ಪುಣೆಯ ಪ್ರಿಯೇಶಾಗೆ ಕಂಚಿನ ಪದಕ
ಪುಣೆ, ಸೆ.17: ಕಿವುಡ ಶೂಟರ್ ಪ್ರಿಯೇಶಾ ದೇಶ್‌ಮುಖ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚೊಚ್ಚಲ ಪದಕವನ್ನು ಜಯಿಸಿ ಗಮನ ಸೆಳೆದಿದ್ದಾರೆ.
ಬುಧವಾರ ರಶ್ಯದ ಕಝಾನ್‌ನಲ್ಲಿ ನಡೆದ ಮೊದಲ ಆವೃತ್ತಿಯ ವಿಶ್ವ ಕಿವುಡರ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ 10 ಮೀ. ಏರ್ ರೈಫಲ್ ಶೂಟಿಂಗ್ ವಿಭಾಗದಲ್ಲಿ ಒಟ್ಟು 180.4 ಅಂಕವನ್ನು ಗಳಿಸಿದ ಪ್ರಿಯೇಶಾ ಮೂರನೆ ಸ್ಥಾನ ಪಡೆದು ಕಂಚಿನ ಪದಕ ಗೆದ್ದುಕೊಂಡರು. ಪುಣೆಯ ಯುವತಿ ಪ್ರಿಯೇಶಾ ಚೊಚ್ಚಲ ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಭಾಗವಹಿಸಿದ್ದು, ವಿದೇಶಕ್ಕೆ ಮೊದಲ ಬಾರಿ ತೆರಳಿದ್ದರು.
ಕೇವಲ ಮೂರು ವರ್ಷಗಳ ಹಿಂದೆ ಶೂಟಿಂಗ್‌ನಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ಪ್ರಿಯೇಶಾಗೆ ಇದು ಮಹತ್ವದ ಸಾಧನೆಯಾಗಿದೆ.
‘‘ಪದಕ ಪ್ರಿಯೇಶಾಗೆ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಈ ಟೂರ್ನಿಗಾಗಿ ಆಕೆ ಕಠಿಣ ಶ್ರಮಪಟ್ಟಿದ್ದಳು. ಕಳೆದ 3 ವರ್ಷದಲ್ಲಿ ವಿಕಲಚೇತನ ವಿಭಾಗದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಚಿನ್ನ ಜಯಿಸಿದ್ದು, ಇದೀಗ ಮೊದಲ ಬಾರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದುಕೊಂಡಿರುವುದು ದೊಡ್ಡ ಸಾಧನೆ’’ ಎಂದು ಪ್ರಿಯೇಶಾರ ತಂದೆ ಶರದ್‌ರಾವ್ ಹೇಳಿದ್ದಾರೆ