ತೆಲಂಗಾಣ: ಸರೋವರದಲ್ಲಿ ಮುಳುಗಿ ಐವರು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸಾವು
Update: 2016-09-17 23:54 IST
ವಾರಂಗಲ್, ಸೆ.17: ತೆಲಂಗಾಣದ ವಾರಂಗಲ್ ನಗರದ ಹೊರವಲಯದಲ್ಲಿರುವ ಧರ್ಮಸಾಗರ ಸರೋವರದಲ್ಲಿ ಶನಿವಾರ ಐವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮುಳುಗಿ ಸಾವನ್ನಪ್ಪಿದ್ದಾರೆ. ನಗರದ ವಾಗ್ದೇವಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಟೆಕ್(ಕಂಪ್ಯೂಟರ್ ಸೈನ್ಸ್) ವಿದ್ಯಾರ್ಥಿಗಳಾದ ಇವರೆಲ್ಲ ವಿಹಾರಕ್ಕಾಗಿ ತೆರಳಿದ್ದರು. ಪಿ.ಶ್ರಾವ್ಯಾ ರೆಡ್ಡಿ(19),ವಿನೂತನಾ(18),ಕೆ.ಶಿವಸಾಯಿ (19) ಮತ್ತು ಪಿ.ಶಿವಸಾಯಿ ಕೃಷ್ಣ(20) ಅವರ ಶವಗಳನ್ನು ನೀರಿನಿಂದ ಮೇಲಕ್ಕೆತ್ತಲಾಗಿದೆ. ಸಾಗರ್(19) ಎಂಬಾತನಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ತಾವೆಲ್ಲ ಸರೋವರದ ದಂಡೆಯ ಮೇಲೆ ನಿಂತುಕೊಂಡಿದ್ದಾಗ ಓರ್ವ ಕಾಲು ಜಾರಿ ನೀರಿಗೆ ಬಿದ್ದಿದ್ದು,ಆತನ ರಕ್ಷಣೆಗಾಗಿ ಇತರರೂ ಸರೋವರಕ್ಕೆ ಹಾರಿದ್ದರು ಎಂದು ದುರಂತದಲ್ಲಿ ಬದುಕುಳಿದಿರುವ ಇನ್ನೋರ್ವ ವಿದ್ಯಾರ್ಥಿನಿ ರಮ್ಯಾ ಪ್ರತ್ಯೂಷಾ ಪೊಲೀಸರಿಗೆ ತಿಳಿಸಿದ್ದಾಳೆ. ಈಕೆಯನ್ನು ಇನೋರ್ವ ವಿದ್ಯಾರ್ಥಿ ರಕ್ಷಿಸಿದ್ದ.