×
Ad

ನೀತಾ ಅಂಬಾನಿಯ ‘ವೈ’ ಭದ್ರತೆ ವಿವರ ನೀಡಲು ಗೃಹ ಸಚಿವಾಲಯ ನಕಾರ

Update: 2016-09-13 23:11 IST

ಹೊಸದಿಲ್ಲಿ, ಸೆ.13: ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿಯವರ ಪತ್ನಿ ನೀತಾ ಅಂಬಾನಿಗೆ ನೀಡಲಾಗಿರುವ ವೈ ಭದ್ರತೆಗೆ ತಗಲುವ ವೆಚ್ಚದ ಕುರಿತು ವಿವರ ಕೇಳಿದ್ದ ಆರ್‌ಟಿಐ ಅರ್ಜಿಯೊಂದಕ್ಕೆ ಉತ್ತರಿಸಲು ಕೇಂದ್ರ ಗೃಹ ಸಚಿವಾಲಯ ನಿರಾಕರಿಸಿದೆ.

ಅಹ್ಮದಾಬಾದ್ ಮೂಲದ ಆರ್‌ಟಿಐ ಕಾರ್ಯಕರ್ತರೊಬ್ಬರು ನೀತಾ ಅಂಬಾನಿಗೆ ವೈ ಭದ್ರತೆ ನೀಡುವ ಕುರಿತು ಕೇಂದ್ರ ಸರಕಾರ ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ಹಲವು ಪ್ರಶ್ನೆಗಳನ್ನು ಸಚಿವಾಲಯದ ಮುಂದಿಟ್ಟಿದ್ದರು.
‘‘ನೀತಾ ಅಂಬಾನಿಗೆ ವೈ ವಿಭಾಗದ ಭದ್ರತೆಯೊದಗಿಸುವ ಹಿಂದಿನ ನಿರ್ದಿಷ್ಟ ಕಾರಣ ತಿಳಿಸಿ. ನೀತಾ ಅಂಬಾನಿಗೆೆ ವೈ ಭದ್ರತೆ ನೀಡಿದ ಅಧಿಕಾರಿ/ವ್ಯಕ್ತಿಯ ಹೆಸರು ತಿಳಿಸಿ. ಭದ್ರತೆ ಯಾಚಿಸಿ ನೀತಾ ಅಂಬಾನಿ ಸಲ್ಲಿಸಿದ್ದ ಪತ್ರದ ಪ್ರತಿಯನ್ನು ನೀಡಿ. ನೀತಾ ಅಂಬಾನಿಗೆ ವೈ ಭದ್ರತೆಯೊದಗಿಸಲು ತಗಲುವ ಮಾಸಿಕ ವೆಚ್ಚದ ಮಾಹಿತಿ ನೀಡಿ’’ ಎಂದು ತಮ್ಮ ಹೆಸರು ಬಹಿರಂಗ ಪಡಿಸಲಿಚ್ಛಿಸದ ಆರ್‌ಟಿಐ ಕಾರ್ಯಕರ್ತ ಕೇಳಿದ್ದರು.
ಅಂತೆಯೇ ಈ ಭದ್ರತೆಯ ವೆಚ್ಚದ ಸಲುವಾಗಿ ನೀತಾ ಅಂಬಾನಿ ಗೃಹ ಸಚಿವಾಲಯಕ್ಕೆ ನೀಡುವ ಮಾಸಿಕ ಮೊತ್ತ ಹಾಗೂ ಗೃಹ ಸಚಿವಾಲಯದಿಂದ ವೈ ಭದ್ರತೆ ಪಡೆಯುತ್ತಿರುವ ವ್ಯಕ್ತಿಗಳ/ಸೆಲಬ್ರಿಟಿಗಳ ಹೆಸರುಗಳ ಪಟ್ಟಿ ನೀಡುವಂತೆಯೂ ಆರ್‌ಟಿಐ ಕಾರ್ಯಕರ್ತ ವಿನಂತಿಸಿದ್ದರು.
ವ್ಯಕ್ತಿಯೊಬ್ಬರಿಗಿರುವ ‘ಬೆದರಿಕೆಯನ್ನು ಪರಾಮರ್ಶಿಸಿ’ ಅದರ ಆಧಾರದಲ್ಲಿ ಅವರಿಗೆ ಭದ್ರತೆಯೊದಗಿಸಲಾಗುತ್ತದೆ ಎಂದು ಸಚಿವಾಲಯ ತನ್ನ ಉತ್ತರದಲ್ಲಿ ಹೇಳಿತ್ತಲ್ಲದೆ ನೀತಾ ಅಂಬಾನಿಗೆ ನೀಡಲಾದ ಭದ್ರತೆಯ ಕುರಿತಾಗಿ ಕೇಳಲಾದ ಮಾಹಿತಿಯ ಬಗ್ಗೆ ಪ್ರತಿಕ್ರಿಯಿಸಿ, ಈ ಮಾಹಿತಿಗಳನ್ನು ಬಹಿರಂಗಪಡಿಸುವುದನ್ನು ಆರ್‌ಟಿಐ ಕಾಯ್ದೆ-2005 ಇದರ ಸೆಕ್ಷನ್ 8(1)(ಜಿ), 8(1) ಹಾಗೂ 24(1) ಇದರ ಅನ್ವಯ ವಿನಾಯಿತಿ ನೀಡಲಾಗಿದೆ ಹಾಗೂ ಅದನ್ನು ನೀಡಲು ಸಾಧ್ಯವಿಲ್ಲ’’ ಎಂದು ಹೇಳಿದೆ.
ಜುಲೈ ತಿಂಗಳಲ್ಲಿ ಕೇಂದ್ರ ಸರಕಾರ ನೀತಾ ಅಂಬಾನಿಗೆ ವೈ ಭದ್ರತೆ ಒದಗಿಸಿ ಅವರ ಭದ್ರತೆಗಾಗಿ ಹತ್ತು ಸಿಆರ್‌ಪಿಎಫ್ ಕಮಾಂಡೋಗಳನ್ನು ನಿಯೋಜಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News