×
Ad

ಇಂದಿನಿಂದ ಹುಬ್ಬಳ್ಳಿಯಲ್ಲಿ ಐದನೆ ಆವೃತ್ತಿಯ ಕೆಪಿಎಲ್

Update: 2016-09-16 23:43 IST

ಬೆಂಗಳೂರು, ಸೆ.16 ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ಆಶ್ರಯದಲ್ಲಿ ಐದನೆ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್‌ನ ಟ್ವೆಂಟಿ-20 ಟೂರ್ನಿಯ ಮೊದಲ ಹಂತದ ಪಂದ್ಯಗಳು ಶನಿವಾರ ಹುಬ್ಬಳ್ಳಿಯಲ್ಲಿ ಆರಂಭಗೊಳ್ಳಲಿದೆ. ಸೆ.17ರಂದು ಹುಬ್ಬಳ್ಳಿಯ ರಾಜ್‌ನಗರದ ಕೆಎಸ್‌ಸಿಎ ನಗರದಲ್ಲಿ ಮೊದಲ ದಿನ ಮೂರು ಪಂದ್ಯಗಳು ನಿಗದಿಯಾಗಿದೆ. ಮೊದಲ ಪಂದ್ಯ ನಮ್ಮ ಶಿವಮೊಗ್ಗ ಮತ್ತು ಹುಬ್ಳಿ ಟೈಗರ್ಸ್‌ ತಂಡಗಳ ನಡುವೆ ನಡೆಯಲಿದೆ.
     ಎರಡನೆ ಪಂದ್ಯದಲ್ಲಿ ಮಾಜಿ ಚಾಂಪಿಯನ್‌ಮಂಗಳೂರು ಯುನೈಟೆಡ್ ತಂಡ ಮೈಸೂರು ವಾರಿಯರ್ಸ್‌ನ್ನು ಹಾಗೂ ಮೂರನೆ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬಿಜಾಪುರ ಬುಲ್ಸ್ ತಂಡ ಕಳೆದ ಆವೃತ್ತಿಯಲ್ಲಿ ಎರಡನೆ ಸ್ಥಾನ ಪಡೆದ ಬೆಳಗಾವಿ ಪ್ಯಾಂಥರ್ಸ್‌ ತಂಡವನ್ನು ಎದುರಿಸಲಿದೆ. ಮೊದಲ ಹಂತದಲ್ಲಿ 22ಪಂದ್ಯಗಳು ಹುಬ್ಬಳ್ಳಿಯಲ್ಲಿ ಸೆ.26ರ ತನಕ ಮತ್ತು ಎರಡನೆ ಹಂತದ ಪಂದ್ಯಗಳು ಮೈಸೂರಿನಲ್ಲಿ ಸೆ.28ರಿಂದ ಅ.2ರ ತನಕ ನಡೆಯಲಿದೆ.
  ಎರಡು ಸೆಮಿಫೈನಲ್ ಪಂದ್ಯಗಳು ಅ.1ರಂದು ಮತ್ತು ಫೈನಲ್ ಪಂದ್ಯ ಅ.2ರಂದು ಮೈಸೂರಿನಲ್ಲಿ ನಡೆಯಲಿದೆ.
 ಕಳೆದ ಎರಡು ಆವೃತ್ತಿಗಳಲ್ಲಿ ಎಂಟನೆ ಹಾಗೂ ಕೊನೆಯ ಸ್ಥಾನ ಪಡೆದ ಕಿಚ್ಚ ಸುದೀಪ್ ನಾಯಕತ್ವದ ರಾಕ್‌ಸ್ಟಾರ್ಸ್‌ ತಂಡದಲ್ಲಿ ಈ ವರ್ಷ ಸಾಕಷ್ಟು ಬದಲಾವಣೆಯಾಗಿದೆ. ಮೊದಲ ಬಾರಿ ಕೆಪಿಎಲ್ ಆವೃತ್ತಿಯಲ್ಲಿ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿತ್ತು. ಆರು ಮಂದಿ ಪೂರ್ಣಾವಧಿ ಕ್ರಿಕೆಟಿಗರನ್ನು ತಂಡಕ್ಕೆ ಸೇರಿಸಿಕೊಂಡಿತ್ತು. ಈ ಕಾರಣದಿಂದಾಗಿ ಇತರ ತಂಡಗಳಿಗೆ ಸವಾಲು ನೀಡುವುದನ್ನು ನಿರೀಕ್ಷಿಸಲಾಗಿದೆ.
