ಭಾರತದಲ್ಲಿ ವಾಸಸ್ಥಾನ, ಜಾತಿ, ಆಹಾರ ಮತ್ತು ವರ್ಗಗಳ ಸ್ಥಿತಿ
ಭಾರತ ದೇಶದಲ್ಲಿ ವಾಸಸ್ಥಾನ, ಜಾತಿ, ಆಹಾರ, ವರ್ಗ ಹಾಗೂ ವೃತ್ತಿಗೆಒಂದಕ್ಕೊಂದು ಸಂಬಂಧವಿದೆ. ಭಾರತ ಜಾತ್ಯತೀತ ರಾಷ್ಟ್ರ ಎಂಬುದಕ್ಕಿಂತ ಜಾತೀಯತೆ ಅತಿಯಾಗಿರುವ ರಾಷ್ಟ್ರವಾಗಿದೆ. ಇಲಿ ್ಲ ಜಾತಿ, ವರ್ಗ, ಪುರುಷ ಕೇಂದ್ರಿತ ಹಿತಾಸಕ್ತಿಗಳು, ಹಲವು ಸಾಮಾಜಿಕ, ಆರ್ಥಿಕ ತಾರತಮ್ಯಗಳನ್ನು ನಿರ್ಮಾಣ ಮಾಡಿವೆ. ಇವು ಎಷ್ಟೋ ಅಮಾನವೀಯ ಘಟನೆಗಳಿಗೆ ಕಾರಣವಾಗಿವೆೆ. ಈ ಬಗೆಯ ತಾರತಮ್ಯಗಳು ಎಲ್ಲಾ ಕ್ಷೇತ್ರಗಳಲ್ಲೂ ಕಂಡು ಬರುತ್ತವೆ. ಪ್ರಸ್ತುತ ಈ ಲೇಖನದಲ್ಲಿ ವಾಸಸ್ಥಾನದ ಮೇಲೆ ಜಾತಿ, ಆಹಾರ ಮತ್ತು ವರ್ಗದ ತಾರತಮ್ಯಗಳು ಹೇಗೆ ಪ್ರಭಾವ ಬೀರಿವೆ ಎಂಬುದನ್ನು ಗಮನಿಸಲಾಗಿದೆ.
ಕೆಲವೊಂದು ದೇವಸ್ಥಾನಗಳಲ್ಲಿ ಹೇಗೆ ಅಸ್ಪಶ್ಯತೆಯನ್ನು ಆಚರಿಸಲಾಗುತ್ತದೆಯೋ ಹಾಗೆಯೇ ಕೆಲವು ಬಾಡಿಗೆ ಮನೆಗಳನ್ನು ಪಡೆಯುವಲ್ಲಿ ಕೂಡಾ ದಲಿತರು ಅಸ್ಪಶ್ಯತೆಗೆ ಒಳಗಾಗುವಂತಹ ಪರಿಸ್ಥಿತಿಯಿದೆ. ಊರಿಗೆ ಹೊರಗಿನಿಂದ ವೃತ್ತಿಗೂ, ಶಿಕ್ಷಣಕ್ಕೊ ಬಂದ ದಲಿತರಿಗೆ ಮೊದಲು ಕಾಡುವಂತಹ ಸಮಸ್ಯೆಯೆಂದರೆ ಬಾಡಿಗೆ ಮನೆ ಪಡೆಯುವುದು. ಸಾಮಾಜಿಕವಾಗಿ ಮೇಲುಸ್ತರದಲ್ಲಿರುವ ಸಮುದಾಯಗಳು ಬಹುತೇಕ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿದ್ದು ಸ್ವಂತ ಮನೆಯನ್ನು ಹೊಂದಿರುತ್ತಾರೆ.
