ಸೌಮ್ಯಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ‘ಘೋರ ತಪ್ಪು’ ಮಾಡಿದೆ: ನ್ಯಾ.ಕಾಟ್ಜು

Update: 2016-09-16 14:23 GMT

ತಿರುವನಂತಪುರ,ಸೆ.16: ಸೌಮ್ಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಆರೋಪಿ ಗೋವಿಂದಚಾಮಿಯ ಮರಣ ದಂಡನೆಯನ್ನು ಜೀವಾವಧಿ ಶಿಕ್ಷೆಗೆ ತಗ್ಗಿಸುವ ಮೂಲಕ ಸರ್ವೋಚ್ಚ ನ್ಯಾಯಾಲಯವು ಕಾನೂನಿನ ಘೋರ ತಪ್ಪನ್ನು ಮಾಡಿದೆ ಎಂದು ಶ್ರೇಷ್ಠ ನ್ಯಾಯಾಲಯದ ಮಾಜಿ ನ್ಯಾಯಾಧೀಶ ಮಾರ್ಕಂಡೇಯ ಕಾಟ್ಜು ಅವರು ಶುಕ್ರವಾರ ಫೇಸ್‌ಬುಕ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಕೊಲೆಯನ್ನು ವ್ಯಾಖ್ಯಾನಿಸುವ ಐಪಿಸಿ ಕಲಂ 300 ಅನ್ನು ನ್ಯಾಯಾಲಯವು ಕಡಗಣಿಸಿದೆ. ಈ ಕಲಂ ನಾಲ್ಕು ಭಾಗಗಳನ್ನು ಹೊಂದಿದ್ದು, ಮೊದಲ ಭಾಗವು ಕೊಲೆಯನ್ನು ಮಾಡಲು ಉದ್ದೇಶವನ್ನು ಅಗತ್ಯವಾಗಿಸಿದೆ. ಆದರೆ ಇತರ ಮೂರು ಭಾಗಗಳಲ್ಲಿ ಯಾವುದೇ ಒಂದು ರುಜುವಾತಾದರೂ ಕೊಲ್ಲುವ ಉದ್ದೇಶವಿಲ್ಲದಿದ್ದರೂ ಅದು ಕೊಲೆ ಎಂದೆನಿಸಿಕೊಳ್ಳುತ್ತದೆ ಎಂದು ಪತ್ರಿಕಾಮಂಡಲಿಯ ಮಾಜಿ ಅಧ್ಯಕ್ಷರೂ ಆಗಿರುವ ಕಾಟ್ಜು ಹೇಳಿದ್ದಾರೆ.

ನ್ಯಾಯಾಲಯವು ಕಲಂ 300 ಅನ್ನು ಸಂಪೂರ್ಣವಾಗಿ ಓದದಿರುವುದು ವಿಷಾದನೀಯ ಎಂದಿರುವ ಅವರು, ಈ ತೀರ್ಪನ್ನು ಬಹಿರಂಗ ವಿಚಾರಣೆಯಲ್ಲಿ ಪುನರ್‌ಪರಿಶೀಲಿಸುವ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

2011,ಫೆ.1ರಂದು ಚಲಿಸುತ್ತಿದ್ದ ರೈಲಿನಲ್ಲಿ ಸೌಮ್ಯಾಳ ಮೇಲೆ ಅತ್ಯಾಚಾರವೆಸಗಿದ್ದಕ್ಕಾಗಿ ಗೋವಿಂದಚಾಮಿಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಗುರುವಾರ ಎತ್ತಿ ಹಿಡಿದಿದ್ದ ಸರ್ವೋಚ್ಚ ನ್ಯಾಯಾಲಯವು ಮರಣ ದಂಡನೆಯನ್ನು ರದ್ದುಗೊಳಿಸಿತ್ತು. ತೃಶೂರಿನ ತ್ವರಿತ ನ್ಯಾಯಾಲಯವು ವಿಧಿಸಿದ್ದ ಮರಣ ದಂಡನೆಯನ್ನು ಬಳಿಕ ಕೇರಳ ಉಚ್ಚ ನ್ಯಾಯಾಲಯವು ಎತ್ತಿ ಹಿಡಿದಿತ್ತು.

ಆರೋಪಿಗೆ ಸೌಮ್ಯಾಳನ್ನು ಕೊಲೆ ಮಾಡುವ ಉದ್ದೇಶವಿತ್ತು ಎನ್ನುವುದು ಸಾಬೀತಾಗಿಲ್ಲ ಎಂದು ನಿನ್ನೆ ತೀರ್ಪಿನಲ್ಲಿ ಹೇಳಿದ್ದ ಸರ್ವೋಚ್ಚ ನ್ಯಾಯಾಲಯವು ಆತನ ಮರಣ ದಂಡನೆಯನ್ನು ರದ್ದುಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News