ಬಕ್ರೀದ್‌ನಂದು ಬಾಂಗ್ಲಾದಲ್ಲಿ ಹರಿದ ರಕ್ತದ ನದಿ!: ಅಸಲಿಯೇ? ನಕಲಿಯೇ?
ಹೊಸದಿಲ್ಲಿ,ಸೆಪ್ಟಂಬರ್ 16: ಬಕ್ರೀದ್‌ನಂದು ಢಾಕದ ಬೀದಿಗಳಲ್ಲಿ ಬಕ್ರೀದ್‌ಗೆ ಸಂಬಂಧಿಸಿದ ಬಲಿಪ್ರಾಣಿಗಳ ರಕ್ತ ತೊರೆಯಾಗಿ ಹರಿದಿದೆ ಎಂದು ಚಿತ್ರಸಹಿತ ವರದಿ ಕಳೆದ ಎರಡು ಮೂರುದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ರಾಷ್ಟ್ರೀಯಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದು ಇದು ಈಗ ಅಸಲಿಯೇ ಅಥವಾ ನಕಲಿಯೇ ಎಂಬ ಪ್ರಶ್ನೆ ತಲೆದೋರಿದೆ.
ನಕಲಿ ಫೋಟೊಗಳನ್ನು ಫೋಟೊ ಶಾಪ್ ಕೈಚಳಕದಲ್ಲಿ ಸೃಷ್ಟಿಸಲಾಗಿದ್ದು, ಮಾಧ್ಯಮಗಳು ಫೋಟೊಗಳ ಸಾಚಾತನವನ್ನು ಪರಿಶೀಲಿಸದೆಯೇ ಬಲಿಪ್ರಾಣಿಗಳಿಂದ ಢಾಕದ ಬೀದಿಗಳಲ್ಲಿ ರಕ್ತದ ನದಿಯೇ ಹರಿದಿವೆ ಎಂಬಂತೆ ಬಿಂಬಿಸಿ ವರದಿ ಪ್ರಕಟಿಸಿದ್ದವು ಎಂದು ಕೇರಳದ ಮಾಧ್ಯಮಂ ಸಹಿತ ಕೆಲವು ರಾಷ್ಟ್ರೀಯ ಮಾಧ್ಯಮಗಳು ಕೂಡಾ ಓದುಗರಿಗೆ ಸ್ಪಷ್ಟಪಡಿಸಿವೆ. ಆದರೆ,ಈ ಫೋಟೊಗಳು ಪ್ರಥಮ ನೋಟದಲ್ಲಿ ಫೋಟೊಶಾಪ್ ಕೈಚಳಕದಿಂದ ಕೃತಕವಾಗಿ ಸೃಷ್ಟಿಸಿರುವ ಫೋಟೊಗಳಂತೆ ಕಂಡು ಬರುತ್ತಿದ್ದರೂ ಅವುಗಳು ನೈಜ ಫೋಟೊಗಳೇ ಆಗಿವೆ ಎಂದು ಇಂಡಿಯ ಟುಡೆಯಂತಹ ಕೆಲವು ಮಾಧ್ಯಮಗಳು ಈಗಲೂ ವಾದಿಸುತ್ತಿವೆ ಎಂದು ವರದಿಯೊಂದು ತಿಳಿಸಿದೆ.