ದಲಿತರು ಬಾಡಿಗೆ ಕೊಡುವಂತೆ ತಮ್ಮ ಮನೆ ಕಟ್ಟಿಕೊಂಡಿರುವುದಿಲ್ಲ. ಹೀಗಾಗಿ ಹೊರಗಿಂದ ಬಂದವರು ಮೇಲ್ಜಾತಿ, ಮೇಲ್ವರ್ಗದರು ಕಟ್ಟಿದ ಮನೆಗಳಲ್ಲೇ ಬಾಡಿಗೆ ಹಿಡಿಯಬೇಕಾಗುತ್ತದೆ. ಆದರೆ ಅವರು ದಲಿತರಿಗೆ ಆಹಾರದ ಕಾರಣಕ್ಕಾಗಿ, ಜಾತಿಯ ಕಾರಣಕ್ಕಾಗಿ ಬಾಡಿಗೆ ಮನೆ ಕೊಡುವುದಕ್ಕೆ ನಿರಾಕರಿಸುತ್ತಾರೆ, ನಮ್ಮ ಸಮಾಜದಲ್ಲಿ ಜಾತಿ ಮತ್ತು ಆಹಾರಕ್ರಮಗಳು ಅಂತರ್‌ಸಂಬಂಧ ಹೊಂದಿರುವುದರಿಂದ ಇವುಗಳ ಆಧಾರದ ಮೇಲೆ ಬಾಡಿಗೆ ಮನೆಯನ್ನು ಕೊಡುವ ಅಥವಾ ಕೊಡದಿರುವ ನಿರ್ಧಾರವನ್ನು ಕೈಗೊಳ್ಳಲಾಗುತ್ತದೆ. ಆದರೆ ಮನೆಯನ್ನು ನಿರ್ಮಾಣ ಮಾಡುವಲ್ಲಿ ಜಲ್ಲಿ ಒಡೆಯುವ, ಮಣ್ಣು ಹೊರುವ, ಸಿಮೆಂಟ್ ಕಲಸುವ ಕೆಲಸಗಳ ಹಿಂದೆ ತಳಸಮುದಾಯದಿಂದ ಬಂದ ದುಡಿಯುವ ವರ್ಗಗಳ ಶ್ರಮವೇ ಬಹುತೇಕ ಇರುತ್ತದೆ.
ಮನೆ ನಿರ್ಮಾಣವಾಗುವಾಗ ಕಾಣದ ಸಾಮಾಜಿಕ, ಆರ್ಥಿಕ ಅಂತರಗಳು ಅದು ಗೃಹವಾದಾಗ ಗೃಹಪ್ರವೇಶದ ಬಳಿಕ ಶುರುವಾಗುತ್ತವೆ. ಗೃಹಪ್ರವೇಶದಲ್ಲಿ ಅದಕ್ಕೆ ಹೋಮ, ಪೂಜೆಯ ಮೂಲಕ ಪವಿತ್ರೀಕರಿಸಲಾಗುತ್ತದೆ. ಈ ಮೂಲಕ ಅಸ್ಪಶ್ಯವಾಗಿದ್ದ ಮನೆ ಸ್ಪಶ್ಯವಾದ ಗೃಹವಾಗುತ್ತದೆ. ಅಸ್ಪಶ್ಯತೆ ಆಚರಿಸುವ ಜಾಗವಾಗುತ್ತದೆ.
ಇದನ್ನು ಒಂದು ರೂಪಕ ಕತೆಯ ಮೂಲಕ ವಿವರಿಸಬಹುದು. ಒಮ್ಮೆ ಒಬ್ಬ ಮೇಲ್ಜಾತಿ ವ್ಯಕ್ತಿ ಪತ್ನಿಗೆ ನೀರು ತರಲು ಹೇಳುತ್ತಾನೆ. ಆಕೆ ಪಕ್ಕದ ಶೂದ್ರನ ಮನೆಯಿಂದ ನೀರು ತಂದುಕೊಡುತ್ತಾಳೆ. ನೀರು ಕುಡಿದ ವ್ಯಕ್ತಿ ನೀರು ಚೆನ್ನಾಗಿದೆ ಎಲ್ಲಿಂದ ತಂದೆ ಎಂದು ನೀರಿನ ಮೂಲ ಕೇಳುವನು. ಅದು ಶೂದ್ರನ ಮನೆಯದು ಎಂದು ಗೊತ್ತಾದ ತಕ್ಷಣ ಅದನ್ನು ಕುಡಿದುದಕ್ಕೆ ಪರಿತಪಿಸುವನು. ಮತ್ತೊಂದು ದಿನ ನೀರು ಕೇಳಿದಾಗ ಪತ್ನಿ ನೀರಿಲ್ಲ ಎನ್ನುತ್ತಾಳೆ.
