"ಸೂರ್ಯ" – ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಅಂಗಡಿ

Update: 2016-09-13 13:40 GMT

ಇಂದು (13/09) ಕೆಲ ಅಶಕ್ತ/ಬಡವರ ಮನೆ-ಮನೆಯ ಭೇಟಿಗಾಗಿ ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆ-ನೆರಿಯ ಪ್ರದೇಶದಲ್ಲಿ "ಎಂ.ಫ್ರೆಂಡ್ಸ್" ತಂಡದ ಜೊತೆಗೆ ಸುತ್ತಾಡುತ್ತಿದ್ದೆವು. ಈ ಸಂದರ್ಭದಲ್ಲಿ ನೆರಿಯ ಸಮೀಪದ ಅಣಿಯೂರು ಎಂಬ ಗ್ರಾಮೀಣ ಪ್ರದೇಶದಲ್ಲಿ ಕಂಡ ಅಪರೂಪದ ಸನ್ನಿವೇಶವನ್ನು ಇಲ್ಲಿ ಬರಹರೂಪಕ್ಕಿಳಿಸಿದ್ದೇನೆ.

ಕೆಲ ಯುವಕರು ನಿರುದ್ಯೋಗ, ದೊಂಬಿ-ಗಲಾಟೆ, ಅನಗತ್ಯ ಕೆಲಸಗಳಲ್ಲಿ ತೊಡಗಿರುವ ಪ್ರಸ್ತುತ ಸಮಾಜದಲ್ಲಿ ಅಣಿಯೂರಿನ ಈ ನಾಲ್ಕು ಎಳೆಯ ಮಕ್ಕಳು ವ್ಯವಹಾರ ಜ್ಞಾನದಲ್ಲಿ ಮಾದರಿಯಾಗಿದ್ದಾರೆ. ಗುಜರಿಯಲ್ಲಿ ಸಿಕ್ಕ "ಸೂರ್ಯ" ಎಂಬ ಹೆಸರಿನ ಸೈನ್ ಬೋರ್ಡ್ ನ್ನು ಅಳವಡಿಸಿ, ಹರಿದು ಬಿಸಾಡಿದ ಸೀರೆಯನ್ನು ಕಂಬ ಮತ್ತು ಕಾಂಪೌಂಡಿಗೆ ಕಟ್ಟಿ ಅದಕ್ಕೆ ಮಾಡು ಮಾಡಿ, ಕೆಂಪುಕಲ್ಲನ್ನು ಜೋಡಿಸಿ ಅದರ ಮೇಲೆ ಬಿಸಾಡಿದ ವೇಸ್ಟ್ ಸ್ಲಾಬ್ ಕಲ್ಲು ಹಾಸಿ ಜೋಪಡಿ ಅಂಗಡಿ ನಿರ್ಮಿಸಿದ 10,11,12 ವರ್ಷದ ನಾಲ್ವರು ವಿದ್ಯಾರ್ಥಿಗಳು ಅದರಲ್ಲಿ ಚಿಲ್ಲರೆ ಸಾಮಾನು, ಚಾಕ್ಲೆಟ್, ಬಿಸ್ಕೆಟ್, ಸ್ನ್ಯಾಕ್ಸ್, ಸಾಬೂನು ಮೊದಲಾದ ಸಾಮಾಗ್ರಿಗಳನ್ನು ಇಟ್ಟು ಚಿಲ್ಲರೆ ವ್ಯಾಪಾರದಲ್ಲಿ ತೊಡಗಿದ್ದಾರೆ.

ಶಾಲಾ ರಜೆ ದಿನ ಹಾಗೂ ಬಿಡುವಿನ ಸಮಯದಲ್ಲಿ ಅಂಗಡಿ ತೆರೆಯುವ ಈ ಎಳೆಯರು ವ್ಯಾಪಾರ ಶುರು ಹಚ್ಚುತ್ತಾರೆ. ಹಿಂದೂ-ಮುಸ್ಲಿಂ ಎನ್ನದೆ ನಾಲ್ವರೂ ಅಂಗಡಿಯಲ್ಲಿ ತಲ್ಲೀನ. 6ನೆ ತರಗತಿಯ ಸಫ್ವಾನ್, ಕಾರ್ತಿಕ್, ಶರ್ಫುದ್ದೀನ್, 7ನೆ ತರಗತಿಯ ಸೈಫುದ್ದೀನ್ ಈ ಅಂಗಡಿಯ ಪಾಲುದಾರ ಮಿತ್ರರು. ಮಕ್ಕಳ ಪಾಲಕರು ಕೂಲಿ ಕೆಲಸ ಮತ್ತು ವಾಹನ ಚಾಲಕರಾಗಿದ್ದಾರೆ.

ಅಂಗಡಿ ವ್ಯಾಪಾರದ ಲಾಭಾಂಶದಲ್ಲಿ ಉಳಿದ ಮೊತ್ತವನ್ನು ಮಕ್ಕಳು ಖರ್ಚು ಮಾಡದೇ ಪುನಃ ಅಂಗಡಿ ಸಾಮಾನಿಗೇ ವ್ಯಯಿಸಿ ಅಭಿವೃದ್ಧಿಪಡಿಸುತ್ತಿದ್ದಾರೆ. ಮಕ್ಕಳ ಈ ಚಿಂತನೆ ಅದ್ಭುತವೇ ಸರಿ. ಇಂದು ಒಟ್ಟು 60 ರೂಪಾಯಿಯ ವ್ಯಾಪಾರವಾಗಿದೆ ಎನ್ನುತ್ತಾರೆ ವಿದ್ಯಾರ್ಥಿಗಳು. ನಾವೂ ಕೂಡಾ ಕೆಲವೊಂದು ಸಾಮಾಗ್ರಿಗಳನ್ನು ಖರೀದಿಸಿ ಉತ್ತೇಜಿಸಿದೆವು. ಮಕ್ಕಳ ವ್ಯವಹಾರ ಜ್ಞಾನಕ್ಕೆ ಹ್ಯಾಟ್ಸಾಫ್.

- ರಶೀದ್ ವಿಟ್ಲ.

Writer - ರಶೀದ್ ವಿಟ್ಲ

contributor

Editor - ರಶೀದ್ ವಿಟ್ಲ

contributor

Similar News