ತನ್ನ ಹೆತ್ತವರ ವಿರುದ್ಧವೇ ನ್ಯಾಯಾಲಯಕ್ಕೆ ಹೋದ ಯುವತಿ!
ಹೆತ್ತವರು ತನ್ನ ಬಾಲ್ಯದ ಮುಜುಗರ ತರುವ ಮತ್ತು ಕೆಲವು ಖಾಸಗಿ ಚಿತ್ರಗಳನ್ನು ತನ್ನ ಒಪ್ಪಿಗೆ ಇಲ್ಲದೇ ಫೇಸ್‌ಬುಕ್‌ನಲ್ಲಿ ಹಾಕಿರುವುದಕ್ಕೆ ಸಿಟ್ಟಾಗಿರುವ 18 ವರ್ಷದ ಆಸ್ಟ್ರಿಯಾದ ಯುವತಿ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾಳೆ.
2009ರಿಂದ ತನ್ನ 500 ಚಿತ್ರಗಳನ್ನು ಸಾಮಾಜಿಕ ಜಾಲ ತಾಣ ಫೇಸ್‌ಬುಕ್‌ನಲ್ಲಿ ಹಾಕುವ ಮೂಲಕ ಹೆತ್ತವರು ತನ್ನ ಜೀವನವನ್ನೇ ಬರ್ಬರವನ್ನಾಗಿಸಿದ್ದಾರೆ. ಈ ಫೋಟೋಗಳನ್ನು ಫೇಸ್‌ಬುಕ್‌ನಲ್ಲಿ ಹೆತ್ತವರ ಸುಮಾರು 700 ಸ್ನೇಹಿತರು ಪರಸ್ಪರರ ನಡುವೆ ಹಂಚಿಕೊಂಡಿದ್ದಾರೆ. ಹಂಚಿಕೊಂಡಿರುವ ಚಿತ್ರಗಳಲ್ಲಿ ಮಗುವಾಗಿದ್ದಾಗ ತನ್ನ ನ್ಯಾಪಿ ಬದಲಾಯಿಸುವುದು ಮತ್ತು ಶೌಚ ಮಾಡಲು ತರಬೇತಿ ಕೊಡುವ ಚಿತ್ರಗಳೂ ಸೇರಿವೆ ಎಂದು ಆಕೆ ದೂರಿನಲ್ಲಿ ಹೇಳಿದ್ದಾರೆ. ಅವರಿಗೆ ನಾಚಿಕೆಯೇ ಇಲ್ಲ ಮತ್ತು ಮಿತಿಯೂ ಇಲ್ಲ. ನಾನು ಶೌಚ ಮಾಡಲು ಕುಳಿತಿರುವ ಚಿತ್ರವೇ ಆಗಿರಲಿ ಅಥವಾ ಮಂಚದ ಮೇಲೆ ಬೆತ್ತಲೆಯಾಗಿ ಮಲಗಿರುವ ಚಿತ್ರವೇ ಆಗಲಿ, ಪ್ರತೀ ಹಂತದಲ್ಲೂ ನನ್ನ ಚಿತ್ರ ತೆಗೆದಿದ್ದಾರೆ ಮತ್ತು ಅದನ್ನು ಸಾರ್ವಜನಿಕರ ಮುಂದೆ ಇಟ್ಟಿದ್ದಾರೆ ಎಂದು ಯುವತಿ ಹೇಳಿರುವುದಾಗಿ ವರದಿಯಾಗಿದೆ.