ಏಕೆಂದರೆ ನೀರಿನ ಮೂಲ ಶೂದ್ರರ ಕೇರಿಯಲ್ಲಿರುತ್ತದೆ. ಹಾಲು ಕೇಳಿದಾಗ ಹಾಲಿಲ್ಲ ಎನ್ನುತ್ತಾಳೆ. ಏಕೆಂದರೆ ಹಸು ಮೇಯಿಸುವವರು ತಳ ಸಮುದಾಯದವರಾಗಿರುತ್ತಾರೆ. ಕೊನೆಗೆ ಆಕೆ ಮನೆಗೆ ಬೆಂಕಿ ಹಚ್ಚುತ್ತಾಳೆ, ಕಾರಣ ಆ ಮನೆಯ ನಿರ್ಮಾಣದ ಹಿಂದಿರುವ ಬೆವರು ಕೂಡಾ ತಳಸಮುದಾಯದಿಂದ ಬಂದ ದುಡಿಯುವ ವರ್ಗಗಳದ್ದೆ ಆಗಿರುತ್ತದೆ. ಇಲ್ಲಿಯೇ ಸಿದ್ದಲಿಂಗಯ್ಯನವರ 'ನನ್ನ ಜನಗಳು ಕವಿತೆಯ ಮಾಳಿಗೆಗಳ ಎತ್ತಿದೋರು ಬಂಗಲೆಗಳ ಕಟ್ಟಿದೋರು
ತಳಾದೀಗೆ ಸಿಕ್ಕಿದೋರು ನನ್ನ ಜನಗಳು....' ಸಾಲು ನೆನಪಾಗುತ್ತವೆ. ಈ ಮೇಲಿನ ಕಥೆ ಮತ್ತು ಕವಿತೆಗಳೆರಡು ಉತ್ಪಾದಕರೂ ಮತ್ತು ಉತ್ಪಾದಿತ ವಸ್ತುವಿಗೂ ಇರುವ ಸಂಬಂಧವನ್ನು ಮತ್ತು ಒಟ್ಟಾರೆ ಸಮಾಜದ ಸಂಪತ್ತಿನ ನಿರ್ಮಾಣದ ಹಿಂದೆ ಇರುವ ದಲಿತರ, ಬಡವರ, ದುಡಿಯುವ ವರ್ಗಗಳ ಶ್ರಮವನ್ನು ಮಾರ್ಮಿಕವಾಗಿ ತಿಳಿಸುತ್ತದೆ. ಈ ರೀತಿ ಶ್ರಮ ಸಂಸ್ಕೃತಿಯ ದುಡಿಯುವಿಕೆಯಿಂದ ನಿರ್ಮಾಣವಾದ ಯಾವುದನ್ನೇ ಆಗಲಿ ಸಂಪ್ರದಾಯ, ನಂಬಿಕೆಗಳ ಹೆಸರಲ್ಲಿ ಸ್ವಾರ್ಥೀಕರಿಸುವುದರ ಹಿಂದೆ ಒಂದು ದೀರ್ಘ ಚರಿತ್ರೆಯೇ ಇದೆ.
