ಅಕ್ಟೋಬರ್ ನಲ್ಲಿ ಸಮಗ್ರ ಕೃಷಿ ಕಾರ್ಯಾಗಾರ: ಪ್ರಕಾಶ್ ಕಮ್ಮರಡಿ

Update: 2016-09-13 18:50 GMT

ಮಂಗಳೂರು, ಸೆ.13: ಅಡಿಕೆ ಬೆಳೆಗಾರರು ವಿವಿಧ ಬೆಳೆಗಳ ಕೃಷಿ ಸಂಬಂಧಿತ ಚಟುವಟಿಕೆಗಳನ್ನು ಕೈಗೊಂಡು ಬಹುಮೂಲಗಳಿಂದ ಆದಾಯ ಗಳಿಸುವ ನಿಟ್ಟಿನಲ್ಲಿ ಸಮಗ್ರ ಕೃಷಿಗೆ ಉತ್ತೇಜನ ನೀಡಲು ಆಯೋಗ ಕಾರ್ಯೋನ್ಮುಖವಾಗಿದೆ ಎಂದು ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಪ್ರಕಾಶ್ ಕಮ್ಮರಡಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಕೃಷಿ ಮತ್ತು ತೋಟಗಾರಿಕಾ ಇಲಾಖೆ ಅಧಿಕಾರಿಗಳ ಜೊತೆ ಸಭೆಯ ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತ ನಾಡಿದ ಅವರು, ಈ ದಿಸೆಯಲ್ಲಿ ಅಕ್ಟೋಬರ್ ಕೊನೆಯ ವಾರದಲ್ಲಿ ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯದಲ್ಲಿ ಎರಡು ದಿನಗಳ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದರು. ಕೃಷಿಬೆಲೆ ಆಯೋಗ ಮತ್ತು ಕೇಂದ್ರೀಯ ತೋಟಗಾರಿಕಾ ವಿಜ್ಞಾನ ಸಂಸ್ಥೆ, ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ವಿವಿ, ಕ್ಯಾಂಪ್ಕೊ, ಕೃಷಿ ವಿಜ್ಞಾನ ಕೇಂದ್ರಗಳ ಸಹಯೋಗದಲ್ಲಿ ಈ ಕಾರ್ಯಾಗಾರ ನಡೆಯಲಿದೆ ಎಂದು ಅವರು ಹೇಳಿದರು.

ರೈತರು ಅಡಿಕೆ ಜತೆ ವೌಲ್ಯವರ್ಧಿತ ಕೃಷಿ ಚಟವಟಿಕೆಗಳ ಮೂಲಕ ವಿವಿಧ ಮೂಲಗಳಿಂದ ಆದಾಯ ಪಡೆಯಲು ಉತ್ತೇಜನ ನೀಡಲಾಗುವುದು. ದ.ಕ. ಜಿಲ್ಲೆಯಲ್ಲಿ ಪ್ರಾಥಮಿಕವಾಗಿ ಈ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲಾಗುವುದು. ಇದಕ್ಕಾಗಿ ಜಿಲ್ಲೆಯ ಕೆಲವು ಗ್ರಾಮಗಳನ್ನು ಆಯ್ದುಕೊಂಡು ಈ ವ್ಯವಸ್ಥೆಯನ್ನು ಅಳವಡಿಸಿ ಇದರ ಫಲಿತಾಂಶಗಳನ್ನು ಗಮನಿಸಲಾಗುವುದು. ಮುಂದೆ ಜಿಲ್ಲಾದ್ಯಂತ ಹಾಗೂ ರಾಜ್ಯಾದ್ಯಂತ ಕಾರ್ಯಯೋಜನೆ ರೂಪಿಸಲು ಆರ್ಥಿಕ ಸಂಪನ್ಮೂಲಕ್ಕಾಗಿ ರಾಜ್ಯಕ್ಕೆ ವರದಿಯೊಂದನ್ನು ಬೆಲೆ ಆಯೋಗ ಸಲ್ಲಿಸಲಿದೆ ಎಂದರು. ರೈತರ ಆದಾಯವನ್ನು ಐದು ವರ್ಷಗಳಲ್ಲಿ ದ್ವಿಗುಣಗೊಳಿಸುವುದು ಹಾಗೂ ರೈತರ ಸಮಗ್ರ ಕಲ್ಯಾಣಕ್ಕಾಗಿ ಕೇಂದ್ರ ಸರಕಾರ ಕಾರ್ಯಯೋಜನೆ ಹಾಕಿಕೊಂಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸಮಗ್ರ ಕೃಷಿ ಚಟುವಟಿಕೆಯನ್ನು ರೂಪಿಸಲು ಮುಂದಿನ ಬಜೆಟ್‌ಗೆ ಮುಂಚಿತವಾಗಿ ಕೇಂದ್ರ ಸರಕಾರಕ್ಕೆ ಪ್ರಸ್ತಾಪ ಸಲ್ಲಿಸಲಾಗುವುದು ಎಂದವರು ಹೇಳಿದರು.