ಯುವತಿ ಬಹಳಷ್ಟು ಬಾರಿ ಬೇಡಿಕೆ ಮುಂದಿಟ್ಟಿದ್ದರೂ ಹೆತ್ತವರು ಈ ಫೋಟೋಗಳನ್ನು ಡಿಲೀಟ್ ಮಾಡಲು ನಿರಾಕರಿಸಿದ್ದಾರೆ. ಇದರಿಂದಾಗಿ ಅವರ ವಿರುದ್ಧ ನ್ಯಾಯಾಲಯಕ್ಕೆ ಹೋಗಲು ಯುವತಿ ನಿರ್ಧರಿಸಿದ್ದಾಳೆ. ತಾನು ಫೋಟೋಗಳನ್ನು ತೆಗೆದಿರುವ ಕಾರಣ ಅದನ್ನು ಪ್ರಕಟಿಸುವ ಹಕ್ಕು ತನಗಿದೆ ಎಂದು ಯುವತಿಯ ತಂದೆಯ ವಾದವಾಗಿದೆ. ಈ ಫೋಟೋಗಳು ಯುವತಿಯ ಖಾಸಗಿ ಜೀವನದ ಹಕ್ಕನ್ನು ಉಲ್ಲಂಘಿಸಿದೆ ಎನ್ನುವುದು ಸಾಬೀತಾದಲ್ಲಿ ಆಕೆಯ ಹೆತ್ತವರು ಮೊಕದ್ದಮೆಯಲ್ಲಿ ಸೋಲಲಿದ್ದಾರೆ ಎಂದು ಯುವತಿಯ ವಕೀಲ ಮೈಖಲ್ ರಮಿ ಹೇಳಿದ್ದಾರೆ.
ಆಸ್ಟ್ರಿಯದಲ್ಲಿ ಇಂತಹ ಪ್ರಕರಣ ಇದೇ ಮೊದಲು. ವಿದೇಶಗಳಲ್ಲಿ ಇಂತಹ ಪ್ರಕರಣಗಳು ದಾಖಲಾಗಿರುವ ಹಿನ್ನೆಲೆಯಲ್ಲಿ ಯುವತಿಯ ಹೆತ್ತವರು ಮಗಳ ನೋವಿಗೆ ಕಾರಣವಾಗಿರುವುದಕ್ಕೆ ಹಣಕಾಸು ಪರಿಹಾರವನ್ನು ಹಾಗೂ ಆಕೆಯ ನ್ಯಾಯಾಲಯದ ವೆಚ್ಚವನ್ನು ಭರಿಸಬೇಕಾಗಿ ಬರಬಹುದು. ಈ ಪ್ರಕರಣವನ್ನು ನವೆಂಬರಿನಲ್ಲಿ ವಿಚಾರಣೆ ನಡೆಸಲಾಗುವುದು. ಹೆತ್ತವರು ಈ ಮೊಕದ್ದಮೆಯಲ್ಲಿ ಸೋತಲ್ಲಿ ಮಕ್ಕಳ ಒಪ್ಪಿಗೆಯಿಲ್ಲದೆ ಅಸಂಖ್ಯಾತ ಚಿತ್ರಗಳನ್ನು ಸಾಮಾಜಿಕ ತಾಣಗಳಲ್ಲಿ ಹಾಕುವ ಆಸ್ಟ್ರಿಯನ್ ಪೋಷಕರ ಮೇಲೆ ಪರಿಣಾಮ ಬೀರಲಿದೆ.
ಸಾಮಾಜಿಕ ತಾಣಗಳಿಗೆ ಸಂಬಂಧಿಸಿದ ಆಸ್ಟ್ರಿಯದ ಖಾಸಗಿ ಕಾನೂನುಗಳು ಇತರ ದೇಶಗಳಷ್ಟು ಕಠಿಣವಾಗಿಲ್ಲ. ಫ್ರಾನ್ಸ್‌ನಲ್ಲಿ ಮತ್ತೊಬ್ಬ ವ್ಯಕ್ತಿಯ ಫೋಟೋವನ್ನು ಅವರ ಒಪ್ಪಿಗೆಯಿಲ್ಲದೆ ಪ್ರಕಟಿಸಿರುವ ಮತ್ತು ಹಂಚಿರುವ ಅಪರಾಧ ಸಾಬೀತಾದಲ್ಲಿ ಒಂದು ವರ್ಷ ಜೈಲು ಶಿಕ್ಷೆ ಮತ್ತು 45,000 ಯುರೋಗಳ ದಂಡ ವಿಧಿಸಲಾಗುತ್ತದೆ. ಇದು ಮಕ್ಕಳ ಚಿತ್ರಗಳನ್ನು ಪ್ರಕಟಿಸುವ ಹೆತ್ತವರಿಗೂ ಅನ್ವಯಿಸುತ್ತದೆ.
ಕೃಪೆ: www.hindustantimes.com