ಆರ್ಯರು ಭಾರತಕ್ಕೆ ವಲಸೆ ಬಂದಾಗ ಅನಾರ್ಯರ ಸಂಪತ್ತನ್ನು ವಶಪಡಿಸಿಕೊಳ್ಳಲು ಸ್ಪಶ್ಯತೆ, ಅಸ್ಪಶ್ಯತೆಯನ್ನು ಹುಟ್ಟುಹಾಕಿದರು ಎಂಬ ವ್ಯಾಖ್ಯಾನವಿದೆ. ಅಸ್ಪಶ್ಯತೆಯು ಒಂದು ಸಾಮಾಜಿಕ, ಮನಶಾಸ್ತ್ರೀಯ, ಆರ್ಥಿಕ ಸಿದ್ಧಾಂತವಾಗಿದ್ದು, ಅದು ಇಂದಿಗೂ ಜನರ ಬದುಕಿನ ಭಾಗವಾಗಿ ಮುಂದುವರಿದುಕೊಂಡು ಬಂದಿದೆ. ಇದಕ್ಕೆ ಪೂರಕವಾಗಿ ಮಾಧ್ಯಮಗಳಲ್ಲಿ ಬರುವ ಜ್ಯೋತಿಷಿಗಳು ಜನರ ಭಾವುಕತೆಯನ್ನು ದುರುಪಯೋಗ ಪಡಿಸಿಕೊಂಡು ಅವರನ್ನು ಮೂಢರನ್ನಾಗಿಸಿ ಉತ್ತಮ ಸಮಾಜದ ನಿರ್ಮಾಣಕ್ಕೆ ತೊಡಕಾಗಿದ್ದಾರೆ.
ಈ ಹಿಂದಿನ ಚರಿತ್ರೆಯಲ್ಲಿ ಮೇಲ್ವರ್ಗದವರು ದಲಿತರಿಗೆ ನೇರವಾಗಿ ಶೋಷಣೆ ಮಾಡುತ್ತಿದ್ದರು ಹಾಗೂ ಶೋಷಕರು ಇಲ್ಲಿ ಸ್ಪಷ್ಟವಾಗಿರುತ್ತಿದ್ದರು. ಆದರೆ ಇಂದಿನ ದಿನಮಾನಗಳಲ್ಲಿ ನಾಜೂಕಾಗಿ ಶೋಷಿಸುವುದನ್ನು ಕಾಣಬಹುದು. ಹೀಗೆ ವಾಸಸ್ಥಾನ ಕೂಡಾ ಸ್ಪಶ್ಯತೆ, ಅಸ್ಪಶ್ಯತೆ ಎಂಬುದರ ವ್ಯಾಪ್ತಿಗೆ ಬಂದು ಗಟ್ಟಿಯಾಗಿ ನೆಲೆ ನಿಂತಿದೆ.
ಭಾರತದಲ್ಲಿ ಬಹುಸಂಖ್ಯಾತ ಮಾಂಸಾಹಾರಿಗಳನ್ನು ಕಡೆಗಣಿಸಿ ಅಲ್ಪಸಂಖ್ಯಾತ ಸಸ್ಯಾಹಾರಿಗಳ ಸಂಸ್ಕೃತಿಯನ್ನು ಶ್ರೇಷ್ಠ ಎಂದು ಬಿಂಬಿಸುತ್ತ ಬರಲಾಗಿದೆ. ಅದನ್ನು ಜನರ ಮೇಲೆ ಹೇರುವ ಕೆಲಸ ನಡೆಯುತ್ತಿದೆ. ಈ ಮೂಲಕ ಮಾಂಸಾಹಾರಿಗಳಿಗೆ ಬಾಡಿಗೆ ಮನೆ ನೀಡಲು ನಿರಾಕರಿಸಲಾಗುತ್ತದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮಾಂಸಾಹಾರಿಗಳ ಮೇಲೆ ಮಾರಣಾಂತಿಕವಾದ ಹಲ್ಲೆಗಳನ್ನು ಮಾಡುವಂತಹ ಪರಿಸ್ಥಿತಿ ಕಂಡುಬರುತ್ತಿವೆ.
