ಪೆಲೆಟ್ ಗನ್ ಹಿಡಿದಿದ್ದ 13 ವರ್ಷದ ಕರಿಯ ಬಾಲಕನನ್ನು ಕೊಂದ ಅಮೇರಿಕದ ಪೊಲೀಸರು
ಒಹ್ಯೋ, ಸೆ.16: ಕಳ್ಳತನ ನಡೆಸಿದ್ದಾರೆಂದು ಶಂಕಿಸಲಾದ ವ್ಯಕ್ತಿಗಳನ್ನು ಬೆಂಬತ್ತುವ ಸಂದರ್ಭದಲ್ಲಿ ಅಮೇರಿಕಾದ ಪೊಲೀಸ್ ಅಧಿಕಾರಿಯೊಬ್ಬರು 13 ವರ್ಷದ ಕರಿಯ ಬಾಲಕನನ್ನು ಗುಂಡಿಟ್ಟು ಸಾಯಿಸಿದ ಘಟನೆ ಒಹ್ಯೋ ರಾಜ್ಯದ ಕೊಲಂಬಸ್ ನಗರದಲ್ಲಿ ನಡೆದಿದೆ. ಬಾಲಕ ತನ್ನ ಬಳಿಯಿದ್ದ ಪೆಲೆಟ್ ಗನ್ ಹೊರತೆಗೆದಾಗ ಆತನಿಗೆ ಗುಂಡಿಕ್ಕಲಾಯಿತೆಂದು ತಿಳಿದು ಬಂದಿದೆ.
ಟೈರ್ ಕಿಂಗ್ ಎಂಬ ಕರಿಯ ಬಾಲಕನ ಹತ್ಯೆ ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಫ್ರಿಕನ್ ಅಮೇರಿಕನ್ನರ ಮೇಲೆ ಪೊಲೀಸರಿಂದ ಇತ್ತೀಚೆಗೆ ನಡೆದಿರುವ ಹಲವಾರು ಗುಂಡಿನ ದಾಳಿ ಪ್ರಕರಣಗಳಿಗೆ ಇದರಿಂದ ಇನ್ನೊಂದು ಘಟನೆ ಸೇರ್ಪಡೆಯಾಗಿದೆ.
ಪೊಲೀಸರ ಪ್ರಕಾರ ಬಾಲಕ ತನ್ನ ಬಳಿಯಿದ್ದ ಬಿಬಿ ಗನ್ ಹೊರತೆಗೆದಾಗ ಆತನತ್ತ ಹಲವಾರು ಗುಂಡುಗಳನ್ನು ಹಾರಿಸಲಾಯಿತು. ಬಾಲಕನನ್ನು ನಂತರ ನೇಶನ್ ವೈಡ್ ಮಕ್ಕಳ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಆತ ಮೃತಪಟ್ಟಿದ್ದಾನೆಂದು ವೈದ್ಯರು ಘೋಷಿಸಿದ್ದಾರೆ. ಕಿಂಗ್ ಬಳಿಯಿದ್ದ ಏರ್ ಗನ್ ಕಡಿಮೆ ಶಕ್ತಿಯುಳ್ಳದ್ದಾಗಿದ್ದು ಸಣ್ಣ ಉರುಟಾದ ಪೆಲೆಟ್ ಗಳನ್ನು ಅದು ಶೂಟ್ ಮಾಡುವ ಸಾಮರ್ಥ್ಯ ಹೊಂದಿದೆ.
ಪೊಲೀಸರು ಈ ಪ್ರಕರಣದ ಸಮಗ್ರ ತನಿಖೆ ನಡೆಸುವುದಾಗಿ ಹೇಳಿಕೊಂಡಿದ್ದರೂ ಬಾಲಕನ ಕುಟುಂಬ ಸ್ವತಂತ್ರ ತನಿಖೆಗೆ ಆಗ್ರಹಿಸಿದೆಯಲ್ಲದೆ ಕೆಲ ಸಾಕ್ಷಿಗಳ ಹೇಳಿಕೆಗಳು ಪೊಲೀಸ್ ಹೇಳಿಕೆಗೆ ತದ್ವಿರುದ್ಧವಾಗಿವೆ ಎಂದು ಹೇಳಿದೆ.
