು ಆಸ್ತಿಯ ಮೌಲ್ಯ ಬರೋಬ್ಬರಿ  25,600 ಕೋಟಿ ರೂ.ಎಂದು ತಿಳಿದು ಬಂದಿದೆ. ಅವರ ಹೆಸರು ಪ್ರತಿಷ್ಠಿತ ಹುರುನ್ ಇಂಡಿಯಾ ರಿಚ್ ಲಿಸ್ಟ್ 2016 ನಲ್ಲೂ ಕಾಣಿಸಿಕೊಂಡಿದೆ. ಈ ಪಟ್ಟಿಯಲ್ಲಿ ಡಾಬರ್ ಕಂಪೆನಿಯ ಆನಂದ್ ಬರ್ಮನ್ ಹಾಗೂ ಬ್ರಿಟಾನಿಯಾದ ನುಸ್ಲಿ ವಾಡಿಯಾ ಹೆಸರುಗಳೂ ಇವೆ.

ಪತಂಜಲಿ ಈಗ ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಎಫ್‌ಎಂಸಿಜಿ ಬ್ರ್ಯಾಂಡ್ ಆಗಿದ್ದು ಅದರ ಒಟ್ಟು ಮೌಲ್ಯ 450 ಮಿಲಿಯನ್ ಡಾಲರ್ ಆಗಿದ್ದರೆ ಕಂಪೆನಿ 740 ಮಿಲಿಯನ್ ಡಾಲರ್ ಆದಾಯ ಗಳಿಸುತ್ತಿದೆ. ಹೆಚ್ಚಿನವರು ಪತಂಜಲಿ ಸಂಸ್ಥೆ ಬಾಬಾ ರಾಮದೇವ್ ಅವರ ಸಂಪೂರ್ಣ ಒಡೆತನದ್ದು ಎಂದು ತಿಳಿದು ಕೊಂಡಿದ್ದರೆ ವಾಸ್ತವವಾಗಿ ಈ ಕಂಪೆನಿಯಲ್ಲಿ ಶೇ.94 ರಷ್ಟು ಪಾಲುದಾರಿಕೆ ಆಚಾರ್ಯ ಬಾಲಕೃಷ್ಣರವರದ್ದಾಗಿದೆ.

ಪತಂಜಲಿಯ ಸುಮಾರು 500ಕ್ಕೂ ಹೆಚ್ಚು ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು 2015-16 ರಲ್ಲಿ ಪತಂಜಲಿಯ ಬೆಳವಣಿಗೆ ಶೇ. 150 ಕ್ಕೂ ಹೆಚ್ಚು ಎಂದು ಅಂದಾಜಿಸಲಾಗಿದೆ.

ಪತಂಜಲಿ ಈಗ ಭಾರತದ ಐದನೆ ಅತ್ಯಂತ ದೊಡ್ಡ ಎಫ್‌ಎಂಸಿಜಿ ಕಂಪೆನಿಯಾಗಿದ್ದು ಡಾಬರ್ ಹಾಗೂ ಗೋದ್ರೆಜ್ ಗಿಂತಲೂ ಬಹಳಷ್ಟು ಮುಂದಿದೆ. ಸಾಂಪ್ರದಾಯಿಕ ಮಾರ್ಕೆಟಿಂಗ್ ಪದ್ಧತಿಗಳನ್ನು ಮುರಿದಿರುವುದೇ ಪತಂಜಲಿಯ ಈ ಮಟ್ಟಿನ ಬೆಳವಣಿಗೆಗೆ ಕಾರಣವೆಂದು ಆಚಾರ್ಯ ಬಾಲಕೃಷ್ಣ ಅಭಿಪ್ರಾಯ ಪಡುತ್ತಾರೆ.

ಪತಂಜಲಿ ಇದೀಗ ಗ್ರಾಮೀಣ ಭಾಗದ ಮಾರುಕಟ್ಟೆಗಳಿಗೂ ತನ್ನ ಉತ್ಪನ್ನಗಳನ್ನು ತಲುಪಿಸಲು ಪ್ರಯತ್ನಿಸುತ್ತಿದೆ. ಕಠಿಣ ಶ್ರಮವೇ ಪತಂಜಲಿ ಅತ್ಯಂತ ಕನಿಷ್ಠ ಸಮಯದಲ್ಲಿ 5,000 ಕೋಟಿ ರೂ. ಕಂಪೆನಿಯಾಗಿ ಬೆಳೆಯಲು ಸಹಕಾರಿಯಾಯಿತು ಎಂದು ಬಲವಾಗಿ ನಂಬಿದ್ದಾರೆ ಆಚಾರ್ಯ ಬಾಲಕೃಷ್ಣ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News