ಉತ್ತರ ಪ್ರದೇಶದ ದಾದ್ರಿಯಲ್ಲಿ ಮುಸ್ಲಿಮರ ಮೇಲೆ, ಗುಜರಾತಿನ ಉನದಲ್ಲಿ ಹಾಗೂ ಕರ್ನಾಟಕದ ಬಾಳೆಹೊನ್ನೂರಿನಲ್ಲಿ ದಲಿತರ ಮೇಲಾದ ಹಲ್ಲೆಗಳ ಹಿಂದೆ ಮಾಂಸಾಹಾರದ ಬಗೆಗಿನ ಮೇಲ್ಜಾತಿಯವರ ಅಸಹನೆಯಿದೆ. ಮಾಂಸಾಹಾರವು ಕೂಡ ಆಹಾರ ಸರಪಳಿಯ ಒಂದು ಕ್ರಮ ಎಂಬುದು ಇವರಿಗೆ ತಿಳಿದಿದಿಯೋ ಅಥವಾ ತಿಳಿದಿದ್ದರೂ ತಿಳಿಯದಂತೆ ಮಾಡಲಾಗುತ್ತಿದೆಯೋ ಅರ್ಥ ಮಾಡಿಕೊಳ್ಳುವುದು ಕಷ್ಟವಾಗಿದೆ. ಮನೆಯಲ್ಲಿ ಮುದ್ರೆ ಕಲ್ಲಿದೆ ಎಂಬ ನೆಪ ಹೇಳಿ ದಲಿತರಿಗೆ, ಮುಸ್ಲಿಮರಿಗೆ ಬಾಡಿಗೆ ನೀಡದಿರುವ ನೂರಾರು ಪ್ರಕರಣಗಳಿವೆ. ನಮ್ಮ ಸಮಾಜವು ವೈಚಾರಿಕ ತಳಹದಿಯ ಮೇಲೆ ನಿರ್ಮಾಣವಾಗದಿರುವುದೇ ಈ ತರದ ತಾರತಮ್ಯಗಳಿಗೆ ಕಾರಣವಾಗಿದೆ. ಅವಿವಾಹಿತರಿಗೆ, ದಲಿತರಿಗೆ, ಬಡವರಿಗೆ, ಮುಸ್ಲಿಮರಿಗೆ ಬಾಡಿಗೆ ಮನೆ ಕೊಡದಿರುವುದು ನಮ್ಮ ದೇಶ ವಿವಿಧತೆಯಲ್ಲಿ ಏಕತೆಯನ್ನು ಒಳಗೊಂಡಿದೆ ಎಂಬ ನಂಬಿಕೆಯನ್ನು ಭಗ್ನಗೊಳಿಸುತ್ತದೆ.
ಈ ಏಕತೆ ಎಂಬುದು ಮೇಲ್‌ಸ್ತರದಿಂದ ಉಂಟಾದುದ್ದಲ್ಲ, ತುಳಿತಕ್ಕೊಳಗಾದವರು ತಮ್ಮ ಅಸಹಾಯಕತೆಯಿಂದ ಸಹಿಸಿಕೊಂಡಿರುವುದರಿಂದ ಬಂದಿದೆ. ಈ ಬಗೆಯ ತಾರತಮ್ಯಗಳು ಕೇವಲ ಸಸ್ಯಾಹಾರಿ ಹಾಗೂ ಮಾಂಸಾಹಾರಿಗಳ ನಡುವೆ ಮಾತ್ರ ಕಂಡು ಬರುವುದಿಲ್ಲ, ಮಾಂಸ ತಿನ್ನುವ ಬಹುತೇಕ ಸಮದಾಯಗಳಲ್ಲೂ ಈ ತರದ ಜಾತಿ ಆಧಾರಿತ, ಆಹಾರ ಆಧಾರಿತ ತಾರತಮ್ಯಗಳು ಕಂಡು ಬರುತ್ತವೆ. ಮುಸ್ಲಿಮರಿಗೆ ಬಾಡಿಗೆ ಮನೆ ನೀಡಲು ಹೇಗೆ ಕೆಲವೊಂದು ನಿರ್ಬಂಧಗಳಿವೆಯೊ ಹಾಗೆಯೇ ಕೆಲವು ದಲಿತರು ಮತ್ತು ಕೆಳಜಾತಿಯವರು ಮುಸ್ಲಿಮ್ ಕೇರಿಗಳಲ್ಲಿ ಬಾಡಿಗೆ ಮನೆ ಕೇಳಲು ಹಿಂಜರಿಯುತ್ತಾರೆ. ಇದಕ್ಕೆ ಮುಖ್ಯವಾದ ಕಾರಣ, ಸಾಂಸ್ಕೃತಿಕ ಭಿನ್ನತೆ. ನಮ್ಮವರು ನಮ್ಮವರಲ್ಲ ಎಂಬ ಈ ಅಸಾಂವಿಧಾನಿಕ ಭಿನ್ನತೆಯ ಸೃಷ್ಟಿಯು ಮುಸ್ಲಿಮರನ್ನು ಹೀಗೆ ಕಾಣುವಂತೆ ಮಾಡಿದೆ. ಮುಸ್ಲಿಮರು ಭಯೋತ್ಪಾದಕರಿದ್ದಂತೆ ಎಂಬ ಪೂರ್ವಗ್ರಹಿತ ಆರೋಪವು ಕೂಡ ನಗರಗಳಲ್ಲಿ ಮುಸ್ಲಿಮರಿಗೆ ಬಾಡಿಗೆ ಮನೆ ಕೊಡಲಾಗದಂತಹ ಸನ್ನಿವೇಶ ನಿರ್ಮಾಣ ಮಾಡಿಬಿಟ್ಟಿದೆ.