ಮಳೆಯಾಶ್ರಿತ ಭತ್ತ ಬೆಳೆಯನ್ನು ಉಳಿಸಿಕೊಳ್ಳು ವುದು ಹಾಗೂ ಅಭಿವೃದ್ಧಿಪಡಿಸುವ ಉದ್ದೇಶದಿಂದ ರಾಜ್ಯ ಸರಕಾರಕ್ಕೆ ಈಗಾಗಲೇ ಪ್ರಸ್ತಾಪ ಸಲ್ಲಿಸಲಾಗಿದೆ. ಕೇರಳದಲ್ಲಿ ಮಳೆಯಾಶ್ರಿತ ಭತ್ತ ಬೆಳೆ ಚಟು ವಟಿಕೆ ಉತ್ತಮ ರೀತಿಯಲ್ಲಿ ನಡೆಯುತ್ತಿದ್ದು, ರಾಜ್ಯದಿಂದ 5 ಮಂದಿಯ ನಿಯೋಗ ಅಲ್ಲಿಗೆ ತೆರಳಿ ವರದಿ ಸಲ್ಲಿಸಿದ್ದಾರೆ. ಅದರ ಆಧಾರದಲ್ಲಿ ರಾಜ್ಯದಲ್ಲಿ ಮುಂದಿನ ಕಾರ್ಯಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.


ಅಡಿಕೆ, ತೆಂಗಿಗೆ ಶೀಘ್ರ ಬೆಂಬಲ ಬೆಲೆ
 ಅಡಿಕೆ ಮತ್ತು ತೆಂಗಿಗೆ ಬೆಂಬಲ ಬೆಲೆ ಶೀಘ್ರ ಘೋಷಣೆಯಾಗುವ ನಿರೀಕ್ಷೆಯಿದೆ. ಕೆಂಪಡಿಕೆ ಕ್ವಿಂಟಾಲ್‌ಗೆ 40 ಸಾವಿರ ರೂ. ಹಾಗೂ ಬಿಳಿ ಅಡಿಕೆಗೆ 30 ಸಾವಿರ ರೂ. ಬೆಂಬಲ ಬೆಲೆ ಘೋಷಿಸಲು ಅಂದಾಜುಪಟ್ಟಿ ತಯಾರಿಸಿ ಕೇಂದ್ರ ಸರಕಾರಕ್ಕೆ ಜುಲೈ 4ರಂದು ಪ್ರಸ್ತಾಪ ಸಲ್ಲಿಸಲಾಗಿತ್ತು. ಕೇರಳದಲ್ಲಿ ಬೆಂಬಲ ಬೆಲೆ ಇದಕ್ಕಿಂತ ಕಡಿಮೆ ಇರುವುದರಿಂದ ಸೂಕ್ತ ಸ್ಪಷ್ಟೀಕರಣ ಕೋರಿ ಕೇಂದ್ರದಿಂದ ಆ.5ರಂದು ಪತ್ರ ಬಂದಿದೆ. ಅದಕ್ಕೆ ಸೂಕ್ತ ಉತ್ತರವನ್ನೂ ನೀಡಿದ್ದೇವೆ.
 ತೆಂಗಿನಕಾಯಿಗೆ ಈಗ ಕನಿಷ್ಠ ಬೆಂಬಲ ಬೆಲೆ ಕೆ.ಜಿ.ಯೊಂದಕ್ಕೆ 16 ರೂ. ಇದೆ. ಎಣ್ಣೆ ಉತ್ಪಾದಿಸುವ ಕೊಬ್ಬರಿಗೆ 59.50 ರೂ. ಹಾಗೂ ಉಂಡೆಕಾಯಿ ಎಣ್ಣೆ ಕೊಬ್ಬರಿಗೆ ಪ್ರಸ್ತುತ ಇರುವ ಬೆಂಬಲ ಬೆಲೆ 62.40 ರೂ. ಆದರೆ ಕೊಬ್ಬರಿಯ ಉತ್ಪಾದನಾ ವೆಚ್ಚ ಕ್ವಿಂಟಾಲ್‌ಗೆ 89 ರೂ. ಆಗುತ್ತದೆ. ಆದ್ದರಿಂದ ಈಗಿನ ಬೆಂಬಲ ಬೆಲೆಯನ್ನು ಏರಿಕೆ ಮಾಡಬೇಕು ಎನ್ನುವ ಪ್ರಸ್ತಾಪವನ್ನು ರಾಜ್ಯ ಸರಕಾರ ಕೇಂದ್ರಕ್ಕೆ ಕಳುಹಿಸಿದೆ.
                             -ಪ್ರಕಾಶ್ ಕಮ್ಮರಡಿ, ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News