ದನ ಮೇಯಿಸಿ ದಿನ ದೂಡುತ್ತಿರುವ ಕ್ರಿಕೆಟ್ ವಿಶ್ವಕಪ್ ಹೀರೊ !
ಕ್ರಿಕೆಟಿಗರು ಕೋಟಿ ಕೋಟಿ ಹಣ, ಹೆಸರು ಗಳಿಸಿ ಮೆರೆಯುವ ನಮ್ಮ ದೇಶದಲ್ಲಿ ಅತ್ಯಂತ ಪ್ರತಿಭಾವಂತ ಅಂಧ ಕ್ರಿಕೆಟಿಗನೊಬ್ಬನ ಇಂದಿನ ಪರಿಸ್ಥಿತಿ ನಾವು ನಮ್ಮ ಕ್ರೀಡಾಳುಗಳನ್ನು ಹೇಗೆ ನೋಡಿಕೊಳ್ಳುತ್ತೇವೆ ಎಂಬುದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ. ರಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ನಮ್ಮ ದೇಶದ ವಿಶೇಷ ಕ್ರೀಡಾಪಟುಗಳು ಪದಕಗಳನ್ನು ಗಳಿಸಿ ದೇಶದ ಕೀರ್ತಿ ಬೆಳಗುತ್ತಿರುವಾಗಲೇ ವಿಶ್ವ ಕಪ್ ನಲ್ಲಿ ಭಾರತದ ಹೆಗ್ಗಳಿಕೆಯಾಗಿದ್ದ ಪ್ರತಿಭೆಯೊಂದು ಅಕ್ಷರಶ: ಬೀದಿ ಪಾಲಾಗಿರುವ ದುರಂತ ನಮ್ಮ ಮುಂದಿದೆ.
1998 ರಲ್ಲಿ ನಡೆದ ಅಂಧರ ಕ್ರಿಕೆಟ್ ವಿಶ್ವಕಪ್ ನಲ್ಲಿ ಭಾರತ ತಂಡದಲ್ಲಿದ್ದ ಬಾಲಾಜಿ ದಾಮೋರ್ ಅವರು ತಮ್ಮ ಸರ್ವಾಂಗೀಣ ಪ್ರದರ್ಶನದ ಮೂಲಕ ವ್ಯಾಪಕ ಮೆಚ್ಚುಗೆ ಗಳಿಸಿದ್ದರು. ಎಲ್ಲರ ಹುಬ್ಬೇರುವಂತೆ ದಾಖಲೆಗಳನ್ನೇ ಮಾಡಿದ ಬಾಲಾಜಿ 25 ಪಂದ್ಯಗಳಲ್ಲಿ 3,125 ರನ್ ಗಳಿಸಿ, 150 ವಿಕೆಟ್ ಪಡೆದು ವಿಶಿಷ್ಟ ಸಾಧನೆ ಮಾಡಿದ್ದರು. ಗುಜರಾತ್ ಕೃಷಿ ಕುಟುಂಬದಿಂದ ಬಂದ ಬಾಲಾಜಿ ಸಂಪೂರ್ಣ ಅಂಧರಾಗಿದ್ದಾರೆ.
ಆದರೆ ಅವರ ಅಷ್ಟು ದೊಡ್ಡ ಸಾಧನೆ ಅವರಿಗೆ ಯಾವುದೇ ನೆರವಿಗೆ ಬಂದಿಲ್ಲ. ದೇಶ ಅವರನ್ನು ಅಂದೇ ಮರೆತಿದೆ. ಈಗ ಜೀವನೋಪಾಯಕ್ಕಾಗಿ ಬಾಲಾಜಿ ದನ ಮೇಯಿಸುವ ಕೆಲಸ ಮಾಡುತ್ತಿದ್ದಾರೆ. ಒಂದು ಕೋಣೆಯ ಪುಟ್ಟ ಮನೆಯೊಂದರಲ್ಲಿ ತಮ್ಮ ಪತ್ನಿ ಹಾಗು ಮಕ್ಕಳೊಂದಿಗೆ ವಾಸವಾಗಿರುವ ಬಾಲಾಜಿಗೆ ತಮ್ಮ ಕೆಲಸದಲ್ಲಿ ಪತ್ನಿಯೂ ಸಾಥ್ ನೀಡುತ್ತಿದ್ದಾರೆ.
ರಿಯೋ ಪ್ಯಾರಾಲಿಂಪಿಕ್ ನಲ್ಲಿ ಪದಕ ಗೆಲ್ಲುತ್ತಿರುವ ವಿಶೇಷ ಕ್ರೀಡಾಪಟುಗಳಿಗೆ ಭಾರತ ಇತರ ಕ್ರೀಡಾ ತಾರೆಗಳಿಗೆ ನೀಡಿದಂತೆಯೇ ದೊಡ್ಡ ಮೊತ್ತ , ಉಡುಗೊರೆ ಇತ್ಯಾದಿ ನೀಡುತ್ತದೆಯೇ ಎಂಬ ಪ್ರಶ್ನೆ ಇತ್ತೀಚಿಗೆ ಎದ್ದಿತ್ತು. ಬಾಲಾಜಿಯ ಪರಿಸ್ಥಿತಿ ನೋಡಿದರೆ ಆ ಪ್ರಶ್ನೆಗೆ ಯಾವ ಉತ್ತರ ಸಿಗಲಿದೆ ಎಂದು ಹೇಳುವುದು ಕಷ್ಟ.
Courtesy : abplive.in