10 ವರ್ಷಗಳಲ್ಲಿ 5.97 ಹೆಕ್ಟೇರ್ ಭೂಮಿ ಕೃಷಿಯಿಂದ ಹೊರಕ್ಕೆ!

Update: 2016-09-13 10:08 GMT

ಮಂಗಳೂರು, ಸೆ.10: ಕಳೆದ 10 ವರ್ಷಗಳ ಅಧಿಯಲ್ಲಿ ರಾಜ್ಯದಲ್ಲಿ ಒಟ್ಟು 5,97,000 ಹೆಕ್ಟೇರ್ ಕೃಷಿ ಭೂಮಿ ಅನ್ಯ ಚಟುವಟಿಕೆಗಳಿಗೆ ಪರಿವರ್ತನೆಯಾಗಿದೆ ಎಂದು ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಪ್ರಕಾಶ್ ಕಮ್ಮರಡಿ ಆತಂಕ ವ್ಯಕ್ತಪಡಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿನ ಕೃಷಿ ಜಮೀನಿನ ಪರಿವರ್ತನೆಯ ದಿಕ್ಕು ಮತ್ತು ಅದನ್ನು ನಿಯಂತ್ರಿಸುವ ಮಾರ್ಗೋಪಾಯಗಳ ಕುರಿತಂತೆ ಆಯೋಗವು ನಡೆಸಿದ ಅಧ್ಯಯನದಲ್ಲಿ ಈ ಅಂಶ ಬಹಿರಂಗವಾಗಿದ್ದು, ಪ್ರತಿ ವರ್ಷ 60,000 ಹೆಕ್ಟೇರ್‌ನಂತೆ ಕೃಷಿ ಜಮೀನು ಅನ್ಯ ಚಟುವಟಿಕೆಗಳಿಗೆ ಬಳಕೆಯಾಗುತ್ತಿರುವುದು ಅಧ್ಯಯನದಿಂದ ತಿಳಿದು ಬಂದಿದೆ. ಬೆಲೆ ಆಯೋಗ ಶೀಘ್ರದಲ್ಲೇ ಈ ಕುರಿತಾದ ವರದಿಯನ್ನು ಸರಕಾರಕ್ಕೆ ಸಲ್ಲಿಸಲಿದೆ ಎಂದರು.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ನಡೆದಿರುವ ಬೆಳವಣಿಗೆಗಳನ್ನು ಅಧ್ಯಯನದಿಂದ ಕಲೆ ಹಾಕಲಾಗಿದೆ. 28 ಕೃಷಿ ಬೆಳೆಗಳು ಹಾಗೂ 23 ತೋಟಗಾರಿಕಾ ಬೆಳೆಗಳ ಸಮಗ್ರ ಅಧ್ಯಯನದ ಮೂಲಕ ಈ ವರದಿಯನ್ನು ತಯಾರಿಸಲಾಗಿದೆ. ಪರಿಸ್ಥಿತಿ ತೀರಾ ಗಂಭೀರವಾಗಿದ್ದು, ಈ ಅವಧಿಯಲ್ಲಿ ಬೆಳೆಗಳ ಆಯ್ಕೆಯಲ್ಲೂ ಮಹತ್ತರ ಬದಲಾವಣೆಗಳಾಗಿರುವುದು ಕಂಡುಬಂದಿದೆ. ಕಬ್ಬು ಬೆಳೆಯುವ ಪ್ರದೇಶ ಶೇ. 117ರಷ್ಟು ಏರಿಕೆ ಆಗಿದ್ದರೆ, ಭತ್ತ ಬೆಳೆಯುವ ಪ್ರದೇಶ ಶೇ. 11ರಷ್ಟು ಕಡಿಮೆ ಆಗಿದೆ. ರಾಗಿ ಬೆಳೆ ಶೇ. 25ರಷ್ಟು ಕಡಿಮೆಯಾಗಿದ್ದು, ಅಡಿಕೆ ಬೆಳೆ ಶೇ. 40ರಷ್ಟು ಹಾಗೂ ಹೈಬ್ರೀಡ್ ಮುಸುಕಿನ ಜೋಳ ಶೇ. 43ರಷ್ಟು ಹೆಚ್ಚಳವಾಗಿದೆ. ಬಿ.ಟಿ. ಹತ್ತಿ, ಮೆಕ್ಕೆಜೋಳ ಕಬ್ಬು, ಅಡಿಕೆ ಬೆಳೆಗಳತ್ತ ರೈತರು ಆಕರ್ಷಿತರಾಗುತ್ತಿದ್ದಾರೆ. ಆಹಾರ ಬೆಳೆಗಳು ಕುಂಠಿತಗೊಳ್ಳುತ್ತಾ ಆತಂಕವನ್ನು ಸೃಷ್ಟಿಸುತ್ತಿವೆ. ಈ ನಿಟ್ಟಿನಲ್ಲಿ ತಮ್ಮ ವರದಿಯಲ್ಲಿ ಮಾರ್ಗೋಪಾಯಗಳ ಕುರಿತಂತೆ ಶಿಫಾರಸ್ಸುಗಳನ್ನು ನೀಡಲಾಗುತ್ತಿದೆ ಎಂದವರು ಹೇಳಿದರು.