ಈ ಎಲ್ಲಾ ಸಂಗತಿಗಳ ಮೂಲಕ ನಮ್ಮವರು, ನಮ್ಮವರಲ್ಲ ಎಂಬ ತಾರತಮ್ಯ ಪ್ರಜ್ಞೆಯನ್ನು ಸಮಾಜದಲ್ಲಿ ತುಂಬಲಾಗಿದೆ. ಬ್ರಿಟಿಷರು ತಮ್ಮ ವಸಾಹತುಶಾಹಿ ಆಡಳಿತಕ್ಕೆ ಧಕ್ಕೆ ಬಾರದಿರಲಿ ಎಂಬ ಕಾರಣಕ್ಕೆ ಧರ್ಮ ಧರ್ಮಗಳ ನಡುವೆ ಒಡೆದು ಆಳುವ ನೀತಿಯನ್ನು ಕುತಂತ್ರದಿಂದ ಬಳಸಿದರು. ಬಾಡಿಗೆ ಕೊಡುವ ಅಥವಾ ಬಾಡಿಗೆದಾರರಾಗಿ ಹೋಗುವುದರ ಹಿಂದೆ ಜಾತಿಗಳು ಒಡೆದು ಆಳುವ ನೀತಿಯನ್ನು ಬಳಸುತ್ತವೆ. ಜಾತಿ ಮತ್ತು ಧರ್ಮದ ಆಧಾರದಲ್ಲಿ ಬಾಡಿಗೆ ಮನೆ ಕೊಡುವುದು ಕೊಡದಿರುವುದು ಭಾರತದ ಬಹುಸಂಸ್ಕೃತಿಯನ್ನು ಒಪ್ಪದ ಮೂಲಭೂತವಾದಿತನದಂತೆ ಕಾಣುತ್ತದೆ.ಇನ್ನು ವಾಸಸ್ಥಾನಕ್ಕೂ, ಆರ್ಥಿಕತೆಗೂ ಇರುವ ಸಂಬಂಧವನ್ನು ಗಮನಿಸುವುದಾದರೆ, ಮನೆಯ ಮಾಲಕರ ಪ್ರತಿಕ್ರಿಯೆಯು ಬಾಡಿಗೆ ಮನೆ ಕೇಳುವವರ ಆರ್ಥಿಕ ಹಿನ್ನೆಲೆಯನ್ನು ಆಧರಿಸಿರುತ್ತದೆ.
