ಬಿಹಾರ: ಮೈತ್ರಿಕೂಟದಲ್ಲಿ ಬಿರುಕು, ತೇಪೆ ಹಚ್ಚಲು ಲಾಲು ಯತ್ನ
ಪಾಟ್ನಾ, ಸೆ.13: ಪ್ರಮುಖ ಪಾಲುದಾರ ಪಕ್ಷಗಳಾದ ಜೆಡಿಯು ಮತ್ತು ಆರ್‌ಜೆಡಿ ನಡುವೆ ವಾಗ್ವಾದಗಳ ಬಳಿಕ ಬಿಹಾರದ ಆಡಳಿತಾರೂಢ ಮಹಾ ಜಾತ್ಯತೀತ ಮೈತ್ರಿಕೂಟದಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದು, ಲಾಲು ಪ್ರಸಾದ ಯಾದವ ಅವರು ಮಂಗಳವಾರ ಇಲ್ಲಿ,ಈ ಎಲ್ಲ ಗೊಂದಲಗಳು ಮಾಧ್ಯಮಗಳ ಸೃಷ್ಟಿ ಎಂದು ಹೇಳುವ ಮೂಲಕ ಬಿರುಕಿಗೆ ತೇಪೆ ಹಚ್ಚಲು ಪ್ರಯತ್ನಿಸಿದ್ದಾರೆ. ಮುಖ್ಯಮಂತ್ರಿ ನಿತೀಶ ಕುಮಾರ್ ಅವರು ಮೈತ್ರಿಕೂಟದ ನಾಯಕ ಎಂದು ಅವರು ಇದೇ ವೇಳೆ ಒತ್ತಿ ಹೇಳಿದ್ದಾರೆ.
ಆದರೆ ಪಕ್ಷದ ಮಾಜಿ ಸಂಸದ, 11ವರ್ಷಗಳ ಜೈಲುವಾಸದ ಬಳಿಕ ಇತ್ತೀಚಿಗಷ್ಟೇ ಜೈಲಿನಿಂದ ಬಿಡುಗಡೆಗೊಂಡಿರುವ ಮೊಹಮ್ಮದ್ ಶಹಾಬುದ್ದೀನ್‌ರನ್ನು ಸಮರ್ಥಿಸಿಕೊಂಡಿರುವ ಲಾಲು, ಅವರು ಯಾವುದೇ ಮಾನಹಾನಿಕರ ಟೀಕೆ ಮಾಡಿಲ್ಲ ಎಂದು ಹೇಳಿದರು.
ನಿತೀಶ ಸಂದರ್ಭಗಳ ಲಾಭ ಪಡೆದು ಮುಖ್ಯಮಂತ್ರಿಯಾಗಿದ್ದಾರೆ ಎಂಬ ಶಹಾಬುದ್ದೀನ್ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವಾಗ ಆರ್‌ಜೆಡಿ ಉಪಾಧ್ಯಕ್ಷ ರಘುವಂಶ ಪ್ರಸಾದ ಸಿಂಗ್ ಅವರ ಹೇಳಿಕೆಯ ಬಳಿಕ ಮೈತ್ರಿಕೂಟದಲ್ಲಿ ಬಿರುಕುಗಳು ಕಾಣಿಸಿಕೊಳ್ಳತೊಡಗಿವೆ.