ರೈತರನ್ನು ಕಾಡಲಿದೆ ‘ಡಬಲ್ ಟ್ರಬಲ್’!

ಪ್ರಸಕ್ತ ಸಾಲಿನಲ್ಲಿ ದೇಶಾದ್ಯಂತ ಉತ್ತಮ ಮಳೆಯಾಗಿದೆ. ದ್ವಿದಳ ಧಾನ್ಯಗಳ ಉತ್ಪಾದನೆಯಲ್ಲೂ ಭಾರೀ ಪ್ರಮಾಣದ ಹೆಚ್ಚಳವನ್ನು ನಿರೀಕ್ಷಿಸಲಾಗಿದೆ. ರಾಜ್ಯದಲ್ಲೂ ಬಿತ್ತನೆ ಸಮೃದ್ಧವಾಗಿದ್ದರೂ, ಈವರೆಗಿನ ಮಳೆ ಪ್ರಮಾಣ ಮಾತ್ರ ಕಡಿಮೆ ಆಗಿರುವುದರಿಂದ ರೈತರು ಡಬಲ್ ಟ್ರಬಲ್ ಅನುಭವಿಸುವ ಸಾಧ್ಯತೆ ಇದೆ. ದರ ಕುಸಿತದ ಜತೆಗೆ ಕಡಿಮೆ ಇಳುವರಿಯಿಂದ ರಾಜ್ಯದ ರೈತರು ಎರಡು ರೀತಿಯ ತೊಂದರೆಗಳನ್ನು ಅನುಭವಿಸಬೇಕಾಗಬಹುದು ಎಂದು ಪ್ರಕಾಶ್ ಕಮ್ಮರಡಿ ಹೇಳಿದರು.

ಈ ಹಿನ್ನೆಲೆಯಲ್ಲಿ ರಾಜ್ಯದ ಬೆಲೆ ಆಯೋಗವು ಬೆಲೆ ಕುಸಿತದಿಂದ ನಷ್ಟ ಅನುಭವಿಸುವುದನ್ನು ತಪ್ಪಿಸಲು ಬೆಲೆ ಮುನ್ಸೂಚನೆ ಹಾಗೂ ಉತ್ಪಾದನೆ ಮುಂದಂದಾಜು ಅಧ್ಯಯನ ನಡೆಸಿ ವರದಿ ನೀಡಲು ನಿರ್ಧರಿಸಿದೆ. ಪ್ರಸ್ತುತ 21 ಬೆಳೆಗಳಿಗೆ ಸಂಬಂಧಿಸಿ ವರದಿ ನೀಡಲಾಗಿದೆ. ದ್ವಿದಳ ಧಾನ್ಯ ಬೆಳೆಗಾರರ ರಕ್ಷಣೆಗೆ ಕರ್ನಾಟಕ ಹಾಲು ಮಹಾಮಂಡಲದ ಮಾದರಿಯಲ್ಲಿ ದ್ವಿದಳ ಧಾನ್ಯ ಉತ್ಪಾದಕ ಸಂಘಟನೆಗಳ ಮಹಾ ಮಂಡಲ ರಚಿಸಲು ಕೃಷಿ ಇಲಾಖೆಗೆ ಶಿಫಾರಸು ಮಾಡಲಾಗಿದೆ ಎಂದು ಪ್ರಕಾಶ್ ಕಮ್ಮರಡಿ ತಿಳಿಸಿದರು.