ಬಾಡಿಗೆ ಮನೆ ಕೇಳುವವರು ಆರ್ಥಿಕವಾಗಿ ಸಬಲರಾಗಿರುವಂತೆ ಕಂಡುಬಂದರೆ ಅಥವಾ ಯಾವುದಾದರೂ ನೌಕರಿಯಲ್ಲಿದ್ದರೆ ಅವರಿಗೆ ಸ್ವಲ್ಪ ಗೌರವದಿಂದಲಾದರೂ ಮಾತನಾಡಿಸುತ್ತಾರೆ. ಇನ್ನು ಆರ್ಥಿಕವಾಗಿ ಹಿಂದುಳಿದಿರುವವರನ್ನಂತೂ ಮಾತನಾಡಿಸುವ ವ್ಯವಧಾನ ಮಾಲಕರಲ್ಲಿರುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಕೆಲವರು ದಲಿತರಿಗೆ ಬಾಡಿಗೆ ಮನೆ ಕೊಡಲು ಮುಂದಾದರೂ, ಅದು ದಲಿತರ ಆರ್ಥಿಕ ಸ್ಥಿತಿಗತಿಯನ್ನು ಅವಲಂಬಿಸಿರುತ್ತದೆ. ಜೊತೆಗೆ ಮೇಲ್ಜಾತಿಯ ಸಮುದಾಯಗಳು ಬಹುಸಂಖ್ಯಾತ ತಳ ಸಮುದಾಯದವರೊಂದಿಗೆ ಮಾಂಸಾಹಾರದ ವಿಷಯದಲ್ಲಿ ಅಂತರ ಕಾಯ್ದುಕೊಂಡರೆ ಅವರ ಆರ್ಥಿಕತೆಗೆ ಪೆಟ್ಟು ಬೀಳುವ ಸಾಧ್ಯತೆಗಳಿವೆ. ಇದರಿಂದ ಇತ್ತೀಚೆಗೆ ದಲಿತರ ಆರ್ಥಿಕ ಸ್ಥಿತಿಗತಿಯನ್ನು ಆಧರಿಸಿ ಬಾಡಿಗೆ ಮನೆ ನೀಡುವ ಪ್ರಸಂಗಗಳು ಅಪರೂಪಕ್ಕೆ ನಡೆಯುತ್ತಿವೆ.
ಆದರೂ ಇನ್ನೂ ಹಳೆಯ ಅನಿಷ್ಟ ಸಂಪ್ರದಾಯಗಳು ಹಾಗೆಯೇ ಉಳಿದುಕೊಂಡಿವೆ. ಇಲ್ಲಿ ನಡೆಯಿತ್ತಿರುವ ಅಪರೂಪದ ಬದಲಾವಣೆಗಳು ಕೇವಲ ಬಾಹ್ಯ ಒತ್ತಡದವು, ಅಂತರಂಗದಿಂದ ಆದವುಗಳಲ್ಲ. ಹೀಗೆ ವಾಸಸ್ಥಾನಕ್ಕೂ, ಜಾತಿಗೂ, ವರ್ಗಕ್ಕೂ ಸಂಬಂಧವಿದ್ದು ಅವು ಹಲವು ಸಮಸ್ಯೆಗಳನ್ನುಂಟು ಮಾಡುತ್ತಿವೆ. ಇಲ್ಲಿ ಮನುಷ್ಯರು ತಾವು ಬದುಕಲು ಕೇವಲ ನಿಯಮಗಳನ್ನಷ್ಟೆ ಮಾಡಿಕೊಂಡಿಲ್ಲ. ಸ್ವಾರ್ಥಕ್ಕಾಗಿ ನಿರ್ಬಂಧಗಳನ್ನು ಸಹ ರೂಪಿಸಿಕೊಂಡಿದ್ದಾರೆ. ಈ ನಿರ್ಬಂಧಗಳ ಫಲವಾಗಿಯೇ ತಾರತಮ್ಯಗಳುಂಟಾಗಿ ವಾಸಸ್ಥಾನದ ಜೊತೆಗೆ ಇನ್ನೂ ಹಲವು ಸಂಗತಿಗಳಲ್ಲಿ ದಲಿತರು, ಬಡವರನ್ನು ಶೋಷಣೆಗೆ ಒಳಪಡಿಸುತ್ತಿವೆ. ಈ ತಾರತಮ್ಯಗಳಿಂದ ನಮ್ಮದು, ನಮ್ಮದಲ್ಲ ಎಂಬ ನಿಲುವು ಜನರ ಮನಸ್ಸಿನೊಳಗೆ ತುಂಬಿ ಹೋಗಿದೆ.
