ಒವರ್ ಟೇಕ್ ಮಾಡಲು ಸಾಧ್ಯವಾಗದ್ದಕ್ಕೆ ಆರ್ ಜೆ ಡಿ ಶಾಸಕನ ಮಗ ಸೇಡು ತೀರಿಸಿಕೊಂಡಿದ್ದು ಹೀಗೆ !

Update: 2016-09-17 17:12 GMT

ಪಾಟ್ನಾ,ಸೆ.17: ಆತ ಬಿಹಾರದ ಆರ್‌ಜೆಡಿ ಶಾಸಕ ವೀರೇಂದ್ರ ಸಿನ್ಹಾರ ಪುತ್ರ. ಶುಕ್ರವಾರ ತಡರಾತ್ರಿ ಔರಂಗಾಬಾದ್‌ನಲ್ಲಿ ಕಾರೊಂದನ್ನು ಓವರ್‌ಟೇಕ್ ಮಾಡಲು ಯತ್ನಿಸಿದ್ದ ಮರಿ ಸಿನ್ಹಾ ಅದು ಸಾಧ್ಯವಾಗದಿದ್ದಾಗ ಆ ಕಾರಿನ ಚಾಲಕನನ್ನೇ ಚೂರಿಯಿಂದ ಇರಿದಿದ್ದಾನೆ. ಈ ಘಟನೆ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗುವ ಜೊತೆಗೆ ಬಿಹಾರದಲ್ಲಿ ಅಪರಾಧ ಕೃತ್ಯಗಳು ಹೆಚ್ಚುತ್ತಿರುವ ಕಡೆ ಗಮನವನ್ನು ಸೆಳೆದಿದೆ. ತನ್ನ ತಂದೆ ಶಾಸಕರಾಗಿರುವುದರಿಂದ ತನ್ನ ಆದೇಶವನ್ನು ನಾನು ಪಾಲಿಸಬೇಕೆಂದು ಆತ ಬಯಸಿದ್ದ. ಆದರೆ ನಾನು ನಿರಾಕರಿಸಿದಾಗ ಚೂರಿಯಿಂದ ಇರಿದ ಎಂದು ಆಸ್ಪತ್ರೆಗೆ ದಾಖಲಾಗಿರುವ ಗಾಯಾಳು ಪಿಂಕು ಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾನೆ.ನಾಲ್ಕು ತಿಂಗಳ ಹಿಂದೆ ಗಯಾದಲ್ಲಿ ಜೆಡಿಯು ಶಾಸಕನ ಪುತ್ರ ಓವರ್‌ಟೇಕ್ ವಿವಾದದಲ್ಲಿ 18ರ ಹರೆಯದ ಯುವಕನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದ. ಬಿಹಾರದಲ್ಲಿ ಜೆಡಿಯು-ಆರ್‌ಜೆಡಿ ಸಮ್ಮಿಶ್ರ ಸರಕಾರವಿದೆ.ತನ್ನ ಮಗನ ಮೇಲಿನ ಆರೋಪವನ್ನು ನಿರಾಕರಿಸಿರುವ ಶಾಸಕ ಸಿನ್ಹಾ, ಗಾಯಗೊಂಡಿರುವ ವ್ಯಕ್ತಿ ಓರ್ವ ಕ್ರಿಮಿನಲ್ ಆಗಿದ್ದು ಕೊಲೆ ಮಾಡುವ ಸಂಭಾವ್ಯ ಉದ್ದೇಶದಿಂದ ತನ್ನ ಮಗನನ್ನು ಅಪಹರಿಸಲು ಯತ್ನಿಸಿದ್ದ. ತನ್ನ ಮಗ ಆತನಿಗೆ ಇರಿದೇ ಇಲ್ಲ. ಅಲ್ಲಿದ್ದ ಜನರನ್ನು ಪ್ರಶ್ನಿಸಿ ಇದನ್ನು ಖಚಿತಪಡಿಸಿಕೊಳ್ಳಬಹುದು ಎಂದು ಹೇಳಿದ್ದಾರೆ.ಈ ಘಟನೆಯು ಸರಕಾರಕ್ಕೆ ಮುಜುಗರವುಂಟು ಮಾಡುವ ಜೊತೆಗೆ ಮುಖ್ಯಮಂತ್ರಿ ನಿತೀಶ ಕುಮಾರ ಅವರು ಕಾನೂನು-ಸುವ್ಯವಸ್ಥೆಯ ಮೇಲಿನ ಹಿಡಿತ ಕಳೆದುಕೊಂಡಿದ್ದಾರೆ ಎಂದು ಆರೋಪಿಸುತ್ತಿರುವ ಪ್ರತಿಪಕ್ಷಗಳಿಗೆ ಇನ್ನಷ್ಟು ಉತ್ತೇಜನ ನೀಡಬಹುದು. ಅಲ್ಲದೆ ಜೆಡಿಯು ಮತ್ತು ಆರ್‌ಜೆಡಿ ನಡುವಿನ ಭಿನ್ನಾಭಿಪ್ರಾಯಗಳನ್ನು ಇನ್ನಷ್ಟು ಹೆಚ್ಚಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News