 ಹುಬ್ಳಿ ಟೈಗರ್ಸ್‌ ತಂಡ ಈ ಬಾರಿ ಕೆಎಲ್ ರಾಹುಲ್ ಸೇವೆಯಿಂದ ವಂಚಿತಗೊಂಡಿದೆ. ನ್ಯೂಝಿಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಆಡಲಿರುವ ರಾಹುಲ್ ಅವರನ್ನು ಹುಬ್ಳಿ ತಂಡದಿಂದ ಬಿಡುಗಡೆ ಮಾಡಲಾಗಿದೆ. ಹುಬ್ಳಿ ತಂಡದಲ್ಲಿ ಹಲವು ಮಂದಿ ಅತ್ಯುತ್ತಮ ಆಟಗಾರರಿದ್ದಾರೆ. ಸಿಎಂ ಗೌತಮ್, ಭರತ್ ಚಿಪ್ಲಿ, ಕೆ.ಪಿ. ಪವನ್, ಕೆ.ಬಿ.ಪವನ್ ಮತ್ತು ಬಿ. ಅಖಿಲ್ ಇದ್ದಾರೆ. ಆಲ್‌ರೌಂಡರ್ ಸ್ಟುವರ್ಟ್ ಬಿನ್ನಿ ನಮ್ಮ ಶಿವಮೊಗ್ಗ ತಂಡ ಸೇರಿದ್ದಾರೆ. ವಿವಿಧ ತಂಡಗಳಲ್ಲಿ ಕರ್ನಾಟಕದ ರಣಜಿ ಆಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾನ ಪಡೆದಿದ್ದಾರೆ. ಕರ್ನಾಟಕ ರಣಜಿ ತಂಡದ ಹಲವು ಮಂದಿ ಆಟಗಾರರು ಭಾರತ ‘ಎ’ ತಂಡದಲ್ಲಿದ್ದಾರೆ. ಆಸ್ಟ್ರೇಲಿಯ ‘ಎ’ ವಿರುದ್ಧದ ಪಂದ್ಯದಲ್ಲಿ ಆಡುತ್ತಿರುವ ಹಿನ್ನೆಲೆಯಲ್ಲಿ ಮನೀಷ್ ಪಾಂಡೆ ಮತ್ತು ಕರುಣ್ ನಾಯರ್ ಆರಂಭಿಕ ಪಂದ್ಯಗಳಿಗೆ ಲಭ್ಯರಿಲ್ಲ. ಮುಂದಿನ ವಾರ ಅವರು ತಂಡಕ್ಕೆ ವಾಪಸಾಗಲಿದ್ದಾರೆ. ಮನೀಷ್ ಪಾಂಡೆ ಮೈಸೂರು ವಾರಿಯರ್ಸ್‌ ಮತ್ತು ಕರುಣ್ ನಾಯರ್ ಮಂಗಳೂರು ಯುನೈಟೆಡ್ ತಂಡದ ನಾಯಕರಾಗಿದ್ದಾರೆ.
     ಕೆಪಿಎಲ್ ಆಟಗಾರರ ಹರಾಜು ವೇಳೆ ನಾಲ್ವರು ಆಟಗಾರರು 3 ಲಕ್ಷ ರೂ.ಗಿಂತಲೂ ಅಧಿಕ ಮೊತ್ತಕ್ಕೆ ಹರಾಜಾಗಿದ್ದಾರೆ. ಕಳೆದ ಆವೃತ್ತಿಯಲ್ಲಿ ಗರಿಷ್ಠ ರನ್ ಆಟಗಾರರ ಪೈಕಿ ಎರಡನೆ ಸ್ಥಾನದಲ್ಲಿದ್ದ ಮಂಗಳೂರು ಯುನೈಟೆಡ್‌ನ ರಾಂಗ್ಸನ್ ಜೋನಾಥನ್ 3.5 ಲಕ್ಷ ರೂ.ಗೆ ಮೈಸೂರು ವಾರಿಯರ್ಸ್‌ ತಂಡದ ತೆಕ್ಕೆಗೆ ಸೇರ್ಪಡೆಗೊಂಡಿದ್ದಾರೆ. ವೈಶಾಕ್ ವಿಜಯ್‌ಕುಮಾರ್ 3.2 ಲಕ್ಷ ರೂ.ಗಳಿಗೆ ಮೈಸೂರು ವಾರಿಯರ್ಸ್‌ನಲ್ಲಿ ಸ್ಥಾನ ಪಡೆದಿದ್ದಾರೆ. ಗರಿಷ್ಠ ರನ್ ಗಳಿಸಿದ ಆಟಗಾರರ ಪೈಕಿ ಜೋನಾಥನ್ ಅವರ ಜೊತೆ ಎರಡನೆ ಸ್ಥಾನ ಹಂಚಿಕೊಂಡಿದ್ದ ಪ್ರತೀಕ್ ಜೈನ್ ಮತ್ತು ಕಳೆದ ಆವೃತ್ತಿಯಲ್ಲಿ ಬಿಜಾಪುರ ಬುಲ್ಸ್ ತಂಡವನ್ನು ಚಾಂಪಿಯನ್ ಆಗಿ ಮಾಡುವಲ್ಲಿ ದೊಡ್ಡ ಕೊಡುಗೆ ನೀಡಿದ್ದ ಸುನೀಲ್ ರಾಜು 3.35 ಲಕ್ಷ ರೂ. ಬಳ್ಳಾರಿ ಟಸ್ಕರ್ಸ್‌ ಸೇರ್ಪಡೆಗೊಂಡಿದ್ದಾರೆ.

