×
Ad

ಡುಟರ್ಟ್ ಆದೇಶದಂತೆ ಅಸಂಖ್ಯಾತ ಜನರ ಹತ್ಯೆ :ಫಿಲಿಪ್ಪೀನ್ಸ್ ಸೆನೆಟ್‌ಗೆ ಹೇಳಿಕೆ ನೀಡಿದ ‘‘ಹಂತಕ ಪಡೆ’’ಯ ಮಾಜಿ ಸದಸ್ಯ

Update: 2016-09-15 20:09 IST

ಮನಿಲಾ, ಸೆ. 15: ಫಿಲಿಪ್ಪೀನ್ಸ್ ಅಧ್ಯಕ್ಷ ರಾಡ್ರಿಗೊ ಡುಟರ್ಟ್ ವಿರುದ್ಧ ‘‘ಹಂತಕ ಪಡೆ’’ಯ ಮಾಜಿ ಸದಸ್ಯನೊಬ್ಬ ಗುರುವಾರ ಸ್ಫೋಟಕ ಆರೋಪಗಳನ್ನು ಮಾಡಿದ್ದಾನೆ.

ಡುಟರ್ಟ್ ಕಾನೂನು ಇಲಾಖೆಯ ಉದ್ಯೋಗಿಯೊಬ್ಬರನ್ನು ಗುಂಡು ಹಾರಿಸಿ ಕೊಂದಿದ್ದಾರೆ ಹಾಗೂ ತನ್ನ ಎದುರಾಳಿಗಳ ಹತ್ಯೆಗೆ ಆದೇಶ ನೀಡಿದ್ದಾರೆ ಎಂದು ಎಡ್ಗರ್ ಮಟೊಬಟೊ ಸಂಸತ್ತಿನಲ್ಲಿ ನಡೆದ ಸೆನೆಟ್ ವಿಚಾರಣೆಯೊಂದರ ವೇಳೆ ಹೇಳಿಕೆ ನೀಡಿದ್ದಾನೆ.

ತಾನು ಹಾಗೂ ಪೊಲೀಸರು ಮತ್ತು ಮಾಜಿ ಕಮ್ಯುನಿಸ್ಟ್ ಬಂಡುಕೋರರ ಗುಂಪೊಂದು ಡುಟರ್ಟ್‌ರ ಆದೇಶದಂತೆ 25 ವರ್ಷಗಳ ಅವಧಿಯಲ್ಲಿ ಸುಮಾರು 1,000 ಮಂದಿಯನ್ನು ಕೊಂದಿರುವುದಾಗಿ ಸ್ವಯಂಘೋಷಿತ ಹಂತಕ ಹೇಳಿದ್ದಾನೆ. ಅವರ ಪೈಕಿ ಓರ್ವನನ್ನು ಮೊಸಳೆಯ ಬಾಯಿಗೆ ಜೀವಂತ ಹಾಕಲಾಯಿತು ಎಂದಿದ್ದಾನೆ.

ಈ ಹಂತಕ ಪಡೆಯು ಡುಟರ್ಟ್‌ರ ತವರು ನಗರ ಡವಾವೊದಲ್ಲಿ ಕಾರ್ಯಾಚರಿಸುತ್ತಿತ್ತು. ಶಂಕಿತ ಅಪರಾಧಿಗಳು ಮತ್ತು ಮಾದಕ ವಸ್ತು ವ್ಯಾಪಾರಿಗಳನ್ನು ಕೊಲ್ಲುವಂತೆ ಹಾಗೂ ಡವಾವೊ ನಗರದಲ್ಲಿದ್ದ ಮಸೀದಿಯೊಂದರ ಮೇಲೆ ಬಾಂಬ್ ಹಾಕುವಂತೆ ಆಗಿನ ಡವಾವೊ ಮೇಯರ್ ಆಗಿದ್ದ ಡುಟರ್ಟ್ ಆದೇಶ ನೀಡಿದ್ದರು ಎಂದು ಆತ ಹೇಳಿದ್ದಾನೆ.

ಇತರರ ಪೈಕಿ ಹೆಚ್ಚಿನವರನ್ನು ಉಸಿರುಗಟ್ಟಿಸಿ, ಸುಟ್ಟು ಹಾಗೂ ದೇಹವನ್ನು ನಾಲ್ಕು ಭಾಗಗಳಾಗಿ ಮಾಡಿ ಕೊಂದು, ಹಂತಕ ಪಡೆಯ ಸದಸ್ಯನಾಗಿರುವ ಪೊಲೀಸ್ ಅಧಿಕಾರಿಯೊಬ್ಬರ ಒಡೆತನದ ಕೋರೆಯೊಂದರಲ್ಲಿ ಹೂತು ಹಾಕಲಾಗಿದೆ. ಇತರರನ್ನು ಸಮುದ್ರಕ್ಕೆ ಬಿಸಾಡಲಾಗಿತ್ತು ಹಾಗೂ ಅವರು ಮೀನುಗಳಿಗೆ ಆಹಾರವಾಗಿದ್ದಾರೆ.

