×
Ad

ಕಾವೇರಿ ನೀರಿಗಾಗಿ ಮುಗ್ಧ ರಕ್ತದ ಹನಿಗಳು ತೊಟ್ಟಿಕ್ಕುತ್ತಿವೆ

Update: 2016-09-17 20:29 IST

ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೂತನ ಸಚಿವ ಸಂಪುಟದಿಂದ ನಮ್ಮ ರೆಬಲ್‌ಸ್ಟಾರ ಅಂಬರೀಷ್ ಅವರನ್ನು ಕೈಬಿಟ್ಟಾಗ, ಅದೇನೋ ಕಿತ್ತು ಗುಡ್ಡೆ ಹಾಕಿದವರ ಹಾಗೆ ಅವತ್ತು ಮುಖ ಊದಿಸಿಕೊಂಡಿದ್ದ ಅಂಬಿ, ಕಂಬಿ ಹಿಂದೆ ನಿಂತ ಖಳನಾಯಕನ ಒಂದೆರಡು ಉಡಾಫೆಯ ಸಿನೆಮಾ ಡೈಲಾಗು ಹೊಡೆದು, ಬೆಂಬಲಿಗರೆದುರಿಗೆ ಸೈ ಎನಿಸಿಕೊಂಡಿದ್ದರು. ಚದುರಂಗದ ನಾಯಕ, ರಾಜಕೀಯರಂಗದಲ್ಲಿ ಖಳನಾಯಕನ ಪಾತ್ರ ವಹಿಸಿಕೊಂಡಿದ್ದರು. ಸಿದ್ದರಾಮಯ್ಯನವರು ಇದ್ಯಾವುದಕ್ಕೂ ಸೊಪ್ಪು ಹಾಕದಿದ್ದಾಗ ಮುಖಭಂಗ ಮಾಡಿಕೊಂಡು ತಣ್ಣಗಾದರು.


         ಈಗ ಕಾವೇರಿ ನೀರಿನ ಹಂಚಿಕೆಯ ವಿವಾದ ಭುಗಿಲೆದಿದ್ದು, ಮಂಡ್ಯ, ಮೈಸೂರು, ಕೆ.ಆರ್.ನಗರ ಮತ್ತು ಇತರ ಜಿಲ್ಲೆಯ ಜನತೆ ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ನಮ್ಮ ಪಾಲಿನ ಜೀವನದಿ, ಕಾವೇರಿಯ ನೀರು ಪಕ್ಕದ ತಮಿಳುನಾಡಿಗೆ ಅವೈಜ್ಞಾನಿಕವಾಗಿ ಹರಿದು ನೀರು ಪೋಲಾಗುತ್ತಿರುವುದು ಸ್ಥಳೀರನ್ನು ಹೆಚ್ಚು ಕಂಗೆಡಿಸಿದೆ. ತಮಿಳುನಾಡಿಗೆ ದಿನಕ್ಕೆ 15 ಟಿಎಂಸಿ ನೀರು ಬಿಟ್ಟರೆ, ಕರ್ನಾಟಕ ರಾಜ್ಯ 30.47 ಟಿಎಂಸಿ ಕುಡಿಯುವ ನೀರಿನ ಕೊರತೆ ಅನುಭವಿಸಬೇಕಾಗುತ್ತದೆ. ಭಾವುಕತೆಯ ಪಸೆಯಿಲ್ಲದ ಪೊಲೀಸರ ಲಾಟಿ,ಗುಂಡಿನೇಟಿಗೆ ಮುಗ್ಧ ರಕ್ತದ ಹನಿಗಳು ತೊಟ್ಟಿಕ್ಕುತ್ತಿವೆ. ನೀರಿಲ್ಲದ ಬೇಸಿಗೆಯ ದಿನಗಳ ನೆನೆದು ವರ್ತಮಾನ ಡೋಲಾಯಮಾನವಾಗಿದೆ.


        ಆದರೆ ಇದೇ ಚಳುವಳಿಗಾರರ ಮತ ಪಡೆದು ಕೇಂದ್ರ ಮಂತ್ರಿಯಾಗಿ ನಿನ್ನೆ-ಮೊನ್ನೆಯವರೆಗೂ ರಾಜ್ಯದ ವಸತಿ ಸಚಿವರಾಗಿ ವಿಜೃಂಭಿಸಿದ ಮಾಜಿ ಮಂತ್ರಿ ಹಾಲಿ ಶಾಸಕ ಅಂಬರೀಷ್ ಅವರು ‘ಗೊಂಬೆಯಾಡ್ಸವನು ಮ್ಯಾಲೆ ಕುಂತವನೆ, ನಂಗೆ ನಿನಗೆ ಯಾಕೆ ಟೆನ್ಸನ್ನು’ ಎಂದು ಈಗ ದೂರದ ಅಮೆರಿಕಾಗೆ ಹಾರಿ, ಅಲ್ಲಿಯ ‘ಅಕ್ಕ’ ಸಮ್ಮೇಳನದಲ್ಲಿ ಮದಿರೆಯ ಬಟ್ಟಲು ಹಿಡಿದು, ಮಂಡ್ಯ, ಕನ್ನಡ , ಕಾವೇರಿಗೂ ನನಗೂ ಸಂಬಂಧವೇ ಇಲ್ಲವೆನ್ನುವಂತೆ ಮಾನನಿಯರ ಜೊತೆ ಬೇಜವಾಬ್ದಾರಿಯ ಹೆಜ್ಜೆ ಹಾಕುತ್ತಿದ್ದಾರೆ. ಅವರಿಗೆ ಸಂಕಷ್ಟದಲ್ಲಿರುವ ತನ್ನ ಕ್ಷೇತ್ರದ ಜನತೆಗಿಂತ ಕ್ಯಾಬ್ರೆ ಡ್ಯಾನ್ಸ್ ಹೆಚ್ಚು ಆಪ್ತವೆನಿಸಿರಬೇಕು.


