ನೌಕಾಪಡೆಯ ಅತ್ಯಾಧುನಿಕ ಕ್ಷಿಪಣಿ ನಾಶಕ ಸಮರ ನೌಕೆ ಮೊರ್ಮ್‌ಗಾವ್ ಅನಾವರಣ

Update: 2016-09-17 18:19 GMT

ಮುಂಬೈ, ಸೆ.17: ಹೈಟೆಕ್ ಕ್ಷಿಪಣಿಗಳ ತಂಡದೊಂದಿಗೆ ಸಜ್ಜಾಗಿರುವ ಸ್ವದೇಶಿ ನಿರ್ಮಿತ ಯುದ್ಧ ಹಡಗೊಂದು ಇಂದು ಉದ್ಘಾಟನೆಗೊಂಡಿದೆ. ಈ ಕ್ಷಿಪಣಿ ನಾಶಕ ನೌಕೆಯನ್ನು ವಿಶ್ವದ ಅತ್ಯುತ್ತಮ ನೌಕೆಗಳೊಂದಿಗೆ ಹೋಲಿಸಬಹುದೆಂದು ಜಲಸೇನೆಯ ದಂಡನಾಯಕ ಎಡ್ಮಿರಲ್ ಸುನೀಲ್ ಲಾಂಬಾ ಹೇಳಿದ್ದಾರೆ.

‘ಮೊರ್ಮ್‌ಗಾವ್’ ಎಂದು ಹೆಸರಿಸ ಲಾಗಿರುವ ಈ ಸಮರ ನೌಕೆಯನ್ನು ಸರಕಾರಿ ಸ್ವಾಮ್ಯದ ಮಝಗಾಂವ್ ಡಾಕ್ ಶಿಪ್ ಬಿಲ್ಡರ್ಸ್ ಲಿ.(ಎಂಡಿಎಲ್) ನಿರ್ಮಿಸಿದ್ದು, ಪ್ರಾಜೆಕ್ಟ್ 15 ಬಿಯನ್ವಯ ನಿರ್ಮಿಸಲಾಗುತ್ತಿರುವ ವಿಶಾಖಪಟ್ಟಣಂ ಹಡಗುಗಳ ದರ್ಜೆಗೆ ಸೇರಿದೆ. 2020-2024ರ ನಡುವೆ ಎಂಎಎಲ್ ಇನ್ನೂ 4 ಇಂತಹ ಹಡಗುಗಳನ್ನು ನಿರ್ಮಿಸಿಕೊಡಲಿದೆ. ವಿಶಾಖಪಟ್ಟಣಂ ದರ್ಜೆಯ ಮೊದಲ ಹಡಗು 2015ರ ಎ.20ರಂದು ಚಾಲನೆಗೊಂಡಿತ್ತು.

‘ಮೊರ್ಮ್‌ಗಾವ್’ 7,300 ಟನ್ ಭಾರವಿದ್ದು, ಗರಿಷ್ಠ 30 ನಾಟ್‌ಗೂ ಹೆಚ್ಚು ವೇಗದಿಂದ ಚಲಿಸುತ್ತದೆ. ಈ ಯುದ್ಧ ಹಡಗು ನೆಲದಿಂದ ನೆಲಕ್ಕೆ, ನೆಲದಿಂದ ಆಕಾಶಕ್ಕೆ ನೆಗೆಯುವ ಕ್ಷಿಪಣಿಗಳು ಹಾಗೂ ಜಲಾಂತರ್ಗಾಮಿ ನಿರೋಧಕ ರಾಕೆಟ್ ಉಡಾವಕಗಳಿಂದ ಸಜ್ಜುಗೊಂಡಿದೆ. ಅದು 2 ಜಲಾಂತರ್ಗಾಮಿ ಯುದ್ಧ ವಿರೋಧಿ ಹೆಲಿಕಾಪ್ಟರ್‌ಗಳನ್ನು ಒಯ್ಯುವ ಸಾಮರ್ಥ್ಯ ಪಡೆದಿದೆ. ಈ ಹಡಗು ಸ್ವದೇಶಿ ನಿರ್ಮಿತವಾಗಿದ್ದು, ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆ ಪೂರಕವಾಗಿದೆಯೆಂದು ಲಾಂಬಾ ಹೇಳಿದರು.

