ಗುಜರಾತ್ : ಪಟೇಲರು, ದಲಿತರ ಬಳಿಕ ಬಿಜೆಪಿ ವಿರುದ್ಧ ತಿರುಗಿಬಿದ್ದ ಆದಿವಾಸಿಗಳು

Update: 2016-09-13 10:39 GMT

ಅಹ್ಮದಾಬಾದ್ , ಸೆ. 13: ಗುಜರಾತ್ ಬಿಜೆಪಿ ಸರಕಾರಕ್ಕೆ ಹೊಸ ಸವಾಲು ಎದುರಾಗಿದೆ. ಪಟೇಲರು ಹಾಗು ದಲಿತರು ಪಕ್ಷದ ವಿರುದ್ಧ ಬೀದಿಗಿಳಿದು ದೊಡ್ಡ ತಲೆನೋವಾಗಿರುವ ಬೆನ್ನಲ್ಲೇ ರಾಜ್ಯದ ಆದಿವಾಸಿಗಳು ಪಕ್ಷದ ವಿರುದ್ಧ ಅಸಮಾಧಾನಗೊಂಡಿದ್ದಾರೆ ಎಂದು ಸುದ್ದಿ ಬಂದಿದೆ.

ಬಿಜೆಪಿ ಹಿರಿಯ ನಾಯಕರೊಬ್ಬರ ಪ್ರಕಾರ " ಪಾಟಿದಾರರು ಹಾಗು ದಲಿತರ ಬಂಡಾಯ ಎದುರಿಸಿದ ಬಳಿಕ ಇದೀಗ ಆದಿವಾಸಿಗಳು ರಾಜ್ಯ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಮುಂದಿನ ವರ್ಷದ ವಿಧಾನಸಭಾ ಚುನಾವಣೆಯ ಮೊದಲು ಆದಿವಾಸಿಗಳು ದೊಡ್ಡ ರೀತಿಯಲ್ಲಿ ಪಕ್ಷದ ವಿರುದ್ಧ ಬೀದಿಗಿಳಿಯಲಿದ್ದಾರೆ. ಇದಕ್ಕೆ ಕೆಲವು ರಾಜಕೀಯ ಶಕ್ತಿಗಳ ಪರೋಕ್ಷ ಬೆಂಬಲವೂ ಇದೆ. ಇದನ್ನು ಸಮರ್ಥವಾಗಿ ಎದುರಿಸಲು ಬಿಜೆಪಿ ಪ್ರಧಾನಿ ನರೇಂದ್ರ ಮೋದಿಯವರನ್ನೇ ನೆಚ್ಚಿಕೊಂಡಿದೆ " ಎಂದು ಜನಸತ್ತಾ ವರದಿ ಮಾಡಿದೆ. 

ತಮ್ಮ ಜನ್ಮದಿನದಂದು ಗುಜರಾತ್ ಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ ಇದೇ ಕಾರಣಕ್ಕೆ ಆದಿವಾಸಿಗಳು ಹೆಚ್ಚಿರುವ ದಹೊಡ್ ಹಾಗು ನವಸಾರಿಯಲ್ಲಿ  ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಮೂಲಕ ಬಿಜೆಪಿ ಜನರ ಬಳಿ ಹೋಗುವ ಪ್ರಯತ್ನ ಮಾಡುತ್ತಿದೆ. 

ಬಿಜೆಪಿ ವಿರುದ್ಧ ವಿವಿಧ ವರ್ಗಗಳಲ್ಲಿ ಎದ್ದಿರುವ ಅಸಮಾಧಾನವನ್ನು ಬಳಸಿಕೊಳ್ಳಲು ಕಾಂಗ್ರೆಸ್ ಹಾಗು ಆಪ್ ಪಕ್ಷಗಳು ತುದಿಗಾಲಲ್ಲಿ ನಿಂತಿವೆ . ಕಳೆದ ತಾಲೂಕು ಹಾಗು ಗ್ರಾಮ ಪಂಚಾಯತ್ ಚುನಾವಣೆಗಳಲ್ಲಿ ಕಾಂಗ್ರೆಸ್ ಉತ್ತಮ ಪ್ರದರ್ಶನ ತೋರಿಸಿರುವುದು ಅದರ ಆತ್ಮ ವಿಶ್ವಾಸವನ್ನು ಹೆಚ್ಚಿಸಿದೆ. 


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News