ಬಾಲಕನ ಕುಟುಂಬದ ವಕೀಲರ ಪ್ರಕಾರ ಎಂಟನೆ ಗ್ರೇಡ್ ನಲ್ಲಿ ಕಲಿಯುತ್ತಿದ್ದ ಆತನಿಗೆ ಯಾವುದೇ ಕ್ರಿಮಿನಲ್ ಇತಿಹಾಸವಿರಲಿಲ್ಲ ಹಾಗೂ ಆತ ಒಳ್ಳೆಯ ಫುಟ್ಬಾಲ್ ಆಟಗಾರನಾಗಿದ್ದ. ಅಲ್ಲದೆ, ಶಾಲೆಯಲ್ಲಿ ಯಂಗ್ ಸ್ಕಾಲರ್ಸ್ ಪ್ರೋಗ್ರಾಂನಲ್ಲೂ ಭಾಗಿಯಾಗಿದ್ದ.
ಪೊಲೀಸ್ ಅಧಿಕಾರಿಗಳು ಬಾಲಕನ ಕೈಯ್ಯಲ್ಲಿದ್ದ ಪಿಸ್ತೂಲನ್ನೇ ಹೋಲುವಂತಹ ಪಿಸ್ತೂಲಿನ ಫೋಟೋ ಒಂದನ್ನು ತೋರಿಸಿ ಇದು ಯಾರನ್ನಾದರೂ ಕೊಲ್ಲಬಹುದಾದಂತಹ ನಿಜವಾದ ಪಿಸ್ತೂಲಿನಂತೆ ಕಾಣುತ್ತದೆ ಎಂದು ಹೇಳಿದರು.
ಬಾಲಕನಿಗೆ ಗುಂಡಿಕ್ಕಿ ಕೊಂದ ಬಿಳಿಯ ಅಧಿಕಾರಿಯನ್ನು ಬ್ರೈಯಾನ್ ಮೇಸನ್ ಎಂದು ಗುರುತಿಸಲಾಗಿದೆ. ಅವರು ಪೊಲೀಸ್ ಇಲಾಖೆಯಲ್ಲಿ 9 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.
ಪೊಲೀಸ್ ದಾಖಲೆಗಳ ಪ್ರಕಾರ ಇದೇ ಅಧಿಕಾರಿ 2014 ರಲ್ಲಿ ವ್ಯಕ್ತಿಯೊಬ್ಬನತ್ತ ಬಂದೂಕು ನೆಟ್ಟಿದ್ದವನನ್ನು ಗುಂಡಿಕ್ಕಿ ಕೊಂದಿದ್ದರು. ಆದರೆ ಈ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿ ತಪ್ಪಿತಸ್ಥರಲ್ಲವೆಂದು ತನಿಖೆಯಿಂದ ತಿಳಿದು ಬಂದಿತ್ತು.
2014 ರಲ್ಲಿ ನಡೆದ ಇನ್ನೊಂದು ಘಟನೆಯಲ್ಲಿ ರಿಕ್ರಿಯೇಶನ್ ಸೆಂಟರ್ ಹೊರಗಡೆ ಪೆಲೆಟ್ ಗನ್ ಜತೆ ಆಟವಾಡುತ್ತಿದ್ದ 12 ವರ್ಷದ ತಾಮಿರ್ ರೈಸ್ ಎಂಬ ಬಾಲಕನನ್ನು ಬಿಳಿಯ ಪೊಲೀಸ್ ಅಧಿಕಾರಿಯೊಬ್ಬರು ಗುಂಡಿಟ್ಟು ಕೊಂದ ಘಟನೆ ನಡೆದಿತ್ತು.