ಕ್ರೈಮಿಯದಲ್ಲಿ ರಶ್ಯ ನಡೆಸುವ ಚುನಾವಣೆಯನ್ನು ಮಾನ್ಯ ಮಾಡೆ: ಅಮೆರಿಕ
ವಾಶಿಂಗ್ಟನ್, ಸೆ. 17: ಕ್ರೈಮಿಯದಲ್ಲಿ ನಡೆಸಲು ಉದ್ದೇಶಿಸಲಾಗಿರುವ ರಶ್ಯದ ಸಂಸದೀಯ ಚುನಾವಣೆಯನ್ನು ಕಾನೂನುಬದ್ಧ ಎಂಬುದಾಗಿ ಅಮೆರಿಕ ಮಾನ್ಯ ಮಾಡುವುದಿಲ್ಲ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಶುಕ್ರವಾರ ಹೇಳಿದೆ. ‘‘ರಶ್ಯ ಆಕ್ರಮಿತ ಕ್ರೈಮಿಯದಲ್ಲಿ ಸೆಪ್ಟಂಬರ್ 18ರಂದು ನಡೆಸಲು ಉದ್ದೇಶಿಸಲಾಗಿರುವ ರಶ್ಯದ ಡೂಮ ಚುನಾವಣೆಯ ಫಲಿತಾಂಶವನ್ನು ಅಮೆರಿಕ ಮಾನ್ಯ ಮಾಡುವುದಿಲ್ಲ’’ ಎಂದು ವಿದೇಶಾಂಗ ಇಲಾಖೆಯ ವಕ್ತಾರ ಜಾನ್ ಕಿರ್ಬಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ. ಆಯಕಟ್ಟಿನ ಪರ್ಯಾಯ ದ್ವೀಪವನ್ನು ಯುಕ್ರೇನ್‌ನಿಂದ ವಶಪಡಿಸಿಕೊಂಡ ಎರಡೂವರೆ ವರ್ಷಗಳ ಬಳಿಕ ರಶ್ಯವು ಅಲ್ಲಿಂದ ರಶ್ಯದ ರಾಷ್ಟ್ರೀಯ ಸಂಸತ್ತಿಗೆ ಪ್ರತಿನಿಧಿಗಳನ್ನು ಆರಿಸಲು ಪ್ರಥಮ ಬಾರಿಗೆ ಚುನಾವಣೆ ನಡೆಸುತ್ತಿದೆ.
‘‘ಕ್ರೈಮಿಯದ ಬಗ್ಗೆ ನಮ್ಮ ನಿಲುವು ಸ್ಪಷ್ಟ: ಈ ಪರ್ಯಾಯ ದ್ವೀಪವು ಯುಕ್ರೇನ್‌ನ ಸಮಗ್ರ ಭಾಗವಾಗಿದೆ’’ ಎಂದು ಕಿರ್ಬಿ ತಿಳಿಸಿದರು.
‘‘ರಶ್ಯದ ವಿರುದ್ಧ ವಿಧಿಸಲಾಗಿರುವ ಕ್ರೈಮಿಯ ಸಂಬಂಧಿ ದಿಗ್ಬಂಧನೆಗಳು, ಕ್ರೈಮಿಯದ ನಿಯಂತ್ರಣವನ್ನು ರಶ್ಯ ಯುಕ್ರೇನ್‌ಗೆ ಮರಳಿಸುವವರೆಗೂ ಇರುತ್ತವೆ’’ ಎಂದರು.