 ಡುಟರ್ಟ್‌ರ ಅಪರಾಧ ನಿಗ್ರಹ ಕಾರ್ಯಾಚರಣೆಯ ವೇಳೆ ನಡೆದ ನ್ಯಾಯಾಂಗೇತರ ಹತ್ಯೆಗಳ ಬಗ್ಗೆ ತನಿಖೆ ನಡೆಸುತ್ತಿರುವ ಸೆನೆಟ್‌ನ ಸಮ್ಮುಖದಲ್ಲಿ 57 ವರ್ಷದ ಮಟೊಬಟೊ ಈ ಹೇಳಿಕೆ ನೀಡಿದ್ದಾನೆ.

ಡುಟರ್ಟ್ ಅಧಿಕಾರಕ್ಕೆ ಬಂದ ಮೊದಲ 72 ದಿನಗಳ ಅವಧಿಯಲ್ಲಿ ನಡೆದ ಅಪರಾಧ ನಿಗ್ರಹ ಕಾರ್ಯಾಚರಣೆಯಲ್ಲಿ 3,140 ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಅಧ್ಯಕ್ಷ ರಾಡ್ರಿಗೊ ಡುಟರ್ಟ್‌ರ ಆದೇಶದಂತೆ ತಾನು 50 ಮಂದಿಯನ್ನು ಅಪಹರಿಸಿ ಹತ್ಯೆಗೈದಿರುವುದಾಗಿ ಆತ ಹೇಳಿದ್ದಾನೆ.

ವಿಚಾರಣೆಯ ವೇಳೆ ಹೇಳಿಕೆ ನೀಡಿದ ಆಗಿನ ಮಾನವಹಕ್ಕುಗಳ ಆಯೋಗದ ಮುಖ್ಯಸ್ಥೆ ಹಾಗೂ ಸೆನೆಟರ್ ಲೈಲಾ ಡಿ ಲಿಮ, ಮಟೊಬಟೊ 2009ರಲ್ಲಿ ತನಿಖಾ ಸಂಸ್ಥೆಗೆ ಶರಣಾಗಿದ್ದನು ಹಾಗೂ ಇತ್ತೀಚಿನವರೆಗೂ ಸಾಕ್ಷಿ ರಕ್ಷಣಾ ಕಾರ್ಯಕ್ರಮದ ಸುಪರ್ದಿಯಲ್ಲಿದ್ದನು ಎಂದು ಹೇಳಿದರು.

‘‘ಚಾರ್ಲೀ ಮೈಕ್‌ರ ಆದೇಶವಿಲ್ಲದೆ ನಾನು ಯಾರನ್ನೂ ಕೊಂದಿಲ್ಲ’’ ಎಂದು ಆತ ಹೇಳಿದನು. ಹಂತಕ ಪಡೆಯು ಡುಟರ್ಟ್‌ರನ್ನು ಗುಪ್ತ ಭಾಷೆಯಲ್ಲಿ ಹೀಗೆ ಕರೆಯುತ್ತಿತ್ತು ಎಂದು ಆತ ಸೆನೆಟ್‌ಗೆ ತಿಳಿಸಿದನು.

1988 ಮತ್ತು 2013ರ ನಡುವಿನ ಅವಧಿಯಲ್ಲಿ ಹಂತಕ ಪಡೆಯು ಮುಖ್ಯವಾಗಿ ಶಂಕಿತ ಪಾತಕಿಗಳು ಮತ್ತು ಡುಟರ್ಟ್ ಕುಟುಂಬದ ವೈರಿಗಳನ್ನು ಕೊಂದಿದೆ ಎಂದನು.

ಹುಚ್ಚನ ಹೇಳಿಕೆಗಳು: ಅಧ್ಯಕ್ಷರ ವಕ್ತಾರ

ಅದೇ ವೇಳೆ, ಅಧ್ಯಕ್ಷ ರಾಡ್ರಿಗೊ ಡುಟರ್ಟ್‌ರ ವಕ್ತಾರ ಮಾರ್ಟಿನ್ ಅಂಡನಾರ್ ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡಿ, ಅಧ್ಯಕ್ಷರ ವಿರುದ್ಧದ ಆರೋಪಗಳನ್ನು ನಿರಾಕರಿಸಿದರು.

‘‘ಅಂಥ ಆದೇಶಗಳನ್ನು ನೀಡುವ ಸಾಮರ್ಥ್ಯವನ್ನು ಅವರು ಹೊಂದಿದ್ದರು ಎಂದು ನನಗೆ ಅನಿಸುವುದಿಲ್ಲ’’ ಎಂದರು.

ಪ್ರತ್ಯೇಕ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ ಡವಾವೊ ನಗರದ ಉಪ ಮೇಯರ್ ಪೌಲೊ ಡುಟರ್ಟ್, ಅಧ್ಯಕ್ಷರ ವಿರುದ್ಧದ ಆರೋಪಗಳನ್ನು ನಿರಾಕರಿಸಿದರು ಹಾಗೂ ಆರೋಪ ಮಾಡಿದಾತನನ್ನು ‘‘ಹುಚ್ಚ’’ ಎಂದು ಕರೆದರು.

‘‘ಡಿ ಲಿಮ ಮತ್ತು ಈ ಮಟೊಬಟೊ ಸಾರ್ವಜನಿಕವಾಗಿ ಮಾಡುತ್ತಿರುವುದು ಕೇವಲ ಆರೋಪಗಳು ಹಾಗೂ ಅವರ ಬಳಿ ಅದಕ್ಕೆ ಪುರಾವೆಯಿಲ್ಲ. ಅವುಗಳು ಕೇವಲ ವದಂತಿಗಳು’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News