ದ್ವಿದಳ ಧಾನ್ಯಗಳಿಗೆ ಉತ್ತಮ ಬೆಂಬಲ ಬೆಲೆ ಕೊಡಿಸುವುದು ಮತ್ತು ಸಾಲ ಅಡಮಾನ ಸೌಲಭ್ಯ, ದಾಸ್ತಾನು ವ್ಯವಸ್ಥೆ ಒದಗಿಸುವ ನಿಟ್ಟಿನಲ್ಲಿ ಆಯೋಗ ಪ್ರಯತ್ನಿಸುತ್ತಿದೆ ಎಂದವರು ಹೇಳಿದರು.

ಈ ಸಂದರ್ಭ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ. ಕೆಂಪೇಗೌಡ, ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಯೋಗೇಶ್ ಉಪಸ್ಥಿತರಿದ್ದರು.

ದ.ಕ. 5,293 ಹೆಕ್ಟೇರ್ ಭೂಮಿ ಕೃಷಿಯಿಂದ ಹೊರಕ್ಕೆ!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 10 ವರ್ಷಗಳಲ್ಲಿ ಶೇ.9ರಷ್ಟು ಕೃಷಿ ಭೂಮಿ ಕಡಿಮೆ ಆಗಿದೆ. ಹೆಕ್ಟೇರ್ ಪ್ರಮಾಣದಲ್ಲಿ ಹೇಳವುದಾದರೆ ಅದು 5,293 ಹೆಕ್ಟೇರ್ ಕಡಿಮೆಯಾಗಿದ್ದರೆ, ಇದೇ ವೇಳೆ ತೋಟಗಾರಿಕಾ ಬೆಳೆಗಳ ವಿಸ್ತೀರ್ಣದಲ್ಲಿ 17,306 ಹೆಕ್ಟೇರ್ ಹೆಚ್ಚಳವಾಗಿದೆ. ಅಡಿಕೆ ಬೆಳೆಯಲ್ಲಿ 9 ಸಾವಿರ ಹೆಕ್ಟೇರ್ ಹೆಚ್ಚಳವಾಗಿದ್ದರೆ, ತೆಂಗಿನ ಬೆಳೆಯಲ್ಲಿ 2,127 ಹೆಕ್ಟೇರ್ ಭೂಮಿ ಹೆಚ್ಚಳವಾಗಿದೆ. ಬಾಳೆ ಬೆಳೆ ವಿಸ್ತೀರ್ಣ ಶೇ. 11ರಷ್ಟು ಹೆಚ್ಚಳವಾಗಿದ್ದು, ಮಾವು ಬೆಳೆ ಶೇ. 12ರಷ್ಟು ಕಡಿಮೆಯಾಗಿದೆ. ಗೇರು ಬೆಳೆ ಭೂಮಿಯ ವಿಸ್ತೀರ್ಣ ಶೇ. 17ರಷ್ಟು ಜಾಸ್ತಿಯಾಗಿದೆ ಎಂದು ಬೆಲೆ ಆಯೋಗದ ಅಧ್ಯಕ್ಷ ಪ್ರಕಾಶ್ ಕಮ್ಮರಡಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News