ಈ ತರದ ಸಮಸ್ಯೆಗಳು ಇಂದು ನಿನ್ನೆಯದಲ್ಲ ಕಾಲದಿಂದ ಕಾಲಕ್ಕೆ ಬೇರೆ ಬೇರೆ ಸ್ವರೂಪದಲ್ಲಿ ಸೃಷ್ಟಿಯಾಗುತ್ತಲೆ ಇರುತ್ತವೆ. ಇಂತಹ ಸಮಸ್ಯೆಗಳನ್ನು ಮೀರಿ ಸಮಾನ ಸಮಾಜ ನಿರ್ಮಾಣದ ಹಿನ್ನೆಲೆಯಲ್ಲಿ ಎರಡು ಸಂಗತಿಗಳ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಒಂದನೆಯದು ಬ್ರಿಟಿಷರಿಂದ ಸ್ವಾತಂತ್ರ್ಯ ಸಿಗುವುದು, ಮತ್ತೊಂದು ಆಧುನಿಕ ಶಿಕ್ಷಣ ಪದ್ಧತಿ. ಇವೆರಡೂ ಜನರ ಮನಸ್ಥಿತಿಯಲ್ಲಿ ಹಾಗೂ ಸಮಾಜದಲ್ಲಿ ಆಮೂಲಾಗ್ರ ಬದಲಾವಣೆ ತರಬಹುದೆಂಬ ಆಕಾಂಕ್ಷೆ ಇತ್ತು, ಆದರೆ 1947 ಆಗಸ್ಟ್ 15ರ ಘಟನೆಯನ್ನು ಸ್ವಾತಂತ್ರ್ಯ ದೊರಕಿದ ದಿನ ಎಂಬುದಕ್ಕಿಂತ ಬ್ರಿಟಿಷ್‌ರಿಂದ ಭಾರತದ ಉಳ್ಳವರಿಗೆ ಅಧಿಕಾರ ಹಸ್ತಾಂತರವಾದ ದಿನ ಎಂದು ಹೇಳಬಹುದಾಗಿದೆ, ಇದರಿಂದ ಜನ ಸಾಮಾನ್ಯರ ನಿರೀಕ್ಷೆಗಳೆಲ್ಲ ಹುಸಿಯಾಗಿ ಬಡವರು ಬಡವರಾಗಿಯೇ ಉಳಿದು ಹೋದರು. ಜಾತೀಯತೆ ಮತ್ತಷ್ಟು ಹೆಚ್ಚಿತು. ಇನ್ನೂ ಮುಂತಾದ ಸಮಸ್ಯೆಗಳು ಹೊಸ ಸ್ವರೂಪದಲ್ಲಿ ಹುಟ್ಟಿಕೊಂಡವು. ಶಿಕ್ಷಣವು ಸಹ ಜನರ ಮನಸ್ಥಿತಿಯಲ್ಲಿ ಯಾವುದೇ ಬದಲಾವಣೆ ತರುವಲ್ಲಿ ಬಹುತೇಕ ವಿಫಲವಾಗಿದೆ. ಇವುಗಳೆಲ್ಲದರ ನಡುವೆ ಉಂಟಾದ ತಾರತಮ್ಯಗಳು ಸಮಾಜದಲ್ಲಿ ಹಲವು ಬಿಕ್ಕಟ್ಟುಗಳ ಸೃಷ್ಟಿಗೆ ಕಾರಣವಾಗಿದ್ದು ಪರಿಹಾರವೇ ಒಂದು ಜಿಜ್ಞಾಸೆಯಾಗಿ ಉಳಿದು ಬಿಟ್ಟಿದೆ.
- ಹರೀಶ್ ಆರ್. ಚನ್ನಗಿರಿ.
ಸಹ ಶಿಕ್ಷಕರು , ಹಾರೊಗುಪ್ಪ,
ರಾಣೆಬೆನ್ನೂರು, ಹಾವೇರಿ.