×
Ad

ತಾಯಿಯೇ ಇಲ್ಲದ ಮಗು ಸೃಷ್ಟಿ ಸಾಧ್ಯವಾಗಲಿದೆ ಎನ್ನುತ್ತಾರೆ ಈ ಸಂಶೋಧಕರು!

Update: 2016-09-14 12:46 IST

ಲಂಡನ್, ಸೆ.14: ತಾಯಿಯೇ ಇಲ್ಲದೇ ಮಗು ಸೃಷ್ಟಿಸಲು ಸಾಧ್ಯವೇ? ಇತ್ತೀಚೆಗೆ ನಡೆಸಿದ ಸಂಶೋಧನೆ ಪ್ರಕಾರ, ತಾಯಿ ಇಲ್ಲದೇ ಮಗುವನ್ನು ಸೃಷ್ಟಿಸಲು ಭವಿಷ್ಯದಲ್ಲಿ ಸಾಧ್ಯವಾಗಲಿದೆ ಎನ್ನುವುದು ಸಂಶೋಧಕರ ದೃಢ ನಿರ್ಧಾರ.
ವೀರ್ಯಾಣುಗಳು ತಾವು ಸಾಮಾನ್ಯ ಅಂಡಾಣುವನ್ನು ಫಲಿತಗೊಳಿಸುತ್ತಿದ್ದೇವೆ ಎಂದು ನಂಬುವಂತೆ ಮಾಡುವ ಕೌಶಲದಿಂದ ಆರೋಗ್ಯಕರ ಇಲಿಮರಿಯನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿರುವುದಾಗಿ ಸಂಶೋಧಕರು ನೇಚರ್ ಕಮ್ಯುನಿಕೇಶನ್ಸ್‌ನಲ್ಲಿ ಪ್ರಕಟಿಸಿದ ಸಂಶೋಧನಾ ವರದಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ಭವಿಷ್ಯದಲ್ಲಿ ಮಗು ಸೃಷ್ಟಿ ಪ್ರಕ್ರಿಯೆಯಿಂದ ಮಹಿಳೆಯನ್ನು ಹೊರತುಪಡಿಸಬಹುದು ಎನ್ನುವುದು ಅವರ ಸ್ಪಷ್ಟ ಅಭಿಮತ.
ಬಾತ್ ಯುನಿವರ್ಸಿಟಿ ಸಂಶೋಧಕರು ಆರಂಭದಲ್ಲಿ ಫಲಿತಗೊಳ್ಳದ ಅಂಡಾಣುವಿನೊಂದಿಗೆ ಪ್ರಯೋಗ ಆರಂಭಿಸಿದರು. ಕೃತಕ ನಕಲಿ ಭ್ರೂಣ ಸೃಷ್ಟಿಸಲು ರಾಸಾಯನಿಕ ಬಳಸಿದರು. ಈ ನಕಲಿ ಭ್ರೂಣದಲ್ಲಿ ಸಾಮಾನ್ಯ ಕೋಶಗಳಾದ ಚರ್ಮಕೋಶಗಳನ್ನು ವಿಭಜಿಸಿ ಡಿಎನ್‌ಎ ನಿಯಂತ್ರಿಸಿದರು. ವೀರ್ಯವನ್ನು ಈ ನಕಲಿ ಭ್ರೂಣಕ್ಕೆ ಸೇರಿಸಿ, ಆರೋಗ್ಯವಂತ ಮರಿಗಳನ್ನು ಸೃಷ್ಟಿಸುವಲ್ಲಿ ಯಶಸ್ವಿಯಾದರು. ಭವಿಷ್ಯದಲ್ಲಿ ಇದೇ ವಿಧಾನ ಬಳಸಿಕೊಂಡು ಮಗುವಿನ ಸೃಷ್ಟಿಯೂ ಸಾಧ್ಯವಾಗಲಿದೆ ಎನ್ನುವುದು ಅವರ ನಂಬಿಕೆ. ಇಲಿಗಳ ಮೇಲೆ ನಡೆಸಿದ ಈ ಪ್ರಯೋಗದಲ್ಲಿ ಪ್ರತಿ ನಾಲ್ಕರಲ್ಲಿ ಒಂದು ಯಶಸ್ವಿಯಾಗಿದೆ.
ಇಂಥ ಪ್ರಯೋಗ ನಡೆದಿರುವುದು ಇದೇ ಮೊದಲು ಎಂದು ಸಂಶೋಧಕ ಡಾ.ಟೋನಿ ಪೆರ್ರಿ ಹೇಳಿಕೊಂಡಿದ್ದಾರೆ. ಇದು 200 ವರ್ಷಗಳ ನಂಬಿಕೆಯನ್ನು ಹುಸಿಗೊಳಿಸಿದೆ. ಇಂಥ ಮರಿಗಳು ಅತ್ಯಂತ ಆರೋಗ್ಯಕರವಾಗಿವೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News