ಬಲಪ್ರಯೋಗದಿಂದ ಹಿಂದೆ ಸರಿಯುವಂತೆ ಇರಾನ್‌ಗೆ ಸೌದಿ ಎಚ್ಚರಿಕೆ
ದುಬೈ, ಸೆ. 15: ಅರಬ್ಬರ ವಿರುದ್ಧ ಹೊಂದಿರುವ ನಕಾರಾತ್ಮಕ ಧೋರಣೆಯನ್ನು ಕೊನೆಗೊಳಿಸುವಂತೆ ಸೌದಿ ಅರೇಬಿಯದ ಹಿರಿಯ ನಾಯಕರೊಬ್ಬರು ಇರಾನನ್ನು ಒತ್ತಾಯಿಸಿದ್ದಾರೆ ಹಾಗೂ ಸೌದಿ ವಿರುದ್ಧ ಬಲಪ್ರಯೋಗ ನಡೆಸುವುದರ ವಿರುದ್ಧ ಎಚ್ಚರಿಕೆ ನೀಡಿದ್ದಾರೆ.
ಹಜ್ ಯಾತ್ರೆಯನ್ನು ಸೌದಿ ಅರೇಬಿಯ ನಿರ್ವಹಿಸುವ ರೀತಿಯನ್ನು ಟೀಕಿಸಿರುವ ಇರಾನ್‌ಗೆ ಮಕ್ಕಾ ಪ್ರಾಂತದ ಗವರ್ನರ್ ರಾಜಕುಮಾರ ಖಾಲಿದ್ ಅಲ್-ಫೈಸಲ್ ಪ್ರತಿಕ್ರಿಯಿಸುತ್ತಿದ್ದರು.
ಈ ವರ್ಷ ಯಾತ್ರೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ರೀತಿಯು ‘‘ಸೌದಿ ಅರೇಬಿಯದ ವಿರುದ್ಧ ಹೊರಿಸಲಾದ ಎಲ್ಲ ಸುಳ್ಳುಗಳು ಮತ್ತು ಆಪಾದನೆಗಳಿಗೆ ಉತ್ತರವಾಗಿದೆ’’ ಎಂದು ಅವರು ನುಡಿದರು.
ಸೌದಿ ಅರೇಬಿಯದ ಅಧಿಕೃತ ವಾರ್ತಾ ಸಂಸ್ಥೆ ಸೌದಿ ಪ್ರೆಸ್ ಏಜನ್ಸಿ (ಎಸ್‌ಪಿಎ) ಖಾಲಿದ್ ಅಲ್-ಫೈಸಲ್‌ರ ಹೇಳಿಕೆಯನ್ನು ಪ್ರಕಟಿಸಿದೆ.
ಒಂದು ವರ್ಷದ ಹಿಂದಿನ ಹಜ್ ಯಾತ್ರೆಯಲ್ಲಿ ನಡೆದ ನೂಕುನುಗ್ಗಲಿನಲ್ಲಿ 2,000ಕ್ಕೂ ಅಧಿಕ ಮಂದಿ ಮೃತಪಟ್ಟ ಬಳಿಕ ಇರಾನ್ ಮತ್ತು ಸೌದಿ ಅರೇಬಿಯಗಳ ನಡುವೆ ನಡೆಯುತ್ತಿರುವ ಮಾತಿನ ಸಮರದ ಮುಂದುವರಿದ ಭಾಗ ಇದಾಗಿದೆ. ಮೃತಪಟ್ಟವರಲ್ಲಿ ಹೆಚ್ಚಿನವರು ಇರಾನಿಯನ್ನರು.
‘‘ಅವರಿಗೆ ಮಾರ್ಗದರ್ಶನ ನೀಡಿ ಹಾಗೂ ಇರಾಕ್, ಯಮನ್ ಮತ್ತು ಜಗತ್ತಿನಾದ್ಯಂತ ಇರುವ ಸಹ ಮುಸ್ಲಿಮರ ಬಗ್ಗೆ ಅವರು ಆಕ್ರಮಣಶೀಲತೆ ಮತ್ತು ನಕಾರಾತ್ಮಕ ಧೋರಣೆ ತಳೆಯದಂತೆ ಅವರನ್ನು ತಡೆಗಟ್ಟಿ ಎಂಬುದಾಗಿ ನಾನು ದೇವರಲ್ಲಿ ಕೇಳಿಕೊಳ್ಳುತ್ತೇನೆ’’ ಎಂದು ಪತ್ರಕರ್ತರೊಂದಿಗೆ ಮಾತನಾಡಿದ ರಾಜಕುಮಾರ ಖಾಲಿದ್ ಹೇಳಿದರು ಎಂದು ಎಸ್‌ಪಿಎ ವರದಿ ಮಾಡಿದೆ.
‘‘ಆದರೆ, ನಮ್ಮ ವಿರುದ್ಧ ದಾಳಿ ನಡೆಸಲು ಅವರು ಸೇನೆಯನ್ನು ಸಿದ್ಧಗೊಳಿಸುತ್ತಿದ್ದರೆ, ನಮ್ಮ ವಿರುದ್ಧ ಯುದ್ಧ ಮಾಡುವ ಯಾರಿಗೂ ನಾವು ಮಣಿಯುವುದಿಲ್ಲ’’ ಎಂದರು.