ಸ್ಕಾರ್ಪಿನ್ ಸೋರಿಕೆ ನಡೆದಿದ್ದು ಫ್ರಾನ್ಸ್‌ನಲ್ಲಿ, ಪ್ರಾಥಮಿಕ ತನಿಖೆಯಲ್ಲಿ ಬಹಿರಂಗ: ಲಾಂಬಾ

ಮುಂಬೈ,ಸೆ.17: ಸ್ಕಾರ್ಪಿನ್ ಸಬ್‌ಮರೀನ್‌ನ ಮಾಹಿತಿಗಳ ಸೋರಿಕೆ ಭಾರತದ ಕಡೆಯಿಂದ ನಡೆದಿತ್ತೇ ಎಂಬ ಬಗ್ಗೆ ಉನ್ನತ ಮಟ್ಟದ ಸಮಿತಿಯೊಂದು ವಿಚಾರಣೆಯನ್ನು ನಡೆಸುತ್ತಿದ್ದು, ಸೋರಿಕೆ ನಡೆದಿದ್ದು ಫ್ರಾನ್ಸ್‌ನ ಡಿಸಿಎನ್‌ಎಸ್ ಕಂಪೆನಿಯ ಕಚೇರಿಯಲ್ಲಿಯೇ ಹೊರತು ಭಾರತದಲ್ಲಿ ಅಲ್ಲ ಎನ್ನುವುದನ್ನು ಪ್ರಾಥಮಿಕ ತನಿಖೆಗಳು ಬೆಟ್ಟು ಮಾಡಿವೆ ಎಂದು ನೌಕಾಪಡೆಯ ದಂಡನಾಯಕ ಅಡ್ಮಿರಲ್ ಸುನೀಲ್ ಲಾಂಬಾ ಶನಿವಾರ ಇಲ್ಲಿ ತಿಳಿಸಿದ್ದಾರೆ.

 ಭಾರತೀಯ ನೌಕಾಪಡೆಯ ನಿರ್ದೇಶಿತ ಕ್ಷಿಪಣಿ ವಿನಾಶಕ ‘ಮೊರ್ಮ್‌ಗಾವ್’ದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು, ಫ್ರಾನ್ಸ್‌ನಲ್ಲಿ ಡಿಸಿಎನ್‌ಎಸ್ ಮತ್ತು ಫ್ರೆಂಚ್ ಸರಕಾರಗಳೂ ಸೋರಿಕೆಯ ಬಗ್ಗೆ ತನಿಖೆ ನಡೆಸುತ್ತಿವೆ. ತನಿಖಾ ವರದಿಗಳನ್ನು ಆಧರಿಸಿ ಮುಂದಿನ ಕ್ರಮವನ್ನು ನಿರ್ಧರಿಸುತ್ತೇವೆ ಎಂದರು.

ಸ್ಕಾರ್ಪಿನ್ ಮಾಹಿತಿ ಸೋರಿಕೆಯಾಗಿರುವುದು ಗಂಭೀರ ಕಳವಳದ ವಿಷಯ ವಾಗಿದೆ ಎಂದ ಲಾಂಬಾ, ತನಿಖೆಯನ್ನು ತುರ್ತಾಗಿ ನಡೆಸುವಂತೆ ನಾವು ಡಿಸಿಎನ್‌ಎಸ್‌ಗೆ ಆಗ್ರಹಿಸಿದ್ದೇವೆ ಎಂದರು. ಈ ಹಿಂದೆ ರಕ್ಷಣಾ ಸಚಿವ ಮನೋಹರ ಪಾರಿಕ್ಕರ್, ‘ಅದೊಂದು ದೊಡ್ಡ ಚಿಂತೆಯ ವಿಷಯವಲ್ಲ’ ಎಂದು ಹೇಳುವ ಮೂಲಕ ಸ್ಕಾರ್ಪಿನ್ ಸೋರಿಕೆಯನ್ನು ಲಘುವಾಗಿ ಪರಿಗಣಿಸಿದ್ದರು.

ಭಾರತೀಯ ನೌಕಾಪಡೆಯು ಡಿಸಿಎನ್‌ಎಸ್ ಸಹಭಾಗಿತ್ವದಲ್ಲಿ ಮುಂಬೈಯಲ್ಲಿ ನಿರ್ಮಿಸುತ್ತಿರುವ ಆರು ಅತ್ಯಾಧುನಿಕ ಸಬ್‌ಮರೀನ್‌ಗಳ ಸಾಮರ್ಥ್ಯದ ಕುರಿತು ಪ್ರಮುಖ ಮಾಹಿತಿಗಳನ್ನೊಳಗೊಂಡ 22,000ಕ್ಕೂ ಅಧಿಕ ಪುಟಗಳು ಸೋರಿಕೆಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News