×
Ad

30 ತಿಂಗಳಲ್ಲಿ 154 ದೇಶಗಳಿಗೆ ರಿಜಿಜು ಭೇಟಿ!

Update: 2016-09-13 23:09 IST

ಹೊಸದಿಲ್ಲಿ, ಸೆ.13: ಪ್ರಧಾನಿ ನರೇಂದ್ರ ಮೋದಿ ಯವರ ವಿದೇಶ ಯಾತ್ರೆಗಳು ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು ಅವರು ದೇಶದಲ್ಲಿರುವುದಕ್ಕಿಂತ ಹೆಚ್ಚಾಗಿ ವಿದೇಶಗಳಲ್ಲಿಯೇ ಇರುತ್ತಾರೆಂಬ ಆರೋಪಗಳೂ ಕೇಳಿ ಬಂದಿತ್ತು. ಮೋದಿ ಪ್ರಧಾನಿಯಾದಂದಿನಿಂದ ಇಲ್ಲಿಯ ತನಕ ಸುಮಾರು 46 ದೇಶಗಳಿಗೆ ಭೇಟಿ ನೀಡಿದ್ದರೆ, ಅವರದೇ ಸಂಪುಟದ ಸಚಿವರೊಬ್ಬರು ವಿದೇಶ ಪ್ರವಾಸಗಳಲ್ಲಿ ಪ್ರದಾನಿಯನ್ನೂ ಮೀರಿಸಿದ್ದಾರೆಂಬ ಮಾಹಿತಿಯನ್ನು ಜನಸತ್ತಾ ವರದಿಯೊಂದು ನೀಡಿದೆ.

ವರದಿಯಲ್ಲಿ ತಿಳಿಸಿರುವಂತೆ ಕೇಂದ್ರ ಗೃಹ ರಾಜ್ಯ ಸಚಿವರಾದ ಕಿರಣ್ ರಿಜಿಜು ತಮ್ಮ ಸಂಪುಟ ಸಹೋದ್ಯೋಗಿ ಯೊಬ್ಬರೊಂದಿಗೆ ಖಾಸಗಿ ಮಾತುಕತೆಯ ವೇಳೆ ತಾವು ಕಳೆದ 30 ತಿಂಗಳುಗಳ ಅವಧಿಯಲ್ಲಿ 154 ದೇಶಗಳಿಗೆ ಅಧಿಕೃತ ಭೇಟಿ ನೀಡಿರುವುದಾಗಿ ಹೇಳಿದ್ದಾರೆನ್ನಲಾಗಿದೆ. ಮುಂದಿನ ದಿನಗಳಲ್ಲಿ ತಾವು ವಿಶ್ವದ ಎಲ್ಲಾ 193 ದೇಶಗಳಿಗೂ ಭೇಟಿ ನೀಡಲು ಇಚ್ಛಿಸುವುದಾಗಿಯೂ ಅವರು ತಮ್ಮ ಸಹೋದ್ಯೋಗಿಯೊಂದಿಗೆ ಹೇಳಿಕೊಂಡಿದ್ದಾರೆನ್ನಲಾಗಿದೆ.
ವಿದೇಶಾಂಗ ಸಚಿವಾಲಯವು ಇತ್ತೀಚೆಗೆ ತೆಗೆದುಕೊಂಡಿರುವ ನಿರ್ಣಯದಂತೆ ಪ್ರತಿಯೊಬ್ಬ ಕೇಂದ್ರ ಮಂತ್ರಿಯನ್ನೂ ವಿದೇಶ ಪ್ರವಾಸಕ್ಕೆ ಕಳುಹಿಸಿ ಇತರ ದೇಶಗಳೊಂದಿಗಿನ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಇಲ್ಲಿಯ ತನಕ ಈಗಿನ ಕೇಂದ್ರ ಸರಕಾರದ ಯಾವುದೇ ಪ್ರತಿನಿಧಿ ಭೇಟಿ ನೀಡದ 68 ದೇಶಗಳಿಗೆ ಕೇಂದ್ರ ಸಚಿವರನ್ನು ಕಳುಹಿಸುವ ಯೋಚನೆ ಸಚಿವಾಲಯಕ್ಕಿದೆ. ಅಮೆರಿಕ, ಜರ್ಮನಿ, ಇಂಗ್ಲೆಂಡ್, ಚೀನಾ ಮುಂತಾದ ದೇಶಗಳಿಗೆ ಸಚಿವರು ಭೇಟಿ ನೀಡುತ್ತಾರಾದರೂ ಇತರ ದೇಶಗಳಿಗೆ ಭೇಟಿ ನೀಡಲು ಹೆಚ್ಚಿನ ಆದ್ಯತೆ ನೀಡಲು ಈಗ ಸರಕಾರ ನಿರ್ಧರಿಸಿದೆ.
ಪ್ರಧಾನಿ ನರೇಂದ್ರ ಮೋದಿ ತಮ್ಮ ವಿದೇಶ ಪ್ರವಾಸಗಳಿಗೆ ಇಲ್ಲಿಯ ತನಕ ರೂ. 37.22 ಕೋಟಿ ವ್ಯಯಿಸಿದ್ದಾರೆಂದು ಆರ್‌ಟಿಐ ಮಾಹಿತಿಯೊಂದರಿಂದ ತಿಳಿದುಬಂದಿದೆ. ಪ್ರಧಾನಿಯ ಆಸ್ಟ್ರೇಲಿಯ ಭೇಟಿಗೆ ರೂ. 2.40 ಕೋಟಿ ವ್ಯಯಿಸಲಾಗಿದ್ದು ಇದು ಅತ್ಯಂತ ದುಬಾರಿ ಭೇಟಿಯೆಂದು ಪರಿಗಣಿಸಲಾಗಿದ್ದರೆ ಅವರ ಭೂತಾನ್ ಭೇಟಿಗೆ ಕನಿಷ್ಠ ಮೊತ್ತ ಅಂದರೆ ಕೇವಲ ರೂ. 41.33 ಲಕ್ಷ ವ್ಯಯಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News