ಇಟಲಿ ಪ್ರವೇಶಿಸಲು ಕಾದಿರುವ 2.35 ಲಕ್ಷ ಲಿಬಿಯ ವಲಸಿಗರು: ವಿಶ್ವಸಂಸ್ಥೆ

Update: 2016-09-15 18:22 GMT

ರೋಮ್, ಸೆ. 15: ಅವಕಾಶ ಸಿಕ್ಕಿದ ಕೂಡಲೇ ಅಪಾಯಕಾರಿ ಮೆಡಿಟರೇನಿಯನ್ ಸಮುದ್ರವನ್ನು ದಾಟಿ ಇಟಲಿ ಪ್ರವೇಶಿಸಲು ಲಿಬಿಯದ ಸುಮಾರು 2.35 ಲಕ್ಷ ವಲಸಿಗರು ಕಾದು ಕುಳಿತಿದ್ದಾರೆ ಎಂದು ವಿಶ್ವಸಂಸ್ಥೆಯ ಪ್ರತಿನಿಧಿ ಮಾರ್ಟಿನ್ ಕೋಬ್ಲರ್ ಹೇಳಿದ್ದಾರೆ.

‘‘ಇಟಲಿ ಪ್ರವೇಶಿಸಲು 2.35 ಲಕ್ಷ ವಲಸಿಗರು ಕಾದು ಕುಳಿತಿರುವುದು ನಮಗೆ ಗೊತ್ತಿದೆ. ಅವರು ಮೆಡಿಟರೇನಿಯನ್ ಸಮುದ್ರವನ್ನು ದಾಟಲು ಉತ್ತಮ ಸಂದರ್ಭಕ್ಕಾಗಿ ಕಾದು ಕುಳಿತಿದ್ದಾರೆ. ತಮ್ಮ ಗುರಿಯನ್ನು ಅವರು ಪೂರೈಸುತ್ತಾರೆ’’ ಎಂದು ಇಟಲಿಯ ದೈನಿಕ ‘ಲಾ ಸ್ಟಾಂಪ’ಕ್ಕೆ ನೀಡಿದ ಸಂದರ್ಶನದಲ್ಲಿ ಕೋಬ್ಲರ್ ಹೇಳಿದ್ದಾರೆ.

‘‘ಭದ್ರತೆಯನ್ನು ಬಿಗಿಗೊಳಿಸುವುದು ಈ ಕ್ಷಣದ ಅತ್ಯಂತ ಪ್ರಮುಖ ಕೆಲಸವಾಗಿದೆ. ನಮ್ಮಲ್ಲಿ ಬಲಿಷ್ಠ ಹಾಗೂ ಏಕೀಕೃತ ಸೇನೆಯಿದ್ದರೆ ಭಯೋತ್ಪಾದನೆ ಮತ್ತು ಮಾನವಸಾಗಣೆಯ ಅಪಾಯಗಳು ಇರುವುದಿಲ್ಲ’’ ಎಂದರು. ಲಿಬಿಯದ ವಿಶ್ವಸಂಸ್ಥೆ ಬೆಂಬಲಿತ, ಟ್ರಿಪೋಲಿಯಲ್ಲಿ ನೆಲೆಸಿರುವ ರಾಷ್ಟ್ರೀಯ ಒಮ್ಮತದ ಸರಕಾರ ದೇಶದ ಮೇಲೆ ತನ್ನ ಪ್ರಾಬಲ್ಯವನ್ನು ಸ್ಥಾಪಿಸಲು ಪರದಾಡುತ್ತಿದೆ. ಅದು ದೇಶದ ಪೂರ್ವ ಭಾಗದಲ್ಲಿ ನೆಲೆಸಿರುವ ಸಮಾನಾಂತರ ಸರಕಾರವೊಂದರಿಂದ ತೀವ್ರ ಪ್ರತಿರೋಧ ಎದುರಿಸುತ್ತಿದೆ.

ಈ ವರ್ಷದ ಆರಂಭದಿಂದ ಸುಮಾರು 1,28,400 ವಲಸಿಗರು ಮೆಡಿಟರೇನಿಯನ್ ಸಮುದ್ರ ಮೂಲಕ ಇಟಲಿಗೆ ಬಂದಿದ್ದಾರೆ ಎಂದು ಇಟಲಿಯ ಆಂತರಿಕ ಸಚಿವಾಲಯ ತಿಳಿಸಿದೆ. ಇದು 2015ರಲ್ಲಿ ಇದೇ ಅವಧಿಯಲ್ಲಿ ಬಂದ ವಲಸಿಗರಿಗಿಂತ 5 ಶೇ.ಹೆಚ್ಚಾಗಿದೆ.

2011ರಲ್ಲಿ ನಡೆದ ಬಂಡಾಯದಲ್ಲಿ ದೇಶದ ನಾಯಕ ಮುಅಮ್ಮರ್ ಗಡ್ಡಾಫಿ ಸತ್ತ ಬಳಿಕ ದೇಶ ಅರಾಜಕತೆಗೆ ಗುರಿಯಾಗಿದೆ. ದೇಶದ ತೈಲ ಸಂಪತ್ತಿನ ನಿಯಂತ್ರಣಕ್ಕಾಗಿ ನಡೆಯುತ್ತಿರುವ ಹೋರಾಟವು ದೇಶವನ್ನು ಆಂತರಿಕ ಯುದ್ಧದತ್ತ ತಳ್ಳುತ್ತಿದೆ ಎಂಬ ಭೀತಿ ಎಲ್ಲೆಡೆ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News