ರಿಲಾಯನ್ಸ್ ಕಮ್ಯೂನಿಕೇಷನ್ಸ್,ಏರ್‌ಸೆಲ್ ವಿಲೀನ
ಹೊಸದಿಲ್ಲಿ,ಸೆ.14: ಭಾರತದ ದೂರಸಂಪರ್ಕ ಕ್ಷೇತ್ರದಲ್ಲಿನ ಅತ್ಯಂತ ದೊಡ್ಡ ವಿಲೀನ ಪ್ರಕ್ರಿಯೆ ಬುಧವಾರ ಪೂರ್ಣಗೊಂಡಿದ್ದು,ರಿಲಾಯನ್ಸ್ ಕಮ್ಯುನಿಕೇಷನ್ಸ್ ಮತ್ತು ಏರ್‌ಸೆಲ್ ತಮ್ಮ ವಿಲೀನವನ್ನು ಪ್ರಕಟಿಸಿವೆ,ತನ್ಮೂಲಕ 65,000 ಕೋ.ರೂ.ವೌಲ್ಯದ ಆಸ್ತಿಗಳನ್ನು ಹೊಂದಿರುವ ಬೃಹತ್ ಕಂಪನಿ ಸೃಷ್ಟಿಯಾಗಿದೆ.
ವಿಲೀನದಿಂದಾಗಿ ಅಸ್ತಿತ್ವಕ್ಕೆ ಬಂದಿರುವ ಸಂಸ್ಥೆಯಲ್ಲಿ ರಿಲಾಯನ್ಸ್ ಮತ್ತು ಮ್ಯಾಕ್ಸಿಸ್ ಕಮ್ಯುನಿಕೇಷನ್ಸ್ ಬೆರ್ಹಾಡ್ ತಲಾ ಶೇ.50ರಷ್ಟು ಪಾಲು ಬಂಡವಾಳ ಹೊಂದಿದ್ದು, ಮಂಡಳಿ ಮತ್ತು ಸಮಿತಿಗಳಲ್ಲಿ ಸಮಾನ ಪ್ರಾತಿನಿಧ್ಯ ಹೊಂದಿರಲಿವೆ.
ಈ ವಿಲೀನ ಪ್ರತಿಕ್ರಿಯೆಯಿಂದಾಗಿ ರಿಲಾಯನ್ಸ್‌ನ ಸಾಲದ ಹೊರೆ 20,000 ಕೋ.ರೂ.ಗಳಷ್ಟು ಮತ್ತು ಏರಸೆಲ್‌ನ ಸಾಲದ ಹೊರೆ 40,000 ಕೋ.ರೂ.ಗಳಷ್ಟು ತಗ್ಗಲಿವೆ.
ವಿಲೀನವು ಬಳಕೆದಾರರ ಸಂಖ್ಯೆ ಮತ್ತು ಆದಾಯದ ದೃಷ್ಟಿಯಿಂದ ದೇಶದ ನಾಲ್ಕನೇ ಅತ್ಯಂತ ದೊಡ್ಡ ದೂರಸಂಪರ್ಕ ಕಂಪನಿಯ ಹುಟ್ಟಿಗೆ ಕಾರಣವಾಗಿದೆ. ಜೊತೆಗೆ ಅತ್ಯಂತ ಹೆಚ್ಚಿನ ಸ್ಪೆಕ್ಟ್ರಂ ಅನ್ನು ತನ್ನ ಒಡೆತನದಲ್ಲಿ ಹೊಂದಿರುವ ಎರಡನೇ ಕಂಪನಿಯಾಗಲಿದೆ.
ನೂತನ ಕಂಪನಿಯ ಒಟ್ಟೂ ಆಸ್ತಿಗಳ ವೌಲ್ಯ 65,000 ಕೋ.ರೂ.ಗಳಾಗಿದ್ದು, 35,000 ಕೋ.ರೂ.ಗಳ ನಿವ್ವಳ ವೌಲ್ಯವನ್ನು ಹೊಂದಿದೆ.