'ರೈಲ್ವೆ ನೀಡುವ ನೀರಿನಲ್ಲಿ' ಮನುಷ್ಯನ ಮಲದಲ್ಲಿರುವ ಬ್ಯಾಕ್ಟೀರಿಯಾ ಪತ್ತೆ!

Update: 2016-09-13 10:11 GMT

ಹೊಸದಿಲ್ಲಿ, ಸೆ.13: ಭಾರತೀಯ ರೈಲ್ವೆ, ತನ್ನ ನಿಲ್ದಾಣಗಳ ಪ್ಲಾಟ್‌ಫಾರಂನಲ್ಲಿ ಹಾಗೂ ಸಿಬ್ಬಂದಿಗೆ ಪೂರೈಸುವ ಕುಡಿಯುವ ನೀರಿನಲ್ಲಿ, ಮಾನವನ ಮಲದಲ್ಲಿರುವ ಬ್ಯಾಕ್ಟೀರಿಯಾಗಳು ಪತ್ತೆಯಾಗಿವೆ.

ಸದ್ಯದಲ್ಲೇ ಚುನಾವಣೆಗೆ ಸಜ್ಜಾಗಿರುವ ಉತ್ತರ ಪ್ರದೇಶ ಸೇರಿದಂತೆ ಉತ್ತರ ರಾಜ್ಯಗಳ ರೈಲು ನಿಲ್ದಾಣಗಳ ನೀರು ಮಾನವ ಮಲದ ಬ್ಯಾಕ್ಟೀರಿಯಾಗಳಿಂದ ಕಲ್ಮಶಗೊಂಡಿದ್ದು, ಹೊಟ್ಟೆನೋವು ಮತ್ತು ಬೇಧಿಗೆ ಕಾರಣವಾಗುತ್ತಿದೆ ಎಂಬ ಅಂಶ ಬಹಿರಂಗವಾಗಿದೆ.

ತಾನು ಅನುಸರಿಸುತ್ತಿರುವ ನೀರಿನ ಗುಣಮಟ್ಟ ನಿಗಾ ಪ್ರಕ್ರಿಯೆ ದೋಷಪೂರಿತ ಎನ್ನುವುದನ್ನು ರೈಲ್ವೆ ಮೊಟ್ಟಮೊದಲ ಬಾರಿಗೆ ಒಪ್ಪಿಕೊಂಡಿದ್ದು, 100 ಮಿಲಿಲೀಟರ್ ನೀರಿನಲ್ಲಿ 10 ಯುನಿಟ್‌ಗಳಷ್ಟು ಥೆರ್ಮೊಟಾಲರೆಂಟ್ ಕೊಲಿಫಾರ್ಮ್ ಬ್ಯಾಕ್ಟೀರಿಯಾ ಇರುವ ಮಾದರಿಗಳನ್ನು ರೈಲ್ವೆ ಅನುಮತಿ ನೀಡಲಾದ ಪ್ರಮಾಣ ಎಂದು ಪರಿಗಣಿಸುತ್ತಿತ್ತು.

ಆದರೆ ಬ್ಯೂರೊ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್‌ನ ಹೇಳಿಕೆಯಂತೆ ಟಿಸಿಬಿ ನೀರಿನಲ್ಲಿ ಸೇರಿರುವುದು ಕಲ್ಮಶದ ಸಂಕೇತ. ಇದು ವಾಂತಿಭೇದಿ, ಅತಿಸಾರ, ಭೇದಿ ಮತ್ತಿತರ ರೋಗಗಳಿಗೆ ಕಾರಣವಾಗುತ್ತದೆ.

ರೈಲ್ವೆ ಅಧಿಕಾರಿಗಳು 100 ಮಿಲಿಮೀಟರ್ ನೀರಿನಲ್ಲಿ 10 ಯುನಿಟ್ ಟಿಸಿಬಿ ಇರುವುದು ಸಮಾಧಾನಕರ ಎಂದು ಹೇಳುತ್ತಾರೆ. ಆದರೆ ಯೂನಿಫಾರಂ ಡ್ರಿಂಕಿಂಗ್ ವಾಟರ್ ಕ್ವಾಲಿಟಿ ಮಾನಿಟರಿಂಗ್ ಪ್ರೊಟೊಕಾಲ್ ಅನ್ವಯ ಒಂದು ಯುನಿಟ್ ಟಿಸಿಬಿ ಇರುವುದು ಕೂಡಾ ಅಪಾಯಕಾರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News