            ಯಾರೋ ಬರೆದ ಸ್ಕ್ರಿಪ್ಟ್‌ನ್ನು ಆವಾಹಿಸಿಕೊಂಡು ಹೇಳಿ ಅಭ್ಯಾಸವಿದ್ದ ಅಂಬಿ, ಸಿನೆಮಾ ತಂದು ಕೊಟ್ಟ ಜನಪ್ರಿಯತೆ ಎನ್ನುವ ಬಂಡವಾಳ ಹೂಡಿ, ರಾಜಕೀಯದ ಉಸಾಬರಿಗೆ ಶುರುಹಚ್ಚಿಕೊಂಡರು. ನಂಬಿದ ಜನ ಕೈಬಿಡಲಿಲ್ಲ. ರಾಜ್ಯ ವಿಧಾನ ಸಭೆಯಿಂದ ಹಿಡಿದು ಸಂಸತ್ತಿನವರೆಗೂ ಇದೇ ಚಳುವಳಿಗಾರರಿಂದ ಆಯ್ಕೆಯಾಗಿಹೋದ ಅಂಬರೀಷ್ ತನ್ನ ನಾಡಿಗಾಗಿ, ತಾನು ಪ್ರತಿನಿಧಿಸುವ ಕ್ಷೇತ್ರಕ್ಕಾಗಿ ಜವಾಬ್ದಾರಿಯುತವಾಗಿ ವರ್ತಿಸಿದ ಒಂದೇ ಒಂದು ನಿದರ್ಶನವಿಲ್ಲ. ನಾವು ಎಂತಹ ಬೇಜವಾಬ್ದಾರಿ ಹೈದಂಗೆ ಮತ ನೀಡಿದೆವಲ್ಲ ಎಂದು ಈಗ ಜನರನ್ನು ಕೀಳಿರಿಮೆ ಬೇಟೆಯಾಡುತ್ತಿದೆ.


       ಕಾವೇರಿ,ಮಹಾದಾಯಿ ವಿವಾದ ಭುಗುಲೆದ್ದು, ರಾಜ್ಯದ ಜನರು ಇಷ್ಟು ದಿನ ಹಿಡಿದಿಟ್ಟ ತಾಳ್ಮೆ ಈಗ ಸ್ಪೋಟಿಸಿದೆ. ಇದನ್ನೆ ನೆಪವಾಗಿಟ್ಟುಕೊಂಡು ಹಲವರು ರಾಜಕೀಯ ಲಾಭ ಪಡೆಯಲು ಹಪಹಪಿಸುತ್ತಿದ್ದಾರೆ. ಎತ್ತಿನ ಹೊಳೆ ಯೋಜನೆಯ ವಿರೋಧದ ಸಂಘಟನೆಗಳು ಹೋಮ-ಹವನ ಮಾಡಿಕೊಂಡಿವೆ. ಏನೇ ಆಗಲಿ, ಕೇಂದ್ರ ಸಚಿವರು, ಸಂಸದರು ಮತ್ತು ವಿರೋಧ ಪಕ್ಷದವರು ರಾಜಕೀಯ ಹಿತಾಶಕ್ತಿಯ ಹಿನ್ನಲೆಯಲ್ಲಿ ಆಲೋಚಿಸದೆ, ಮಾನವಿಯ ನೆಲೆಯಲ್ಲಿ ಆಲೋಚಿಸಬೇಕು. ಈ ಎಲ್ಲ ವಿವಾದಗಳು ಒಂದು ತಾರ್ಕಿಕ ಅಂತ್ಯೆ ಪಡೆದು, ಅದೆಂದು ದುಡಿಯುವ ಜನ ನೆಮ್ಮದಿಯ ನಿಟ್ಟಿಸಿರು ಬಿಡುವರೋ? ಕಾದು ನೋಡಬೇಕಿದೆ.
                                                  
     
         
   

Writer - ಕಳಕೇಶ್ ಗೊರವರ

contributor

Editor - ಕಳಕೇಶ್ ಗೊರವರ

contributor

Similar News