ಕಳೆದ ಆವೃತ್ತಿಯಲ್ಲಿ ವಿವಿಧ ತಂಡಗಳು ಗಳಿಸಿದ ಸ್ಥಾನ
ಬಿಜಾಪುರ ಬುಲ್ಸ್-ಚಾಂಪಿಯನ್
ಹುಭ್ಳಿ ಟೈಗರ್ಸ್‌-ಎರಡನೆ ಸ್ಥಾನ
ಬೆಳಗಾವಿ ಪ್ಯಾಂಥರ್ಸ್‌- ಕ್ವಾಲಿಫೈಯರ್-2
ಮಂಗಳೂರು ಯುನೈಟೆಡ್ಸ್-ಎಲಿಮಿನೇಟರ್
ಬಳ್ಳಾರಿ ಟಸ್ಕರ್ಸ್‌-ಐದನೆ ಸ್ಥಾನ
ನಮ್ಮ ಶಿವಮೊಗ್ಗ -ಆರನೆ ಸ್ಥಾನ
ಮೈಸೂರು ವಾರಿಯರ್ಸ್‌-ಏಳನೆ ಸ್ಥಾನ
ರಾಕ್‌ಸ್ಟಾರ್ಸ್‌-ಎಂಟನೆ ಸ್ಥಾನ

ಇಂದಿನ ಪಂದ್ಯಗಳು 

*ನಮ್ಮ ಶಿವಮೊಗ್ಗ-ಹುಬ್ಳಿ ಟೈಗರ್ಸ್‌

ಸಮಯ: ಬೆಳಗ್ಗೆ 9:30

*ಮೈಸೂರು ವಾರಿಯರ್ಸ್‌-ಮಂಗಳೂರು ಯುನೈಟೆಡ್ಸ್
    
ಸಮಯ: ಮಧ್ಯಾಹ್ನ 1:30

*ಬಿಜಾಪುರ ಬುಲ್ಸ್-ಬೆಳಗಾವಿ ಪ್ಯಾಂಥರ್ಸ್‌

ಸಮಯ: ಸಂಜೆ 5:30

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News