ಈದ್ ಪ್ರಾರ್ಥನೆ ವೇಳೆ ಆತ್ಮಹತ್ಯಾ ಸ್ಫೋಟ
ಕರಾಚಿ, ಸೆ. 13: ಪಾಕಿಸ್ತಾನದ ಸಿಂಧ್ ಪ್ರಾಂತದಲ್ಲಿರುವ ಶಿಯಾ ಮಸೀದಿಯೊಂದರ ಹೊರಗೆ ಮಂಗಳವಾರ ಈದ್ ಪ್ರಾರ್ಥನೆಯ ವೇಳೆ ಆತ್ಮಹತ್ಯಾ ಬಾಂಬರ್ ಒಬ್ಬ ತನ್ನನ್ನು ತಾನು ಸ್ಫೋಟಿಸಿಕೊಂಡಾಗ ಇಬ್ಬರು ಪೊಲೀಸರು ಸೇರಿದಂತೆ ಕನಿಷ್ಠ 10 ಮಂದಿ ಗಾಯಗೊಂಡಿದ್ದಾರೆ.
ಕರಾಚಿಯಿಂದ 470 ಕಿಲೋಮೀಟರ್ ದೂರದ ಶಿಕಾರ್‌ಪುರ ಜಿಲ್ಲೆಯ ಖಾನ್‌ಪುರ ತಾಲೂಕಿನಲ್ಲಿ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದರು.ಇನ್ನೋರ್ವ ದಾಳಿಕೋರ ಸ್ಥಳದಿಂದ ಪರಾರಿಯಾಗಿದ್ದಾನೆ.ಶಿಕಾರ್‌ಪುರ ಜಿಲ್ಲೆಯ ಇನ್ನೊಂದು ಶಿಯಾ ಮಸೀದಿಯಲ್ಲಿ ನಡೆಸಲು ಉದ್ದೇಶಿಸಲಾಗಿದ್ದ ಆತ್ಮಹತ್ಯಾ ಸ್ಫೋಟವನ್ನು ಪೊಲೀಸರು ವಿಫಲಗೊಳಿಸಿದ್ದಾರೆ. ಕಳೆದ ವರ್ಷದ ಈದ್ ವೇಳೆ ಇದೇ ಜಿಲ್ಲೆಯ ಮಸೀದಿಯೊಂದರಲ್ಲಿ ನಡೆದ ಸ್ಫೋಟದಲ್ಲಿ ಕನಿಷ್ಠ 61 ಮಂದಿ ಹತರಾಗಿದ್ದರು.ಈದ್ ಪ್ರಾರ್ಥನೆಯ ವೇಳೆ, ಖಾನ್‌ಪುರಕ್ಕೆ ನಾಲ್ವರು ಆತ್ಮಹತ್ಯಾ ಬಾಂಬರ್‌ಗಳು ನುಸುಳಿದ್ದರು ಎಂದು ಪೊಲೀಸರು ಹೇಳಿದ್ದಾರೆ ಎಂದು ‘ಡಾನ್’ ವರದಿ ಮಾಡಿದೆ.
ಇಬ್ಬರು ದಾಳಿಕೋರರು ಶಿಯಾ ಮಸೀದಿಯೊಂದನ್ನು ಗುರಿಯಾಗಿಸಿದರು. ಆದರೆ, ಸಂಶಯಗೊಂಡ ಪೊಲೀಸರು ಅವರನ್ನು ಮಸೀದಿಯ ದ್ವಾರದ ಬಳಿ ತಡೆದು ನಿಲ್ಲಿಸಿದರು.ದಾಳಿಕೋರರು ಒಡಲು ಪ್ರಯತ್ನಿಸಿದಾಗ ಪೊಲೀಸರು ಓರ್ವನಿಗೆ ಗುಂಡು ಹಾರಿಸಿದರು ಹಾಗೂ ಇನ್ನೊಬ್ಬನನ್ನು ಬಂಧಿಸಿದರು.