×
Ad

ವಿಮಾನದಲ್ಲಿ ಹುಟ್ಟಿದ ಈ ಮಗುವಿಗೆ ಜೀವಮಾನಪೂರ್ತಿ ಉಚಿತ ಪ್ರಯಾಣಾವಕಾಶ

Update: 2016-09-15 15:30 IST

ಟ್ರಿಪೊಲಿ,ಸೆ.15 : ನವಜಾತ ಶಿಶುಗಳಿಗೆ ಬಣ್ಣ ಬಣ್ಣದ ಅಂಗಿಗಳು ಹಾಗೂ ಆಟಿಕೆಗಳನ್ನು ಉಡುಗೊರೆಯಾಗಿ ನೀಡುವುದು ಸಾಮಾನ್ಯ. ಆದರೆ ಇಲ್ಲೊಂದು ನವಜಾತ ಶಿಶುವಿಗೆ ಅಪರೂಪದ ಉಡುಗೊರೆಯೊಂದು ದೊರೆತಿದೆ. ಅದೇನಂತೀರಾ ? ಜೀವಮಾನಪೂರ್ತಿ ಉಚಿತ ವಿಮಾನಯಾನ ಪ್ರಯಾಣದ ಸುವರ್ಣಾವಕಾಶ.ಕಾರಣವೇನೆಂದು ಬಲ್ಲಿರಾ ?

ಈ ಅದೃಷ್ಟವಂತ ಮಗು ಹುಟ್ಟಿದ್ದು ಆಗಸದಲ್ಲಿ.

ಇತ್ತೀಚೆಗೆ ಲಿಬಿಯಾ ರಾಜಧಾನಿ ಟ್ರಿಪೊಲಿಯಿಂದ ನೈಗರ್ ರಾಜಧಾನಿ ನಿಯಾಮಿಗೆ ಬುರಖ್ ಏರ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬಳಿಗೆ ವಿಮಾನ ಹಾರಾಡುತ್ತಿರುವಾಗಲೇ ಹೆರಿಗೆ ನೋವು ಕಾಣಿಸಿಕೊಂಡಿದ್ದು ವಿಮಾನದ ಪರಿಚಾರಿಕೆಯರು ಮಹಿಳೆಯ ಸಹಾಯಕ್ಕೆ ನಿಂತು ಆಕೆ ಸುರಕ್ಷಿತವಾಗಿ ಪ್ರಸವಿಸುವಂತೆ ನೋಡಿಕೊಂಡರರು. ಆ ವಿಮಾನದ ಕ್ಯಾಪ್ಟನ್ ಹೆಸರಾದ ಅಬ್ದುಲ್ ಬಾಸ್ಸೆಟ್ ಎಂಬ ಹೆಸರನ್ನೇ ಈ ಮಗುವಿಗೂ ಇಡಲಾಯಿತು.

ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡಲಾದ ವೀಡಿಯೋ ಒಂದರಲ್ಲಿ ವಿಮಾನದಲ್ಲಿದ್ದವರೆಲ್ಲಾ ಮಗುವಿನ ಸುತ್ತ ನಿಂತಿರುವುದನ್ನು ಕಾಣಿಸಲಾಗಿತ್ತು. ಈ ಘಟನೆ ನಡೆದ ಸ್ವಲ್ಪ ಹೊತ್ತಿನಲ್ಲೇ ಬುರಖ್ ಏರ್ ತನ್ನ ಫೇಸ್ ಬುಕ್ ಪಟದಲ್ಲಿ ಆ ಮಗುವಿಗೆ ಜೀವಮಾನಪೂರ್ತಿ ಉಚಿತ ವಿಮಾನಯಾನ ಟಿಕೆಟ್ ಒದಗಿಸುವುದಾಗಿ ಹೇಳಿತು.

ಟ್ರಿಪೊಲಿ ಮೂಲದ ಬುರಖ್ ಏರ್,ಟರ್ಕಿ, ಟುನಿಷಿಯ ಹಾಗೂ ಲಿಬಿಯಾ ಸೇರಿದಂತೆ ಕೆಲವೇ ಕೆಲವು ದೇಶಗಳಿಗೆ ವಿಮಾನಯಾನ ಸೇವೆ ಒದಗಿಸುತ್ತಿದ್ದುಈಜಿಪ್ಟ್, ಮೊರೊಕ್ಕೋ, ಸಿರಿಯಾ, ಬಾಸ್ನಿಯಾ ಹಾಗೂ ಹರ್ಝೆಗೋವಿನಾಗೆ ಅದರ ಸೇವೆಯನ್ನು ಲಿಬಿಯಾದಲ್ಲಿನ ಆಂತರಿಕ ಯುದ್ಧದ ಸಮಯದಲ್ಲಿ 2011 ರಲ್ಲಿ ರದ್ದುಗೊಳಿಸಲಾಗಿತ್ತು.

ವಿಮಾನ ಹಾರಾಟ ಸಂದರ್ಭದಲ್ಲಿ ಜನಿಸಿದವರಲ್ಲಿ ಬೇಬಿ ಅಬ್ದುಲ್ ಮೊದಲಿಗನೇನಲ್ಲ. ಆಗಸ್ಟ್ 14 ರಂದು ಸೆಬು ಪೆಸಿಫಿಕ್ ವಿಮಾನವೊಂದು ದುಬೈನಿಂದ ಮನಿಲಾಗೆ ಹೋಗುತ್ತಿದ್ದಾಗ ಪ್ರಯಾಣಿಕ ಮಹಿಳೆಯೊಬ್ಬಳು ಹೇವನ್ ಎಂಬ ಗಂಡು ಮಗುವಿಗೆ ಜನ್ಮ ನೀಡಿದ್ದಳು.

ಈ ವರ್ಷದ ಜೂನ್ ತಿಂಗಳಲ್ಲಿ ಮಹಿಳೆಯೊಬ್ಬಳು ಸೌದಿ ಅರೇಬಿಯನ್ ಏರ್ ಲೈನ್ಸ್ ವಿಮಾನದಲ್ಲಿ ಪ್ರಸವಿಸಿದ ನಂತರ ವಿಮಾನವನ್ನು ಹೀತ್ರೋ ನಿಲ್ದಾಣದಲ್ಲಿ ಇಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News